Red Fort Blast Alert: ಕೆಂಪುಕೋಟೆ ಬ್ಲಾಸ್ಟ್ ಹಿನ್ನೆಲೆ ; ಬೆಳಗಾವಿ ಅಧಿವೇಶನಕ್ಕೆ ವಿಶೇಷ ಭದ್ರತೆ, ಮೂರು ಕಿಮೀ ವ್ಯಾಪ್ತಿಗೆ ನಿಷೇಧಾಜ್ಞೆ, ಪೊಲೀಸರ ಬಂದೋಬಸ್ತ್ 

01-12-25 01:08 pm       HK News Desk   ಕರ್ನಾಟಕ

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ಹಿನ್ನೆಲೆ 20 ದಿನಗಳ ಕಾಲ ಸುತ್ತಮುತ್ತಲಿನ ಮೂರು ಕಿಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ‌

ಬೆಳಗಾವಿ, ಡಿ.1: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ಹಿನ್ನೆಲೆ 20 ದಿನಗಳ ಕಾಲ ಸುತ್ತಮುತ್ತಲಿನ ಮೂರು ಕಿಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ‌

ದೆಹಲಿ ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣದಿಂದ ಎಚ್ಚತ್ತುಕೊಂಡ ಪೊಲೀಸರು ಸುವರ್ಣ ವಿಧಾನಸೌಧದ ಸುತ್ತಲೂ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಇದೇ ಡಿಸೆಂಬರ್ 8ರಿಂದ ಹತ್ತು ದಿನಗಳ ಅಧಿವೇಶನ  ನಡೆಯಲಿದ್ದು ಈ ಹಿನ್ನೆಲೆ ಬೆಳಗಾವಿ ಪೊಲೀಸ್ ಕಮೀಷನರ್ ಭೂಷಣ್ ಬೋರಸೆ ಡಿ.1ರಿಂದ ಡಿ.21ರ ಮಧ್ಯರಾತ್ರಿ 12 ಗಂಟೆ ವರೆಗೆ ನಿಷೇಧಾಜ್ಞೆ ವಿಧಿಸಿದ್ದಾರೆ.‌ 

ಇದೇ ಮೊದಲ ಬಾರಿಗೆ 3 ಕಿಲೋಮೀಟರ್ ವರೆಗೂ ನಿಷೇಧಾಜ್ಞೆ ವ್ಯಾಪ್ತಿ ವಿಸ್ತರಿಸಲಾಗಿದೆ. ದೆಹಲಿಯಲ್ಲಿ ಬಾಂಬ್ ಬ್ಲಾಸ್ಟ್ ಆಗಿದ್ದರಿಂದ ಹೆಚ್ಚಿನ ಬಂದೋಬಸ್ತ್ ಮಾಡಲಾಗುತ್ತಿದೆ. ಸುವರ್ಣ ವಿಧಾನಸೌಧ ಸುತ್ತಲೂ ಈ ಬಾರಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.‌ 2012ರಿಂದ 2024ರ ಚಳಿಗಾಲದ ಅಧಿವೇಶನ ವೇಳೆ 27 ಅಹಿತಕರ ಘಟನೆಗಳು ಪ್ರಕರಣ ದಾಖಲಾಗಿವೆ.‌ ಇದರಲ್ಲಿ 73 ಪೊಲೀಸ್ ಅಧಿಕಾರಿ, ಸಿಬ್ಬಂದಿ ಮತ್ತು 21 ಸಾರ್ವಜನಿಕರು ಗಾಯಗೊಂಡಿದ್ದಾರೆ. 6 ಲಕ್ಷ 23 ಸಾವಿರ ಮೌಲ್ಯದ ಸರ್ಕಾರಿ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಯಾಗಿದೆ. ಹೀಗಾಗಿ ಈ ಬಾರಿ ವಿಶೇಷ ಭದ್ರತೆ ನೀಡಲಾಗಿದೆ. ‌

ಹತ್ತು ದಿನಗಳ ಅಧಿವೇಶನ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದವರಿಗೆ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ.‌ ಒಂದೆಡೆ ಬಾಗಲಕೋಟ ಭಾಗದಲ್ಲಿ ಕಬ್ಬು, ಮೆಕ್ಕೆಜೋಳ ರೈತರ ಪ್ರತಿಭಟನೆ ನಡೆಯುತ್ತಿದ್ದು ಇದೇ ವೇಳೆ ಅಧಿವೇಶನ ಆಗುತ್ತಿರುವುದರಿಂದ ರೈತರು ಮುತ್ತಿಗೆ ಹಾಕುವ ಸಾಧ್ಯತೆ ಇದೆ.‌ ಈ ಕಾರಣದಿಂದಲೋ ಏನೋ ಸುವರ್ಣ ವಿಧಾನಸೌಧದ ಸುತ್ತ 5 ಜನಕ್ಕಿಂತ ಹೆಚ್ಚು ಜನರ ಗುಂಪು ಸೇರಲು ಅವಕಾಶವಿಲ್ಲ.‌ ಯಾವುದೇ ಆಯುಧ, ಮಾರಕಾಸ್ತ್ರ, ಬಡಿಗೆ ಒಯ್ಯಲು ಅವಕಾಶವಿಲ್ಲ. ಮೂರು ಕಿಮೀ ದೂರದಿಂದಲೇ ಗುಂಪನ್ನು ತಡೆಯಲು ಪೊಲೀಸರನ್ನು ಹಾಕಲಾಗುತ್ತಿದೆ. 

ಇದಲ್ಲದೆ, ಪೊಲೀಸ್ ಅನುಮತಿ ಇಲ್ಲದೇ ಖಾಸಗಿ ವ್ಯಕ್ತಿಗಳು ಡ್ರೋಣ್ ಹಾರಿಸಲು ಅನುಮತಿ ಇಲ್ಲ.‌ ಸುವರ್ಣ ವಿಧಾನಸೌಧದ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆಗೆ ಅವಕಾಶವಿಲ್ಲ. ಹೀಗೆ 10 ಅಂಶಗಳ ಷರತ್ತು ವಿಧಿಸಿ ನಿಷೇಧಾಜ್ಞೆ  ಜಾರಿಗೊಳಿಸಲಾಗಿದೆ.

Ahead of the winter session at the Suvarna Vidhana Soudha in Belagavi, authorities have imposed prohibitory orders within a 3-kilometre radius for 20 days. The move comes as police tightened security following the recent Delhi Red Fort bomb blast incident.