ಸದ್ಯಕ್ಕಿಲ್ಲ ಸಿಎಂ ಬದಲಾವಣೆ ! ರಾಜ್ಯದಿಂದ ಕೇಂದ್ರ ನಾಯಕರಿಗೆ ನೆಗೆಟಿವ್ ವರದಿ, ತಟಸ್ಥ ನಿಲುವಿಗೆ ಅಂಟಿಕೊಂಡ ಕಾಂಗ್ರೆಸ್ ಹೈಕಮಾಂಡ್ ; ಸಿಡಬ್ಲ್ಯುಸಿ ಸಭೆಗೆ ಸಿಎಂಗಷ್ಟೇ ಆಹ್ವಾನ 

25-12-25 08:00 pm       Bangalore Correspondent   ಕರ್ನಾಟಕ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಿಯೇ ಆಗುತ್ತೆ ಎಂದು ಡಿಕೆಶಿ ಪರ ಶಾಸಕರು ವಿಶ್ವಾಸದಲ್ಲಿದ್ದರೂ, ಹೈಕಮಾಂಡ್ ನಾಯಕರು ಸಿಎಂ ಬದಲಾಯಿಸಿ ಕೈಸುಟ್ಟುಕೊಳ್ಳುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದಂತಿದೆ.‌ ಇದಕ್ಕೆ ಸಾಕ್ಷಿ ಎನ್ನುವಂತೆ, ಡಿಕೆಶಿ ಎಷ್ಟೇ ಪ್ರಯತ್ನಿಸಿದರೂ ರಾಹುಲ್ ಗಾಂಧಿ ಭೇಟಿಗೆ ಸಿಗಲಿಲ್ಲ. ‌

ಬೆಂಗಳೂರು, ಡಿ.25 : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಿಯೇ ಆಗುತ್ತೆ ಎಂದು ಡಿಕೆಶಿ ಪರ ಶಾಸಕರು ವಿಶ್ವಾಸದಲ್ಲಿದ್ದರೂ, ಹೈಕಮಾಂಡ್ ನಾಯಕರು ಸಿಎಂ ಬದಲಾಯಿಸಿ ಕೈಸುಟ್ಟುಕೊಳ್ಳುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದಂತಿದೆ.‌ ಇದಕ್ಕೆ ಸಾಕ್ಷಿ ಎನ್ನುವಂತೆ, ಡಿಕೆಶಿ ಎಷ್ಟೇ ಪ್ರಯತ್ನಿಸಿದರೂ ರಾಹುಲ್ ಗಾಂಧಿ ಭೇಟಿಗೆ ಸಿಗಲಿಲ್ಲ. ‌ಇದಲ್ಲದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೂ ಗೊಂದಲ ನಾವು ಸೃಷ್ಟಿಸಿದ್ದಲ್ಲ, ನೀವೇ ಸರಿ ಮಾಡಿಕೊಳ್ಳಿ ಎಂದು ಹೇಳಿ ಅಂತರ ಕಾಯ್ದುಕೊಂಡಿದ್ದಾರೆ. ‌

ಹೀಗಾಗಿ ನಾಯಕತ್ವ ಬದಲಾವಣೆಗೆ ಎಷ್ಟೇ ಒತ್ತಡ ಹಾಕಿದರೂ, ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಲು ಹೈಕಮಾಂಡ್ ನಾಯಕರು ಹಿಂದು ಮುಂದು ನೋಡುತ್ತಿದ್ದಾರೆ. ಸಿಎಂ ಬದಲಾವಣೆಗೆ ಕೈ ಹಾಕಿದರೆ ಪಕ್ಷಕ್ಕೆ ನಷ್ಟವಾಗಲಿದೆ ಎಂಬ ವರದಿ ಹಿನ್ನೆಲೆಯಲ್ಲಿ ಹೈಕಮಾಂಡ್ ತಟಸ್ಥ ನೀತಿ ಅನುಸರಿಸುತ್ತಿದೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ. 

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಿಂಗಳ ಹಿಂದೆಯೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಜೊತೆಗೆ ಸಮಾಲೋಚನೆ ನಡೆಸಿದ್ದರು. ಆ ಬಗ್ಗೆ ಕೇಂದ್ರ ವರಿಷ್ಠರಿಗೆ ವರದಿಯನ್ನೂ ಕೊಟ್ಟಿದ್ದಾರೆ. ಆನಂತರ, ಸಿಎಂ ಬದಲಾವಣೆ ಖಚಿತ ಎಂದೇ ಡಿಕೆಶಿ ಬಣದಿಂದ ಮಾತುಗಳು ಬಂದಿದ್ದವು. ಆದರೆ ಹೈಕಮಾಂಡ್ ಕಡೆಯಿಂದ ಯಾವುದೇ ಮಾತುಗಳೂ ಬರಲಿಲ್ಲ. ಈಗಂತೂ ಖರ್ಗೆ ಸೈಲಂಟಾಗಿದ್ದು ಬೆಂಗಳೂರಿನ ನಿವಾಸದಲ್ಲೇ ಉಳಿದುಕೊಂಡಿದ್ದಾರೆ. 

ಇದೇ ವೇಳೆ, ರಾಹುಲ್ ಗಾಂಧಿ ಭೇಟಿಗೆ ಡಿಸಿಎಂ ಡಿಕೆಶಿ ಸಾಕಷ್ಟು ಪ್ರಯತ್ನಿಸಿದರೂ ಯಾವುದಕ್ಕೂ ಸ್ಪಂದಿಸದೆ ರಾಹುಲ್ ಮೌನವಾಗಿದ್ದಾರೆ. ಸಿಎಂ ಭೇಟಿಗೆ ಅವಕಾಶ ನೀಡಿದರೂ ಡಿಕೆಶಿ ವಿಚಾರದಲ್ಲಿ ರಾಹುಲ್ ಅಂತರ ಕಾಯ್ದುಕೊಂಡಿದ್ದು ತಟಸ್ಥ ನೀತಿಯ ಅರ್ಥವನ್ನು ಧ್ವನಿಸಿದೆ. ಇದರೊಂದಿಗೆ, ರಾಹುಲ್ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲವೆಂಬ ಸಂದೇಶ ರವಾನಿಸಿರುವುದು ಸ್ಪಷ್ಟ. ಪಕ್ಷದ ನೆಲೆ ಗಟ್ಟಿಯಾಗಿರುವ ಕರ್ನಾಟಕದಲ್ಲಿ ಅನಗತ್ಯವಾಗಿ ಗೊಂದಲ ಸೃಷ್ಟಿಸಿಕೊಳ್ಳುವುದು ಬೇಡವೆಂಬ ನಿರ್ಧಾರಕ್ಕೆ ಹೈಕಮಾಂಡ್ ಬಂದಿರುವಂತೆ ತೋರುತ್ತಿದೆ. 

ಇದೇ ವೇಳೆ, ಡಿ.26ರಂದು ದೆಹಲಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೆ ಕಾಂಗ್ರೆಸ್ ಆಡಳಿತ ಇರುವ ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗಿದೆ. ಇದರಂತೆ, ಸಿದ್ದರಾಮಯ್ಯ ದೆಹಲಿಗೆ ತೆರಳುವುದು ಮತ್ತು ಹೈಕಮಾಂಡ್ ನಾಯಕರ ಭೇಟಿ ಮಾಡುವುದು ಸ್ಪಷ್ಟವಾಗಿದೆ. ಸಿಡಬ್ಲ್ಯುಸಿ ಸಭೆಗೆ ರಾಜ್ಯದಿಂದ ಬಿಕೆ ಹರಿಪ್ರಸಾದ್ ಮತ್ತು ವೀರಪ್ಪ ಮೊಯ್ಲಿ ಸದಸ್ಯರಾಗಿದ್ದು ಅವರು ಬಿಟ್ಟರೆ ಬೇರೆ ಯಾರಿಗೂ ಆಹ್ವಾನ ಇಲ್ಲ. ಇತ್ತ ಡಿಕೆಶಿಗೆ ಆಹ್ವಾನ ನೀಡದಿರುವುದು ಮತ್ತು ಸಿಎಂ ಮಾತ್ರ ಸಭೆಗೆ ತೆರಳುತ್ತಿದ್ದಾರೆನ್ನುವುದು ನಾಯಕತ್ವ ಬದಲಾವಣೆ ಚರ್ಚೆಯ ನಡುವೆ ವಿಭಿನ್ನ ಅರ್ಥ ಕಲ್ಪಿಸಿದೆ.‌ ಇದೇ ಕಾರಣಕ್ಕೆ, ಸದ್ಯಕ್ಕೆ ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ ಎಂಬ ಸಂದೇಶವನ್ನು ಹೈಕಮಾಂಡ್ ನೀಡಿರುವುದು ಸ್ಪಷ್ಟವಾಗಿದೆ. 

ಈ ಹಿಂದೆಯೂ ದೆಹಲಿ ಮಟ್ಟದಲ್ಲಿ ರಾಹುಲ್‌ ಗಾಂಧಿ, ಕೆಸಿ ವೇಣುಗೋಪಾಲ್, ಸುರ್ಜೇವಾಲ ರಾಜ್ಯದ ವಿಚಾರಕ್ಕೆ ಸಿದ್ದರಾಮಯ್ಯ ಪರವಾಗಿಯೇ ನಿಲುವು ಹೊಂದಿದ್ದರು. ಆದರೆ ಡಿಕೆ ಶಿವಕುಮಾರ್ ತನ್ನ ಪರವಾಗಿ ಸೋನಿಯಾ ಮತ್ತು ಪ್ರಿಯಾಂಕ ಗಾಂಧಿ ಇದ್ದಾರೆಂಬ ವಿಶ್ವಾಸದಲ್ಲಿದ್ದರು. ಇದೇ ಕಾರಣಕ್ಕೆ ಎರಡೂವರೆ ವರ್ಷದ ಒಪ್ಪಂದ ಜಾರಿಗೊಳಿಸಲು ಡಿಕೆಶಿ ಪಟ್ಟು ಹಾಕಿದ್ದರು. ಆದರೆ ರಾಜ್ಯದ ಕಡೆಯಿಂದ ಭಿನ್ನ ರೀತಿಯ ವರದಿ ಹೋಗಿರುವುದರಿಂದ ಸಿಎಂ ಬದಲಾವಣೆ ಮಾಡಿ ಕೈಸುಟ್ಟುಕೊಳ್ಳುವುದು ಬೇಡ, ಈಗ ಹೇಗಿದೆಯೋ ಹಾಗೆಯೇ ಹೋಗಲಿ ಎಂಬ ನಿರ್ಧಾರಕ್ಕೆ ಕೇಂದ್ರ ನಾಯಕರು ಬಂದಿದ್ದಾರೆ.

Despite strong expectations from the DK Shivakumar camp about a leadership change in Karnataka, the Congress high command has decided not to replace Chief Minister Siddaramaiah at this stage. According to party insiders, reports from the state warned that a change of leadership could harm the party, prompting central leaders to adopt a neutral stance.