ಬಳ್ಳಾರಿ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ 25 ಲಕ್ಷ ನಗದು ಪರಿಹಾರ ; ವಸತಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಐಟಿ ಇಲಾಖೆಗೆ ದೂರು, ಎರಡು ಲಕ್ಷ ಮಾತ್ರ ನಗದು ಅನ್ವಯ ಆಗಲ್ವೇ ಎಂದು ಪ್ರಶ್ನೆ 

06-01-26 08:23 pm       Bangalore Correspondent   ಕರ್ನಾಟಕ

ರಾಜ್ಯದ ವಸತಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ಸಲ್ಲಿಕೆಯಾಗಿದೆ. ಬಳ್ಳಾರಿಯಲ್ಲಿ ಕೊಲೆಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮನೆಯವರಿಗೆ 25 ಲಕ್ಷವನ್ನು ನಗದು ರೂಪದಲ್ಲಿ ನೀಡಿದ್ದನ್ನು ಪ್ರಶ್ನಿಸಿ ಹಿಂದು ಪರ ಸಂಘಟನೆ ಮುಖಂಡ ತೇಜಸ್ ಗೌಡ ಎಂಬವರು ಆದಾಯ ತೆರಿಗೆ ಇಲಾಖೆಗೆ ಲಿಖಿತ ದೂರು ಸಲ್ಲಿಸಿದ್ದಾರೆ. 

ಬೆಂಗಳೂರು, ಜ.6 : ರಾಜ್ಯದ ವಸತಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ಸಲ್ಲಿಕೆಯಾಗಿದೆ. ಬಳ್ಳಾರಿಯಲ್ಲಿ ಕೊಲೆಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮನೆಯವರಿಗೆ 25 ಲಕ್ಷವನ್ನು ನಗದು ರೂಪದಲ್ಲಿ ನೀಡಿದ್ದನ್ನು ಪ್ರಶ್ನಿಸಿ ಹಿಂದು ಪರ ಸಂಘಟನೆ ಮುಖಂಡ ತೇಜಸ್ ಗೌಡ ಎಂಬವರು ಆದಾಯ ತೆರಿಗೆ ಇಲಾಖೆಗೆ ಲಿಖಿತ ದೂರು ಸಲ್ಲಿಸಿದ್ದಾರೆ. 

ಜನವರಿ 1ರಂದು ಬಳ್ಳಾರಿಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಮನೆ ಮುಂದೆ ಹತ್ಯೆಯಾದ ರಾಜಶೇಖರ್ ರೆಡ್ಡಿ ಕುಟುಂಬಕ್ಕೆ ವಸತಿ ಸಚಿವ ಜಮೀರ್ ಅಹಮದ್ ಖಾನ್ 25 ಲಕ್ಷ ರೂಪಾಯಿ ಹಣವನ್ನು ವೈಯಕ್ತಿಕ ಪರಿಹಾರ ಎಂದು ನಗದು ರೂಪದಲ್ಲಿ ವಿತರಿಸಿದ್ದರು. 25 ಲಕ್ಷ ಹಣವನ್ನು ಬಟ್ಟೆ ಬ್ಯಾಗ್ ನಲ್ಲಿ ಮುಚ್ಚಿ ರಾಜಶೇಖರ್ ರೆಡ್ಡಿ ತಾಯಿಗೆ ನೀಡಿದ್ದರು. ಹಣ ನೀಡುವ ದೃಶ್ಯಗಳು ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಜೊತೆಗೆ ಪತ್ರಿಕೆಗಳಲ್ಲೂ 25 ಲಕ್ಷ ರೂ‌. ನಗದು ರೂಪದಲ್ಲೇ ನೀಡುವ ಪೋಟೋಗಳು ಪ್ರಕಟವಾಗಿವೆ. 

ಆದರೇ, ನಮ್ಮ ದೇಶದಲ್ಲಿ 2017-18 ರಲ್ಲಿ ಆರ್‌ಬಿಐ ನಿರ್ದೇಶನ ಹಾಗೂ ಆದಾಯ ತೆರಿಗೆ ಇಲಾಖೆಯ ನಿಯಮಗಳ ಪ್ರಕಾರ, 2 ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದು ಹಣವನ್ನು ಬೇರೆಯವರಿಗೆ ನೀಡುವುದಾಗಲೀ, ಪಡೆಯುವುದಾಗಲೀ ಮಾಡುವಂತಿಲ್ಲ. ಇದು ಆದಾಯ ತೆರಿಗೆ ಇಲಾಖೆಯ ಸೆಕ್ಷನ್ 269 ST ಸೆಕ್ಷನ್‌ಗೆ ವಿರುದ್ಧವಾಗಿದೆ. ಯಾರೇ ಆಗಲಿ ದಿನವೊಂದಕ್ಕೆ ಬೇರೊಬ್ಬರಿಗೆ 2 ಲಕ್ಷ ರೂ. ಹಣವನ್ನು ಮಾತ್ರ ನಗದು ರೂಪದಲ್ಲಿ ನೀಡಲು ಅವಕಾಶ ಇದೆ. 2 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಚೆಕ್, ಡಿ.ಡಿ. ಮೂಲಕವೇ ನೀಡಬೇಕು. 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ನೀಡುವಂತಿಲ್ಲ. 

ಆದರೆ, ವಸತಿ ಸಚಿವ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್, 25 ಲಕ್ಷ ರೂ. ಹಣವನ್ನು ನಗದು ರೂಪದಲ್ಲಿ ಮೃತ ರಾಜಶೇಖರ್ ರೆಡ್ಡಿ ತಾಯಿಗೆ ನೀಡಿದ್ದಾರೆ. ಹೀಗಾಗಿ ಇದು ಐಟಿ ಇಲಾಖೆಯ ಕಾಯಿದೆ, ಸೆಕ್ಷನ್ ಗಳ ಉಲಂಘನೆ. ಇದರ ಬಗ್ಗೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಿ ಜಮೀರ್ ಅಹಮದ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತೇಜಸ್ ಗೌಡ, ಆದಾಯ ತೆರಿಗೆ ಇಲಾಖೆಯ ಬೆಂಗಳೂರು, ಗೋವಾದ ಡೈರೆಕ್ಟರ್ ಜನರಲ್ ಅವರಿಗೆ ಲಿಖಿತ ದೂರು ನೀಡಿದ್ದಾರೆ. 

ದೂರಿನ ಬಗ್ಗೆ ಐ.ಟಿ. ಇಲಾಖೆ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ನೋಟೀಸ್ ನೀಡಿ,  ವಿವರಣೆ ಪಡೆಯುತ್ತಾ ಎಂಬ ಕುತೂಹಲ ಇದೆ. ದೇಶದಲ್ಲಿ ನಗದು ವ್ಯವಹಾರದ ಮೂಲಕ ಕಪ್ಪು ಹಣದ ವ್ಯವಹಾರ ಹೆಚ್ಚಾಗಿ ನಡೆಯುತ್ತಿದೆ. ಇದನ್ನು ಮಟ್ಟ ಹಾಕಲು ಹಾಗೂ ನಿಯಂತ್ರಿಸಲು ಆರ್‌ಬಿಐ ಹಾಗೂ ಆದಾಯ ತೆರಿಗೆ ಇಲಾಖೆಗಳು 2 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣದ ವ್ಯವಹಾರವನ್ನು ನಗದು ರೂಪದಲ್ಲಿ ಮಾಡುವಂತಿಲ್ಲ ಎಂದು ನಿಯಮ ರೂಪಿಸಿದೆ.

A formal complaint has been filed with the Income Tax Department against Karnataka Housing Minister Zameer Ahmed Khan after he allegedly handed over ₹25 lakh in cash to the family of slain Ballari Congress worker Rajshekhar Reddy.