ಬ್ರಹ್ಮಗಿರಿ ಬೆಟ್ಟ ಕುಸಿತ - 60 ಅಡಿ ಆಳದಲ್ಲಿ ಅರ್ಚಕರ ಕಾರು ಪತ್ತೆ

11-08-20 09:08 am       Headline Karnataka News Network   ಕರ್ನಾಟಕ

ತಲಕಾವೇರಿಯ ಬ್ರಹ್ಮಗಿರಿಯಲ್ಲಿ ಬೆಟ್ಟ ಕುಸಿದು ಕಣ್ಮರೆಯಾಗಿದ್ದವರಿಗೆ ಎನ್‌ಡಿಆರ್‌ಎಫ್ ತಂಡ ತೀವ್ರ ಶೋಧ ನಡೆಸುತ್ತಿದೆ. ಇದೀಗ ಕಣ್ಮರೆಯಾದ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಅವರು ಬಳಸುತ್ತಿದ್ದ ಎರಡು ಕಾರುಗಳು ಪತ್ತೆಯಾಗಿವೆ.

ಮಡಿಕೇರಿ, ಆಗಸ್ಟ್ 11: ತಲಕಾವೇರಿಯ ಬ್ರಹ್ಮಗಿರಿಯಲ್ಲಿ ಬೆಟ್ಟ ಕುಸಿದು ಕಣ್ಮರೆಯಾಗಿದ್ದವರಿಗೆ ಎನ್‌ಡಿಆರ್‌ಎಫ್ ತಂಡ ತೀವ್ರ ಶೋಧ ನಡೆಸುತ್ತಿದೆ. ಇದೀಗ ಕಣ್ಮರೆಯಾದ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಅವರು ಬಳಸುತ್ತಿದ್ದ ಎರಡು ಕಾರುಗಳು ಪತ್ತೆಯಾಗಿವೆ.

ಕಳೆದ ನಾಲ್ಕು ದಿನಗಳಿಂದ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಳಗ್ಗೆಯಿಂದಲೇ ಕಣ್ಮರೆಯಾದವರಿಗೆ ತೀವ್ರವಾದ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ. ಈ ವೇಳೆ ನಾರಾಯಣ ಆಚಾರ್ ಬಳಸುತ್ತಿದ್ದ ರೆನಾಲ್ಟ್ ಡಸ್ಟರ್ ಹಾಗೂ ಮತ್ತೊಂದು ಓಮ್ನಿ ಎರಡು ಕಾರುಗಳು ಪತ್ತೆಯಾಗಿವೆ.

ಎರಡು ಕಾರುಗಳು ಸಂಪೂರ್ಣ ನುಜ್ಜು-ಗುಜ್ಜಾಗಿವೆ. ನಾರಾಯಣ ಆಚಾರ್ ಶೆಡ್‍ನಲ್ಲಿ ಇದ್ದ ಎರಡು ಕಾರುಗಳು ಇಂದು ಕಾರ್ಯಾಚರಣೆ ವೇಳೆ ಪತ್ತೆಯಾಗಿದೆ. ಜೊತೆಗೆ ಅರ್ಚಕರಿಗೆ ಸೇರಿದ ವಸ್ತುಗಳು ಪತ್ತೆಯಾಗುತ್ತಿವೆ. ಆದರೆ ಇನ್ನೂ ನಾರಾಯಣ ಆಚಾರ್ ಹಾಗೂ ಉಳಿದ ನಾಲ್ವರ ಮೃತದೇಹ ಪತ್ತೆಯಾಗಿಲ್ಲ.

ಈಗಾಗಲೇ ಘಟನಾ ಸ್ಥಳದಲ್ಲಿ ಜೆಸಿಬಿ ಹಾಗೂ ಹಿಟಾಚಿಗಳು ತೀವ್ರ ಶೋಧ ನಡೆಸುತ್ತಿವೆ. ಒಟ್ಟು 60 ಸಿಬ್ಬಂದಿ ಉಳಿದ ನಾಲ್ವರ ಕುರುಹುಗಾಗಿ ಶೋಧ ಮಾಡುತ್ತಿದ್ದಾರೆ. ಅನಂದ್ ತೀರ್ಥ ಅವರ ಮೃತದೇಹವನ್ನು ಇಂದು ಅಂತ್ಯಕ್ರಿಯೆ ಮಾಡುವ ಸಾಧ್ಯತೆ ಇದೆ.