ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆಚ್ಚು ಆದಾಯ 

22-01-26 05:20 pm       HK News Desk   ಕರ್ನಾಟಕ

ದಕ್ಷಿಣ ಭಾರತದ ಹೆಸರಾಂತ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ 2025ರ ನವೆಂಬರ್​​​ ಹಾಗೂ ಡಿಸೆಂಬರ್​​ ತಿಂಗಳಲ್ಲಿ ಭಕ್ತರಿಂದ ಅಪಾರ ಪ್ರತಿಕ್ರಿಯೆ ಪಡೆದು, ಒಟ್ಟು 14 ಕೋಟಿ 77 ಲಕ್ಷ 80 ಸಾವಿರ ರೂ. ಆದಾಯ ಸಂಗ್ರಹಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ಸುಬ್ರಹ್ಮಣ್ಯ, ಜ 22 : ದಕ್ಷಿಣ ಭಾರತದ ಹೆಸರಾಂತ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ 2025ರ ನವೆಂಬರ್​​​ ಹಾಗೂ ಡಿಸೆಂಬರ್​​ ತಿಂಗಳಲ್ಲಿ ಭಕ್ತರಿಂದ ಅಪಾರ ಪ್ರತಿಕ್ರಿಯೆ ಪಡೆದು, ಒಟ್ಟು 14 ಕೋಟಿ 77 ಲಕ್ಷ 80 ಸಾವಿರ ರೂ. ಆದಾಯ ಸಂಗ್ರಹಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ದೇವಸ್ಥಾನಕ್ಕೆ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ವಿಶೇಷವಾಗಿ ನಾಗರಪಂಚಮಿ, ಕಾರ್ತಿಕ ಮಾಸ, ಡಿಸೆಂಬರ್ ತಿಂಗಳ ರಜಾಕಾಲ ಹಾಗೂ ವಿಶೇಷ ಪೂಜಾ ದಿನಗಳಲ್ಲಿ ಭಕ್ತರ ಹರಿವು ಗಣನೀಯವಾಗಿ ಹೆಚ್ಚಿರುವುದು ಆದಾಯ ವೃದ್ಧಿಗೆ ಪ್ರಮುಖ ಕಾರಣವಾಗಿದೆ.

ಕಳೆದ ನವೆಂಬರ್‌ನಲ್ಲಿ ದೇವಸ್ಥಾನವು ವಿವಿಧ ಪೂಜಾ ಸೇವೆಗಳಿಂದ ₹4 ಕೋಟಿ 56 ಲಕ್ಷ 21 ಸಾವಿರ 739 ಆದಾಯ ಗಳಿಸಿದೆ. ಇದೇ ಅವಧಿಯಲ್ಲಿ ಹುಂಡಿಯಿಂದ ₹1 ಕೋಟಿ 9 ಲಕ್ಷ 76 ಸಾವಿರ 957 ಸಂಗ್ರಹವಾಗಿದ್ದು, ಅನ್ನದಾನ ನಿಧಿಯಿಂದ ₹83 ಲಕ್ಷ 57 ಸಾವಿರ 769 ಆದಾಯ ಬಂದಿದೆ.

2025 ಡಿಸೆಂಬರ್‌ನಲ್ಲಿ​ ಭಕ್ತರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳ ಕಂಡುಬಂದಿದ್ದು, ವಿವಿಧ ಸೇವೆಗಳಿಂದ ₹5 ಕೋಟಿ 30 ಲಕ್ಷ 18 ಸಾವಿರ 923 ಆದಾಯ ಲಭಿಸಿದೆ. ಹುಂಡಿ ಸಂಗ್ರಹವಾಗಿ ₹1 ಕೋಟಿ 90 ಲಕ್ಷ 63 ಸಾವಿರ 518 ರೂಪಾಯಿ ಬಂದಿದ್ದು, ಅನ್ನದಾನ ನಿಧಿಯಿಂದ ₹1 ಕೋಟಿ 7 ಲಕ್ಷ 41 ಸಾವಿರ 594 ಆದಾಯ ದಾಖಲಾಗಿದೆ.

ಇದನ್ನು ಹೊರತುಪಡಿಸಿ, ದೇವಸ್ಥಾನದ ವಸತಿಗೃಹಗಳು, ಅತಿಥಿ ಸೌಕರ್ಯಗಳು ಹಾಗೂ ಇತರೆ ಮೂಲಗಳಿಂದಲೂ ಗಮನಾರ್ಹ ಪ್ರಮಾಣದ ಆದಾಯ ಲಭಿಸಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ ತಿಳಿಸಿದ್ದಾರೆ.

ಭಕ್ತರ ಸಹಕಾರದಿಂದ ಸಂಗ್ರಹವಾಗುತ್ತಿರುವ ಈ ಆದಾಯವನ್ನು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು, ಅನ್ನದಾನ ಸೇವೆ, ಮೂಲಸೌಕರ್ಯ ವೃದ್ಧಿ ಹಾಗೂ ಭಕ್ತರಿಗೆ ಉತ್ತಮ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸುವ್ಯವಸ್ಥಿತ ಸೇವೆಗಳೊಂದಿಗೆ ಭಕ್ತರಿಗೆ ಅನುಕೂಲ ಕಲ್ಪಿಸುವ ಯೋಜನೆಗಳನ್ನು ರೂಪಿಸಲಾಗುವುದು ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.

The renowned pilgrimage centre of Kukke Shri Subrahmanya Temple in Dakshina Kannada district has created a new record by generating ₹14.77 crore in revenue during November and December 2025, driven by an overwhelming response from devotees.