15ಕ್ಕೂ ಹೆಚ್ಚು ಜನರನ್ನ ಮನಬಂದಂತೆ ಕಚ್ಚಿದ ಹುಚ್ಚು ನಾಯಿ ;  ಹೊಡೆದು ಕೊಂದ ಕಲಘಟಗಿ ಮಂದಿ 

27-01-26 04:50 pm       HK News Desk   ಕರ್ನಾಟಕ

ಹುಚ್ಚು ನಾಯಿಯೊಂದು ದಾಳಿ ಮಾಡಿ 15ಕ್ಕೂ ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ನಡೆದಿದೆ. ಘಟನೆ ಬೆನ್ನಲ್ಲೇ ಆಕ್ರೋಶಭರಿತ ಜನರು ನಾಯಿಯನ್ನು ಹೊಡೆದು ಕೊಂದು ಹಾಕಿದ್ದಾರೆ.

ಹುಬ್ಬಳ್ಳಿ, ಜ 26 : ಹುಚ್ಚು ನಾಯಿಯೊಂದು ದಾಳಿ ಮಾಡಿ 15ಕ್ಕೂ ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ನಡೆದಿದೆ. ಘಟನೆ ಬೆನ್ನಲ್ಲೇ ಆಕ್ರೋಶಭರಿತ ಜನರು ನಾಯಿಯನ್ನು ಹೊಡೆದು ಕೊಂದು ಹಾಕಿದ್ದಾರೆ.

ಹುಚ್ಚು ನಾಯಿ, ಪಾದಚಾರಿಗಳು, ಮನೆ ಅಂಗಳದಲ್ಲಿ ಆಡುತ್ತಿದ್ದ ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ 15ಕ್ಕೂ ಹೆಚ್ಚು ಜನರ ಮೇಲೆ ಎರಗಿದೆ. ಮನಬಂದಂತೆ ಕಚ್ಚಿದೆ. ಒಂದೇ ರಾತ್ರಿ ನಾಯಿಯ ಉಪಟಳ ವಿಪರೀತವಾಗಿದೆ. ಹೀಗೆ ದಾಳಿ ಮಾಡುತ್ತಿದ್ದ ನಾಯಿಯನ್ನು ಸಾರ್ವಜನಿಕರೇ ಹೊಡೆದು ಕೊಂದಿದ್ದಾರೆ. 

ನಾಯಿ ದಾಳಿಯಿಂದ ಹಲವರಿಗೆ ಕೈ, ಕಾಲು ಹಾಗೂ ಮುಖದ ಭಾಗಕ್ಕೆ ಗಾಯಗಳಾಗಿವೆ. ಗಾಯಗೊಂಡವರನ್ನು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನು ಕೆಲವರನ್ನು ಹುಬ್ಬಳ್ಳಿಯ ಕೆಎಂಸಿಆರ್‌ಐಗೆ ದಾಖಲಿಸಲಾಗಿದೆ. ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಹುಚ್ಚು ನಾಯಿ ಬಂದಿದೆ ಎಂಬ ಮಾಹಿತಿ ಗ್ರಾಮದಲ್ಲಿ ಹರಡುತ್ತಿದ್ದಂತೆ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಮನೆಯಿಂದ ಮಕ್ಕಳನ್ನು ಹೊರಗೆ ಬಿಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೆ ಸೋಮವಾರ ರಾತ್ರಿ ಗ್ರಾಮಸ್ಥರೇ ನಾಯಿಯನ್ನು ಬೆನ್ನತ್ತಿ ಹೊಡೆದು ಕೊಂದುಹಾಕಿದ್ದಾರೆ.

ನಾಯಿಗಳ ಉಪಟಳ ಹೆಚ್ಚಾಗಲು ಚಿಕನ್ ಅಂಗಡಿಗಳು ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅವರು ಎಸೆಯುವ ಮಾಂಸದ ರುಚಿಯಿಂದ ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿದ್ದು, ಗ್ರಾಮದಲ್ಲಿನ ಚಿಕನ್ ಅಂಗಡಿಗಳನ್ನು ಗ್ರಾಮದಿಂದ ಸ್ಥಳಾಂತರ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಚಾಮರಾಜನಗರದಲ್ಲಿಯೂ ಹುಚ್ಚು ನಾಯಿ ದಾಳಿ ನಡೆಸಿತ್ತು. ಚಾಮರಾಜನಗರದ ಯಳಂದೂರು ಪಟ್ಟಣದಲ್ಲಿ ಪಾದಚಾರಿಗಳ ಮೇಲೆ ಏಕಾಏಕಿ ಹುಚ್ಚು ನಾಯಿ ದಾಳಿ ನಡೆಸಿದ್ದು, ವೃದ್ಧರು ಸೇರಿದಂತೆ 7 ಮಂದಿ ಗಾಯಗೊಂಡ ಘಟನೆ ನಡೆದಿತ್ತು. ನಾಯಿ ದಾಳಿಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದರು.

ಪಟ್ಟಣದ ಚೌಡಮ್ಮ, ವೈ.ಕೆ.ಮೋಳೆ ಗ್ರಾಮದ ಲಕ್ಷ್ಮಮ್ಮ, ಕೆ.ದೇವರಹಳ್ಳಿ ಗ್ರಾಮದ ರತ್ನಮ್ಮ ಸೇರಿದಂತೆ 7 ಮಂದಿ ಕೈ-ಕಾಲುಗಳಿಗೆ ಪರಚಿ, ಕಚ್ಚಿ ಗಾಯಗೊಳಿಸಿತ್ತು. ಪಟ್ಟಣದ ಕೆನರಾ ಬ್ಯಾಂಕ್ ಸಮೀಪ ಬಸ್​​ಗಾಗಿ ಕಾಯುತ್ತಾ ನಿಂತಿದ್ದವರ ಹಾಗೂ ಪಾದಚಾರಿಗಳ ಮೇಲೆ ದಾಳಿ ಮಾಡಿತ್ತು. ಅಲ್ಲದೇ, ಕಂಡಕಂಡವರ ಮೇಲೆ ಎರಗಿ ಪರಾರಿಯಾಗಿತ್ತು. ಗಾಯಗೊಂಡವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.

A rabid dog went on a rampage in Mishrikoti village of Kalghatgi taluk, injuring over 15 people, including children and the elderly. Panic spread across the village, and angry residents eventually chased and killed the dog. All injured are under treatment and out of danger.