ಅಕ್ರಮ ಮರಳು ಗಣಿಗಾರಿಕೆ, ಮಟ್ಕಾ, ಜೂಜು, ಇಸ್ಪೀಟು ದಂಧೆಯಲ್ಲಿ ಎಲ್ಲ ಪಕ್ಷಗಳ ಪ್ರಭಾವಿಗಳೂ ಶಾಮೀಲು ; ಗೃಹ ಸಚಿವ ಪರಮೇಶ್ವರ್ ಶಾಕಿಂಗ್ ಹೇಳಿಕೆ ! 

27-01-26 09:57 pm       Bangalore Correspondent   ಕರ್ನಾಟಕ

ಅಕ್ರಮ ಮರಳು ಗಣಿಗಾರಿಕೆ, ಮಟ್ಕಾ, ಜೂಜು, ಇಸ್ಪೀಟುಗಳಂಥ ಚಟುವಟಿಕೆಗಳಲ್ಲಿ ಎಲ್ಲ ಪಕ್ಷಗಳ ಪ್ರಭಾವಿಗಳೂ ಶಾಮೀಲಾಗಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ವಿಧಾನಸಭೆಯಲ್ಲಿ ತಿಳಿಸಿದರು.

ಬೆಂಗಳೂರು, ಜ 26 : ಅಕ್ರಮ ಮರಳು ಗಣಿಗಾರಿಕೆ, ಮಟ್ಕಾ, ಜೂಜು, ಇಸ್ಪೀಟುಗಳಂಥ ಚಟುವಟಿಕೆಗಳಲ್ಲಿ ಎಲ್ಲ ಪಕ್ಷಗಳ ಪ್ರಭಾವಿಗಳೂ ಶಾಮೀಲಾಗಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ವಿಧಾನಸಭೆಯಲ್ಲಿ ತಿಳಿಸಿದರು.

ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಅಕ್ರಮ ಚಟುವಟಿಕೆಗಳಲ್ಲಿ ಯಾವ ನಾಯಕರು ಭಾಗಿ ಆಗಿದ್ದಾರೆ. ಯಾವ ನಾಯಕರ ನೇತೃತ್ವದಲ್ಲಿ ನಡೆಯುತ್ತಿದೆ ಅಂತ ವಿವರಣೆ ಕೊಡಲ್ಲ. ಇದರ ಹಿಂದೆ ದೊಡ್ಡವರೇ ಇದ್ದಾರೆ. ಎಲ್ಲ ಪಕ್ಷದವರೂ ಇದರಲ್ಲಿ ಇದ್ದಾರೆ. ಹಾಗಾಗಿ ಇದರ ಬಗ್ಗೆ ನಾನು ವಿವರಣೆ ಕೊಡುವುದಿಲ್ಲ ಎಂದರು.‌

ಈ ವೇಳೆ, ಯಾರು ಯಾರು ದೊಡ್ಡವರು ಭಾಗಿಯಾಗಿದ್ದಾರೆಂದು ಬಹಿರಂಗ ಪಡಿಸಿ, ಮುಲಾಜಿಲ್ಲದೇ ಕ್ರಮ ವಹಿಸಲು ಸುರೇಶ್ ಕುಮಾರ್ ಆಗ್ರಹಿಸಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪರಮೇಶ್ವರ್, ನಮಗೆ ಯಾವುದೇ ಮುಲಾಜಿಲ್ಲ. ಶಾಸಕರ ಜೊತೆಗೂ ಸಭೆ ಕರೆಯುತ್ತೇನೆ. ಪರಿಸ್ಥಿತಿ ಅವಲೋಕಿಸಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಇದಕ್ಕೂ ಮುಂಚೆ ಮಾತನಾಡಿದ ದೇವದುರ್ಗದ ಶಾಸಕಿ ಕರೆಮ್ಮ ನಾಯಕ್, ಅಕ್ರಮ ಮರಳು ದಂಧೆ, ಮಟ್ಕಾ, ಜೂಜು ಚಟುವಟಿಕೆ ಗಳಿಗೆ ಕಡಿವಾಣ ಹಾಕಿ. ರಾಯಚೂರು ಜಿಲ್ಲೆಯಾದ್ಯಂತ ಇಂತಹ ಪ್ರಕರಣಗಳು ಹೆಚ್ಚಾಗಿವೆ. ಕಳ್ಳತನ ಪ್ರಕರಣಗಳು ಕೂಡ ಜಾಸ್ತಿ ಆಗಿವೆ. ನಾನು ಶಾಸಕಿ ಅದ ಮೇಲೆ ನನ್ನ ಕ್ಷೇತ್ರ ದಲ್ಲಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಮುಂದಾಗಿದ್ದೆ. ಆದರೆ ಸದ್ಯ ಆಗ್ತಾ ಇಲ್ಲ. ಗೃಹ ಸಚಿವರು ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳ ಬೇಕು. ಹೆಣ್ಣು ಮಕ್ಕಳು ರಾತ್ರಿ ಹೊತ್ತು ಓಡಾಡುವ ಹಾಗಿಲ್ಲ. ನಾನು ಓಡಾಡುವಾಗ ನನ್ನ ಹಿಂದೆ ಹತ್ತಾರು ವಾಹನಗಳು ಬೆನ್ನಟ್ಟಿ ಬರುತ್ತವೆ. ಪ್ರಶ್ನೆ ಮಾಡಿದ್ರೆ, ನಿಮ್ಮ ಮನೆ ತನಕ ಬಿಟ್ಟು ಬರುತ್ತೇವೆ ಅಂತಾರೆ. ಒಂದು ರೀತಿ ಬೆದರಿಕೆ ಹಾಕುವ ರೀತಿ ಮಾತಾಡ್ತಾರೆ ಎಂದು ಅಳಲು ತೋಡಿಕೊಂಡರು.

ಇದರ ಹಿಂದೆ ದೊಡ್ಡ ದೊಡ್ಡವರ ಕೈ ಇದೆ‌. ತಮಗೇ ರಕ್ಷಣೆ ಇಲ್ಲ ಎಂದು ಶಾಸಕಿ ಕರೆಮ್ಮ ನಾಯಕ್ ಅಸಹಾಯಕತೆ ವ್ಯಕ್ತಪಡಿಸಿದರು. ಇದಕ್ಕುತ್ತರಿಸಿದ ಪರಮೇಶ್ವರ್, ಶಾಸಕರು ಯಾರೇ ಇದ್ದರೂ ಕ್ಷೇತ್ರದಲ್ಲಿ ಇದ್ದರೆ ಪೊಲೀಸರು ರಕ್ಷಣೆ ಕೊಡಬೇಕು, ಅದು ಪೊಲೀಸರ ಕರ್ತವ್ಯ. ಲೋಪ ಆದರೆ ಪೊಲೀಸರ ವಿರುದ್ಧ ಕ್ರಮ ಆಗಲಿದೆ. ಶಾಸಕರಿಗೆ ತೊಂದರೆ ಆಗಲು ನಾವು ಬಿಡುವುದಿಲ್ಲ. ನಿಮ್ಮ ರಕ್ಷಣೆಗೆ ಸರ್ಕಾರ ಇದೆ ಅಂತ ಭರವಸೆ ಕೊಟ್ಟರು.

Karnataka Home Minister G. Parameshwara made a shocking statement in the Legislative Assembly, admitting that influential leaders from all political parties are involved in illegal activities such as illegal sand mining, matka, gambling, and card games.