ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ; ದಕ್ಷಿಣ ಕನ್ನಡ ಜಿಲ್ಲೆಯಲ್ಲೇ 46 ಕೋಟಿ ಬಾಕಿ, ಕಿಶೋರ್ ಕುಮಾರ್ ಪ್ರಶ್ನೆಗೆ ಸದನದಲ್ಲಿ ಉತ್ತರ 

30-01-26 12:20 pm       Bangalore Correspondent   ಕರ್ನಾಟಕ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾವಿರಾರು ರೈತರಿಗೆ ಬೆಳೆ ವಿಮೆಯ ದೊಡ್ಡ ಮೊತ್ತ ಇನ್ನೂ ಪಾವತಿಯಾಗದೆ ಬಾಕಿ ಇರುವುದನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ರಾಜ್ಯಾದ್ಯಂತ ಕೃಷಿಕರು ಸಂಕಷ್ಟದಲ್ಲಿದ್ದರೂ ವಿಮಾ ಕಂಪನಿಗಳು ಮತ್ತು ಸರ್ಕಾರದ ಸಮೀಕ್ಷಾ ವಿಭಾಗವು ರೈತರ ಹಿತರಕ್ಷಣೆಯಲ್ಲಿ ವಿಫಲವಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ಬೆಂಗಳೂರು, ಜ.30 : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾವಿರಾರು ರೈತರಿಗೆ ಬೆಳೆ ವಿಮೆಯ ದೊಡ್ಡ ಮೊತ್ತ ಇನ್ನೂ ಪಾವತಿಯಾಗದೆ ಬಾಕಿ ಇರುವುದನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ರಾಜ್ಯಾದ್ಯಂತ ಕೃಷಿಕರು ಸಂಕಷ್ಟದಲ್ಲಿದ್ದರೂ ವಿಮಾ ಕಂಪನಿಗಳು ಮತ್ತು ಸರ್ಕಾರದ ಸಮೀಕ್ಷಾ ವಿಭಾಗವು ರೈತರ ಹಿತರಕ್ಷಣೆಯಲ್ಲಿ ವಿಫಲವಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ವಿಧಾನ ಪರವಾಗಿ ಪರಿಷತ್ತಿನಲ್ಲಿ ಕಿಶೋರ್ ಕುಮಾರ್ ಕೇಳಿದ ಪ್ರಶ್ನೆಗೆ ಸರ್ಕಾರ ಉತ್ತರ ನೀಡಿದೆ. ಸರ್ಕಾರ ನೀಡಿರುವ ದಾಖಲೆಯಂತೆ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 44,653 ರೈತರಿಗೆ ಸೇರಬೇಕಾದ 4,662.09 ಲಕ್ಷ ವಿಮಾ ಪರಿಹಾರ ಇನ್ನೂ ಪಾವತಿಯಾಗಿಲ್ಲ. ಉಡುಪಿ ಜಿಲ್ಲೆಯಲ್ಲೂ ನೂರಾರು ರೈತರಿಗೆ ವಿಮಾ ಪರಿಹಾರ ಬಾಕಿಯಿದ್ದು ಸರ್ಕಾರ ನಿರ್ಲಕ್ಷ್ಯ ವಹಿಸಿರುವುದನ್ನು ಕಿಶೋರ್ ಕುಮಾರ್ ಆಕ್ಷೇಪಿಸಿದ್ದಾರೆ. 

ದಾಖಲೆಗಳಲ್ಲಿ ದೂರುಗಳೇ ಇಲ್ಲ ! 

ಕರಾವಳಿ ಭಾಗದ ರೈತರು ಬೆಳೆ ಸಮೀಕ್ಷೆ ಮತ್ತು ವಿಮೆಯ ಬಗ್ಗೆ ನಿರಂತರ ದೂರು ನೀಡುತ್ತಿದ್ದರೂ, ಸರ್ಕಾರದ ಅಧಿಕೃತ ದಾಖಲೆಗಳ ಪ್ರಕಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಯಾವುದೇ ದೂರು ಸಲ್ಲಿಕೆಯಾಗಿಲ್ಲ ಎಂದು ತೋರಿಸಲಾಗಿದೆ. ಇದು ಅಧಿಕಾರಿಗಳು ನೀಡುತ್ತಿರುವ ತಪ್ಪು ಮಾಹಿತಿಯೇ ಅಥವಾ ರೈತರ ದೂರುಗಳನ್ನು ಕಡೆಗಣಿಸಲಾಗುತ್ತಿದೆಯೇ ಎಂಬ ಅನುಮಾನ ಮೂಡಿಸಿದೆ.  

ಈ ಬಾರಿ ಬೆಳೆ ಸಮೀಕ್ಷೆ ಅವೈಜ್ಞಾನಿಕವಾಗಿ ನಡೆದಿದ್ದು, ತೋಟಗಾರಿಕಾ ಬೆಳೆಗಾರರಿಗೆ ದೊಡ್ಡ ಅನ್ಯಾಯವಾಗಿದೆ. ಈ ಬಗ್ಗೆ ಉನ್ನತ ಮಟ್ಟದ ಆಂತರಿಕ ತನಿಖೆ ನಡೆಸಿ, ರೈತರಿಗೆ ಸುಳ್ಳು ಮಾಹಿತಿ ನೀಡುತ್ತಿರುವ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಿಶೋರ್ ಕುಮಾರ್ ಸಚಿವರನ್ನು ಒತ್ತಾಯಿಸಿದ್ದಾರೆ.‌  

ಬಾಕಿ ಇರುವ ಒಟ್ಟು 26,512.52 ಲಕ್ಷ ಹಣವನ್ನು ರಾಜ್ಯದ 1,94,691 ರೈತರಿಗೆ ತಕ್ಷಣವೇ ಬಿಡುಗಡೆ ಮಾಡಲು ವಿಮಾ ಕಂಪನಿಗಳಿಗೆ ಸರ್ಕಾರ ಗಡುವು ನೀಡಬೇಕು. "ನಮ್ಮ ಭಾಗದ ರೈತರು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ, ಅಧಿಕೃತವಾಗಿ ಈ ಪತ್ರಿಕಾ ಮಾಹಿತಿಯ ಆಧಾರದ ಮೇಲೆ ಅಧಿಕಾರಿಗಳನ್ನು ಪ್ರಶ್ನಿಸಬೇಕು. ರೈತರ ಹಕ್ಕುಗಳಿಗಾಗಿ ನಾನು ಸದನದ ಒಳಗೂ ಮತ್ತು ಹೊರಗೂ ನಿರಂತರವಾಗಿ ಹೋರಾಟ ನಡೆಸಲಿದ್ದೇನೆ" ಎಂದು ಕಿಶೋರ್ ಕುಮಾರ್ ಪುತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

The Karnataka government has admitted that thousands of farmers in Dakshina Kannada and Udupi districts are yet to receive crop insurance compensation. Replying to a question by MLC Kishore Kumar Puttur, the government revealed that ₹46.62 crore remains unpaid to over 44,000 farmers in Dakshina Kannada alone, sparking criticism over official negligence and flawed crop surveys.