ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನೂರಾರು ಕೋಟಿ ಕೇಳಿದ್ದು ಸತ್ಯನಾ? ; ಬಿಜೆಪಿ, ಐಟಿ ಇಲಾಖೆ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಗಂಭೀರ ಆರೋಪ 

31-01-26 10:24 pm       HK News Desk   ಕರ್ನಾಟಕ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ. ರಾಯ್ ಸಾವಿನ ಪ್ರಕರಣ ತೀವ್ರ ರಾಜಕೀಯ ತಿರುವು ಪಡೆದಿದ್ದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಪ್ರಕರಣದ ಹಿಂದೆ ಗಂಭೀರ ಸಂಚು ಅಡಗಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ನಾಯಕರು ಮತ್ತು ಐಟಿ ಇಲಾಖೆಯ ಕಿರುಕುಳವೇ ಈ ಸಾವಿಗೆ ಕಾರಣ ಎಂದು ನೇರವಾಗಿ ಆರೋಪ ಮಾಡಿದ್ದಾರೆ.

ರಾಮನಗರ, ಜ‌.31 :ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ. ರಾಯ್ ಸಾವಿನ ಪ್ರಕರಣ ತೀವ್ರ ರಾಜಕೀಯ ತಿರುವು ಪಡೆದಿದ್ದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ಪ್ರಕರಣದ ಹಿಂದೆ ಗಂಭೀರ ಸಂಚು ಅಡಗಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ನಾಯಕರು ಮತ್ತು ಐಟಿ ಇಲಾಖೆಯ ಕಿರುಕುಳವೇ ಈ ಸಾವಿಗೆ ಕಾರಣ ಎಂದು ನೇರವಾಗಿ ಆರೋಪ ಮಾಡಿದ್ದಾರೆ.

ಕನಕಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, ಪ್ರಕರಣದಲ್ಲಿ ಅನೇಕ ಅನುಮಾನಗಳು ಕಾಡುತ್ತಿವೆ ಎಂದು ಹೇಳುತ್ತಾ, ಸರ್ಕಾರ ಮತ್ತು ತನಿಖಾ ಸಂಸ್ಥೆಗಳ ಮುಂದೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.

ಆತ್ಮಹತ್ಯೆಯೋ ಅಥವಾ ಕೊಲೆಯೋ?

“ಸಿ.ಜೆ. ರಾಯ್ ಅವರೇ ಗುಂಡು ಹೊಡೆದುಕೊಂಡಿದ್ದಾರಾ ಅಥವಾ ಯಾರಾದರೂ ಅವರಿಗೆ ಗುಂಡು ಹಾರಿಸಿದ್ದಾರಾ ಎಂಬುದೇ ದೊಡ್ಡ ಪ್ರಶ್ನೆ,” ಎಂದು ಪ್ರದೀಪ್ ಈಶ್ವರ್ ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳೇ ಇರಲಿಲ್ಲ, ಅಲ್ಲಿ ಇದ್ದವರು ಕೇವಲ ಐಟಿ ಅಧಿಕಾರಿಗಳು ಮಾತ್ರ. ಒಳಗೆ ನಿಜವಾಗಿಯೂ ಏನಾಯಿತು ಎಂಬುದು ಯಾರಿಗೂ ಗೊತ್ತಿಲ್ಲ ಎಂದು ಅವರು ಸಂಶಯ ವ್ಯಕ್ತಪಡಿಸಿದರು.

ನೂರಾರು ಕೋಟಿ ಬೇಡಿಕೆಯ ಆರೋಪ

ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿರುವ ಅವರು, “ನನಗೆ ಲಭ್ಯವಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಮುಂಬರುವ ಚುನಾವಣೆಗಾಗಿ ಬಿಜೆಪಿ ನಾಯಕರು ಸಿ.ಜೆ. ರಾಯ್ ಬಳಿ ನೂರಾರು ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆ ಹಣ ನೀಡಲು ನಿರಾಕರಿಸಿದ ಕಾರಣ ಕಳೆದ ಒಂದು ತಿಂಗಳಿನಿಂದ ಐಟಿ ಇಲಾಖೆ ಮೂಲಕ ನಿರಂತರ ಕಿರುಕುಳ ನೀಡಲಾಗಿದೆ” ಎಂದು ದೂರಿದರು.

“ಆರ್. ಅಶೋಕ್, ಸುನೀಲ್ ಕುಮಾರ್, ಬಸನಗೌಡ ಪಾಟೀಲ್ ಯತ್ನಾಳ್, ಮೈಸೂರಿನ ಒಂದು ‘ಕೋತಿ’ ಪ್ರತಿ ವಿಚಾರಕ್ಕೂ ಬಾಯಿ ಬಡಿದುಕೊಳ್ಳುವವರು, ಒಬ್ಬ ಯಶಸ್ವಿ ಉದ್ಯಮಿಯ ಸಾವು ಸಂಭವಿಸಿದಾಗ ಯಾಕೆ ಎಲ್ಲರೂ ಮೌನ ವಹಿಸಿದ್ದಾರೆ ” ಎಂದು ಪ್ರಶ್ನಿಸಿದ ಅವರು, “ಸಾಮಾನ್ಯ ವ್ಯಕ್ತಿಯೊಬ್ಬ ಹಣ ಸಂಪಾದನೆ ಮಾಡುವುದನ್ನು ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ” ಎಂದು ಕಿಡಿಕಾರಿದರು.

ಸಿ.ಜೆ. ರಾಯ್ ಅವರಿಗೆ ಯಾವುದೇ ಸಾಲದ ಬಾಧೆ ಇರಲಿಲ್ಲ, ವೈಯಕ್ತಿಕ ಸಮಸ್ಯೆಗಳೂ ಇರಲಿಲ್ಲ ಎಂದು ಸ್ಪಷ್ಟಪಡಿಸಿದ ಪ್ರದೀಪ್ ಈಶ್ವರ್, “ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಐಟಿ ಅಸ್ತ್ರವನ್ನು ಬಳಸಿ ಅವರಿಗೆ ಮಾನಸಿಕ ಹಿಂಸೆ ನೀಡಲಾಗಿದೆ. ಈ ಕಿರುಕುಳವೇ ಅವರ ಸಾವಿಗೆ ಕಾರಣವಾಗಿದೆ” ಎಂದು ಗಂಭೀರ ಆರೋಪ ಮಾಡಿದರು. ಪ್ರಕರಣದ ಸತ್ಯಾಸತ್ಯತೆ ಹೊರಬರಲು ರಾಜ್ಯ ಸರ್ಕಾರದಿಂದಲೇ ಎಸ್‌ಐಟಿ ರಚನೆಯಾಗಬೇಕು ಎಂದು ಅವರು ಒತ್ತಾಯಿಸಿದರು. 

“ಸಿಬಿಐಗೆ ಕೊಟ್ಟರೆ ಅದು ಕೂಡ ಕೇಂದ್ರದ ಕೈಯಲ್ಲೇ ಇದೆ. ಅಲ್ಲಿ ನ್ಯಾಯ ಸಿಗುವುದಿಲ್ಲ. ಆದ್ದರಿಂದ ರಾಜ್ಯ ಪೊಲೀಸರ ಮೂಲಕ ಸ್ವತಂತ್ರ ಎಸ್‌ಐಟಿ ತನಿಖೆ ನಡೆಯಬೇಕು” ಎಂದು ಆಗ್ರಹಿಸಿದರು. ಪ್ರದೀಪ್ ಈಶ್ವರ್ ಅವರ ಈ ಹೇಳಿಕೆಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ನಾಯಕರು ಇದಕ್ಕೆ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬ ಬಗ್ಗೆ ಕುತೂಹಲ ಮೂಡಿಸಿದೆ.

The death of Confident Group Chairman C.J. Roy has taken a sharp political turn, with Chikkaballapur MLA Pradeep Eshwar alleging a larger conspiracy behind the incident. He directly accused BJP leaders and the Income Tax (IT) department of harassment leading to Roy’s death.