ಬಾಗಲಕೋಟೆಯಲ್ಲಿ ಹೋಳಿ ಆಚರಣೆ ವೇಳೆ ಕಿರಿಕ್ ; 19 ವರ್ಷದ ಯುವಕನನ್ನು ಬೈಕ್ ಕೀ ಚೈನ್ ನಲ್ಲೇ ಕತ್ತು ಸೀಳಿದ ಬಾಲಕ

10-03-26 01:49 pm       HK News Staffer   ಕ್ರೈಂ

ಇತ್ತೀಚಿಗೆ ಬಾಲಾಪರಾಧಿಗಳ ಸಂಖ್ಯೆ ಹೆಚ್ಚುತ್ತಿದೆ. ಸಣ್ಣ ವಯಸ್ಸಿನಲ್ಲೇ ಕೊಲೆ ಸುಲಿಗೆಯಂತಹ ಕೃತ್ಯಗಳಲ್ಲಿ ಅಪ್ರಾಪ್ತರು ಭಾಗಿಯಾಗ್ತಿರುವ ವಿಚಾರ ಆಘಾತಕಾರಿಯಾಗಿದೆ. ಬಳ್ಳಾರಿ ಗುರುಕುಲದಲ್ಲಿ 9ನೇ ಕ್ಲಾಸ್ ವಿದ್ಯಾರ್ಥಿ ಬಾಲಕನನ್ನ ಹತ್ಯೆಗೈದ ಪ್ರಕರಣ ಮಾಸುವ ಮುನ್ನವೇ ಬಾಗಲಕೋಟೆಯಲ್ಲಿ ಅಪ್ರಾಪ್ತ ಬಾಲಕನಿಂದ ಯುವಕನ ಕೊಲೆ ನಡೆದಿದೆ.

ಬಾಗಲಕೋಟೆ, ಮಾ.10: ಇತ್ತೀಚಿಗೆ ಬಾಲಾಪರಾಧಿಗಳ ಸಂಖ್ಯೆ ಹೆಚ್ಚುತ್ತಿದೆ. ಸಣ್ಣ ವಯಸ್ಸಿನಲ್ಲೇ ಕೊಲೆ ಸುಲಿಗೆಯಂತಹ ಕೃತ್ಯಗಳಲ್ಲಿ ಅಪ್ರಾಪ್ತರು ಭಾಗಿಯಾಗ್ತಿರುವ ವಿಚಾರ ಆಘಾತಕಾರಿಯಾಗಿದೆ. ಬಳ್ಳಾರಿ ಗುರುಕುಲದಲ್ಲಿ 9ನೇ ಕ್ಲಾಸ್ ವಿದ್ಯಾರ್ಥಿ ಬಾಲಕನನ್ನ ಹತ್ಯೆಗೈದ ಪ್ರಕರಣ ಮಾಸುವ ಮುನ್ನವೇ ಬಾಗಲಕೋಟೆಯಲ್ಲಿ ಅಪ್ರಾಪ್ತ ಬಾಲಕನಿಂದ ಯುವಕನ ಕೊಲೆ ನಡೆದಿದೆ.

ಹೋಳಿ ಹಬ್ಬದಂದು ನಡೆದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ಪರಿಚಿತರೇ ಆಗಿರೋ 16 ವರ್ಷದ ಅಪ್ರಾಪ್ತ ಬಾಲಕ ಹಾಗೂ ಕೊಲೆಯಾದ ರಾಹುಲ್ ಬಾಹುಬಲಿ ಸಪ್ತಸಾಗರ (19) ನಡುವೆ ಹೋಳಿ ಹಬ್ಬದಂದು ಜಗಳ ಶುರುವಾಗಿದೆ. ಜಗಳದಲ್ಲಿ ರಾಹುಲ್ ತನ್ನನ್ನು ಹೊಡೆದಿರುವುದಾಗಿ ಬಾಲಕ ತನ್ನ ಸ್ನೇಹಿತೆ ಹಾಗೂ ಗೆಳೆಯರ ಮುಂದೆ ಹೇಳಿಕೊಂಡಿದ್ದನಂತೆ. ಬಳಿಕ ಬಾಲಕನ ಬಿಲ್ಡಪ್​ ವಿಚಾರ ಯುವಕನ ಕೋಪಕ್ಕೆ ಕಾರಣವಾಗಿದೆ.

ಮಾತುಕತೆ ವೇಳೆ‌ ಇಬ್ಬರ ನಡುವೆ ವಾಗ್ವಾದ;

ಹೊಡೆದಿರೋದಾಗಿ ಹೇಳಿಕೊಂಡು ಓಡಾಡ್ತಿದ್ದ ಬಾಲಕನನ್ನ ಯುವಕ ರಾಹುಲ್ ಕಳೆದ ರಾತ್ರಿ ಮಾತಾಡಬೇಕು ಎಂದು ದೇವಸ್ಥಾನದ ಬಳಿ ಕರೆದಿದ್ದ. ಮಾತುಕತೆ ವೇಳೆ‌ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಇದೇ ವೇಳೆ ಇಬ್ಬರ ಜಗಳ ತಡೆಯಲು ಸ್ಥಳದಲ್ಲಿದ್ದ ಸ್ನೇಹಿತರು ಪ್ರಯತ್ನ ಮಾಡಿದ್ರು ಸಾಧ್ಯವಾಗಲಿಲ್ಲ.

ಕುತ್ತಿಗೆಗೆ ಇರಿದು ಕೊಲೆಗೈದ ಬಾಲಕ:

ಈ ವೇಳೆ ಬೈಕ್ ಕೀ ಚೈನ್ ನಲ್ಲಿದ್ದ ಚಾಕುವಿನಿಂದ ರಾಹುಲ್ ಕುತ್ತಿಗೆಗೆ ಇರಿದು ಬಾಲಕನೇ ಕೊಲೆ ಮಾಡಿದ್ದಾನೆ ಎನ್ನಲಾಗ್ತಿದೆ. ಮೃತ ಯುವಕ ಸೆಕೆಂಡ್ ಇಯರ್ ಡಿಪ್ಲೋಮಾ ವಿದ್ಯಾರ್ಥಿ ಆಗಿದ್ದಾನೆ. ಇತ್ತ ಕೊಲೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 16 ವರ್ಷದ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.