ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ, ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಬಗ್ಗೆ ಪೋಷಕರ ದೂರು

14-10-26 12:21 pm       HK News Staffer   ಕ್ರೈಂ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಇಬ್ಬರು ಮಕ್ಕಳೊಂದಿಗೆ ಬಳ್ಳಾರಿ ಹೊರವಲಯದ ಅಲ್ಲಿಪುರ ಬಳಿಯ ತುಂಗಭದ್ರಾ ಕೆಳಹಂತದ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತ ಮಹಿಳೆಯ ಪತಿಯ ವಿರುದ್ಧ ಕಿರುಕುಳದ ಆರೋಪ ಕೇಳಿಬಂದಿದೆ.

ಬಳ್ಳಾರಿ, ಅ 14: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಇಬ್ಬರು ಮಕ್ಕಳೊಂದಿಗೆ ಬಳ್ಳಾರಿ ಹೊರವಲಯದ ಅಲ್ಲಿಪುರ ಬಳಿಯ ತುಂಗಭದ್ರಾ ಕೆಳಹಂತದ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತ ಮಹಿಳೆಯ ಪತಿಯ ವಿರುದ್ಧ ಕಿರುಕುಳದ ಆರೋಪ ಕೇಳಿಬಂದಿದೆ.

ಬಳ್ಳಾರಿಯ ಮಿಲ್ಲರ್‌ಪೇಟೆ ನಿವಾಸಿ ಸಿಮ್ರಾನ್ (26), ಮಕ್ಕಳಾದ ಮಹಮ್ಮದ್ ಆಯಾನ್ (3) ಮತ್ತು ಒಂದೂವರೆ ವರ್ಷದ ಮಗು ಆಯುಷ್ ಜೊತೆಗೆ ಕಾಲುವೆಗೆ ಹಾರಿ ಮೃತಪಟ್ಟವರು. ಈ ಕುರಿತು ಮೃತ ಮಹಿಳೆಯ ತಾಯಿ ಆಯಿಷಾ ಪರ್ವೀನ್ ಅವರು ಬಳ್ಳಾರಿ ಮಹಿಳಾ ಠಾಣೆಯಲ್ಲಿ ಅಳಿಯನ ವಿರುದ್ಧ ದೂರು ನೀಡಿದ್ದಾರೆ. ಮಹಿಳೆಯ ಶವ ಪತ್ತೆಯಾಗಿದ್ದು, ಮಕ್ಕಳಿಬ್ಬರಿಗಾಗಿ ಶೋಧ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಮಹಿಳೆಯ ಪತಿ ಸದ್ದಾಂ ಹುಸೇನ್ ನೀಡುತ್ತಿದ್ದ ಕಿರುಕುಳವೇ ಈ ದುರಂತಕ್ಕೆ ಕಾರಣ ಎಂದು ಆಯಿಷಾ ಪರ್ವೀನ್ ದೂರಿನಲ್ಲಿ ಆರೋಪಿಸಿದ್ದಾರೆ. ಪತಿ ಮತ್ತೊಬ್ಬ ಮಹಿಳೆಯೊಂದಿಗೆ ಸಂಪರ್ಕ ಹೊಂದಿದ್ದು, ಆಕೆಗೆ ಮನೆ ನಿರ್ಮಿಸಲು 10 ಲಕ್ಷ ರೂ. ನೀಡಬೇಕೆಂದು ಪತ್ನಿಗೆ ಒತ್ತಡ ಹೇರುತ್ತಿದ್ದ. ಅಲ್ಲದೆ, ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಹಾಗೂ ಮದುವೆ ಸಂದರ್ಭದಲ್ಲಿ ನೀಡಲಾಗಿದ್ದ 15 ತೊಲೆ ಚಿನ್ನಾಭರಣವನ್ನು ಮಾರಾಟ ಮಾಡಿದ್ದ ಎಂಬ ದೂರಿನಲ್ಲಿ ಆರೋಪಿಸಲಾಗಿದೆ.

ತಾಯಿ ಹಾಗೂ ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಘಟನೆಯ ಹಿನ್ನೆಲೆಯಲ್ಲಿ ಮೃತ ಮಹಿಳೆಯ ತಾಯಿ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.