Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದಲು ಮಂಗಳೂರು ಜಿಲ್ಲೆ ನಾಮಕರಣಕ್ಕೆ ಅಧಿಸೂಚನೆ ; ಇಷ್ಟಕ್ಕೂ ಈ ಹೆಸರಿನಲ್ಲೇನಿದೆ? ಕರಾವಳಿಯ ಎರಡು ಜಿಲ್ಲೆಗೆ ಮಾತ್ರ ಏಕಿದೆ ಈ 'ಹಳೆ' ಹೆಸರು?  

13-10-26 10:28 pm       Giridhar Shetty, Mangaluru   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯನ್ನು 'ಮಂಗಳೂರು ಜಿಲ್ಲೆ' ಎಂದು ಮರು ನಾಮಕರಣ ಮಾಡುವ ಕುರಿತಾಗಿ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದ್ದು ಸಾರ್ವಜನಿಕರ ಅಹವಾಲು ಆಲಿಸುವ ನಿರ್ಧಾರಕ್ಕೆ ಬರಲಾಗಿತ್ತು. ಇದೀಗ ಈ ಬಗ್ಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. 

ಮಂಗಳೂರು, ಅ.13: ದಕ್ಷಿಣ ಕನ್ನಡ ಜಿಲ್ಲೆಯನ್ನು 'ಮಂಗಳೂರು ಜಿಲ್ಲೆ' ಎಂದು ಮರು ನಾಮಕರಣ ಮಾಡುವ ಕುರಿತಾಗಿ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದ್ದು ಸಾರ್ವಜನಿಕರ ಅಹವಾಲು ಆಲಿಸುವ ನಿರ್ಧಾರಕ್ಕೆ ಬರಲಾಗಿತ್ತು. ಇದೀಗ ಈ ಬಗ್ಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. 

ಹಲವು ರಾಜಕಾರಣಿಗಳು ಹಾಗೂ ವಿವಿಧ ಸಂಘಟನೆಗಳಿಂದ ಮಂಗಳೂರು ನಾಮಕರಣಕ್ಕಾಗಿ ರಾಜ್ಯ ಸರಕಾರಕ್ಕೆ ಹಲವು ಮನವಿಗಳು ಸಲ್ಲಿಕೆಯಾಗಿದ್ದವು. ಸಾರ್ವಜನಿಕರ ಬೇಡಿಕೆ ಹಾಗೂ ಆಡಳಿತಾತ್ಮಕ ಅನುಕೂಲತೆಗಳನ್ನು ಗಣನೆಗೆ ತೆಗೆದುಕೊಂಡು 'ಮಂಗಳೂರು ಜಿಲ್ಲೆ' ಎಂದು ಮರು ನಾಮಕರಣ ಮಾಡಲು ಉದ್ದೇಶಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಸಲಹೆ ಅಭಿಪ್ರಾಯ, ಸ್ವೀಕರಿಸಲಾಗುವುದು ಎಂದು ರಾಜ್ಯ ಸರಕಾರ ಅಧಿಸೂಚನೆ (ರಾಜ್ಯಪತ್ರ) ಹೊರಡಿಸಿದೆ.

ಅ.1ರಂದು ಈ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಈ ರಾಜ್ಯಪತ್ರ ಪ್ರಕಟಗೊಂಡ ದಿನಾಂಕದಿಂದ 30 ದಿನಗಳೊಳಗೆ ಸಾರ್ವಜನಿಕರು ಅಭಿಪ್ರಾಯ, ಸಲಹೆಗಳನ್ನು ಲಿಖಿತ ರೂಪದಲ್ಲಿ ಅಥವಾ ಇ-ಮೇಲ್ ಮೂಲಕ ಮುಖ್ಯಮಂತ್ರಿಯವರ ಸಚಿವಾಲಯ, ಕೊಠಡಿ ಸಂಖ್ಯೆ 235, 2ನೇ ಮಹಡಿ, ವಿಧಾನಸೌಧ, ಬೆಂಗಳೂರು, ಇಮೇಲ್ cm.kar@nic.inಗೆ, ಅಥವಾ ಸರಕಾರದ ಅಪರ ಕಾರ್ಯದರ್ಶಿ, ಕಂದಾಯ ಇಲಾಖೆ, ಕೊಠಡಿ ಸಂಖ್ಯೆ 711, 7ನೇ ಮಹಡಿ, ಬಹುಮಹಡಿಗಳ ಕಟ್ಟಡ, ಡಾ.ಬಿ.ಆರ್.ಅಂಬೇಡ್ಕರ್ ವೀದಿ, ಬೆಂಗಳೂರು, ಇಮೇಲ್ prs.revenue@gmail.comಗೆ ಅಥವಾ ಜಿಲ್ಲಾಧಿಕಾರಿ, ದ.ಕ. ಜಿಲ್ಲೆ, ಪ್ರಜಾಸೌಧ, ದ.ಕ. ಜಿಲ್ಲಾಡಳಿತ ಕೇಂದ್ರ, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಪಡೀಲು ಮಂಗಳೂರು- ಇಮೇಲ್ dc.mnglr@gmail.comಗೆ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯೆಂದು ಮರು ನಾಮಕರಣ ಮಾಡಿದ್ದರಿಂದ ನಗರದ ವ್ಯಾಪ್ತಿ ವಿಸ್ತಾರವಾಗಿತ್ತು. ಹೊರಗಿನ ಕಂಪನಿಗಳು ಬೆಂಗಳೂರು ನಗರವೆಂಬ ಭಾವನೆಯಲ್ಲಿ ಹೂಡಿಕೆ ಮಾಡಲು ಅವಕಾಶವಾಗಿತ್ತು. ಇದರಿಂದ ಭೂಮಿಯ ಮಾರುಕಟ್ಟೆ ಮೌಲ್ಯವೂ ಹೆಚ್ಚುಗೊಂಡು ರಿಯಲ್ ಎಸ್ಟೇಟ್ ಚಿಗುರಲು ಅವಕಾಶ ಒದಗಿತ್ತು. ಇದೇ ರೀತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಹೆಸರನ್ನೇ ಇಡಬೇಕು, ಅದರಿಂದ ನಗರದ ವ್ಯಾಪ್ತಿ ಹೆಚ್ಚುತ್ತದೆ, ಪ್ರಾದೇಶಿಕ ಅಭಿವೃದ್ಧಿಗೆ ಬಲ ಸಿಗುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಬಗ್ಗೆ ಬಿಜೆಪಿ, ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದ್ದರು. 

ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಎನ್ನುವುದು ಆಡಳಿತಾತ್ಮಕ ದೃಷ್ಟಿಯಿಂದ ಬ್ರಿಟಿಷರ ಕಾಲದಲ್ಲಿ ಕರಾವಳಿ ಜಿಲ್ಲೆಗಳನ್ನು ವಿಭಜಿಸಿದ್ದಾಗಿತ್ತು. ಕಾರವಾರ ಪ್ರಮುಖ ಪಟ್ಟಣವಾದರೂ ಕರಾವಳಿ ಮಟ್ಟಿಗೆ ಆಗಿನ ಆಡಳಿತ ನೋಡಿಕೊಂಡಿದ್ದ ಬ್ರಿಟಿಷರಿಗೆ ಅದು ಉತ್ತರ ಕನ್ನಡವಾಗಿತ್ತು. ಅಂದಿನ ಕಾಲದಲ್ಲಿ ಈಗಿನಂತೆ ಉತ್ತರ ಕರ್ನಾಟಕ ಎಂಬ ಪರಿಕಲ್ಪನೆ ಇರಲಿಲ್ಲ. ಉತ್ತರಕ್ಕೆ ಪ್ರತಿಯಾಗಿ ದಕ್ಷಿಣ ಕನ್ನಡ ಎಂದು ಮತ್ತೊಂದು ಜಿಲ್ಲೆಯನ್ನು ಹೆಸರಿಸಿದ್ದರು. ಇದರಿಂದ 1997ರಲ್ಲಿ ಉಡುಪಿ ಪ್ರತ್ಯೇಕಗೊಂಡು ಹೊಸ ಜಿಲ್ಲೆಯಾಗಿತ್ತು. ಸೌತ್ ಕೆನರಾ, ನಾರ್ತ್ ಕೆನರಾ ಎಂದಿದ್ದ ಈ ಇಂಗ್ಲಿಷ್ ಹೆಸರುಗಳು ರಾಜ್ಯ ಸ್ಥಾನಮಾನದ ಬಳಿಕ ಅದೇ ನೆಲೆಯಲ್ಲಿ ಕನ್ನಡದಲ್ಲಿ ಬಳಕೆಗೆ ಬಂದಿದ್ದವು. ಮಂಗಳೂರು ಪ್ರಮುಖ ಪಟ್ಟಣವಾದರೂ ದೇಶ ಮಟ್ಟದಲ್ಲಿ ಮತ್ತು ವಿದೇಶದಲ್ಲಿ ಈ ಹೆಸರಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಈ ಕಾರಣಕ್ಕೆ ಇಡೀ ಜಿಲ್ಲೆಗೆ ಮಂಗಳೂರು ಹೆಸರೇ ಆಗಬೇಕೆಂದು ಈಗ ಕೂಗೆದ್ದಿದೆ.‌ ಕೆಲವು ಸಾಂಪ್ರದಾಯಿಕ ನೆಲೆಗಟ್ಟಿನವರು ಮಾತ್ರ ಮಂಗಳೂರು ಹೆಸರು ಬದಲಾವಣೆಗೆ ವಿರೋಧ ಸೂಚಿಸಿದ್ದಾರೆ. 

ಹೆಸರು ಬದಲಾವಣೆಯಿಂದ ಬೇರೆ ಏನು ಇಲ್ಲದಿದ್ದರೂ ದಾಖಲೆಗಳಲ್ಲಿ ಬದಲಾವಣೆ ಆಗಬೇಕಾಗುತ್ತದೆ. ನಿಧಾನಕ್ಕೆ ಮಂಗಳೂರು ಹೆಸರಿನ ಕಾರಣಕ್ಕೆ ಇಡೀ ಜಿಲ್ಲೆಯ ವ್ಯಾಪ್ತಿಗೆ ಹೂಡಿಕೆ ಬಲಗೊಳ್ಳಲು ಸಾಧ್ಯವಾಗಲಿದೆ. ಶಿಕ್ಷಣ, ಮೆಡಿಕಲ್ ಕಾಲೇಜು ಕಾರಣಕ್ಕೆ ಮಂಗಳೂರಿಗೆ ಇಡೀ ಜಗತ್ತಿನಲ್ಲಿ ಹೆಸರಿದೆ. ಇದೇ ಕಾರಣಕ್ಕೆ ಸುಳ್ಯ, ಪುತ್ತೂರಿನವರಾದ್ರೂ ವಿದೇಶದಲ್ಲಿ ನಾನು ಕುಡ್ಲ, ಮಂಗಳೂರಿನವ ಅಂತಲೇ ಹೆಚ್ಚುಗಾರಿಕೆ ತೋರುತ್ತಾರೆ. ಇಡೀ ಜಿಲ್ಲೆಯ ಹೆಸರು ಬದಲಾವಣೆಯಿಂದ ಇಂಥವರಿಗೆ ಹೇಳಿಕೊಳ್ಳಲು ನೈತಿಕ ಸ್ಥೈರ್ಯ ಹೆಚ್ಚಲಿದೆ. ಸುಳ್ಯವೂ ಮಂಗಳೂರಿನದ್ದೇ ಭಾಗ ಎನ್ನುವ ವಿಚಾರ ಹೊರಗಿನವರಿಗೂ ಮನದಟ್ಟು ಆಗುತ್ತದೆ. 

ಇಡೀ ರಾಜ್ಯಕ್ಕೆ ದೃಷ್ಟಿ ಹರಿಸಿದರೆ ಉತ್ತರ ಕನ್ನಡ, ದಕ್ಷಿಣ ಕನ್ನಡವನ್ನು ಹೊರತುಪಡಿಸಿದರೆ ಹೆಚ್ಚಿನ ಜಿಲ್ಲೆಗಳಲ್ಲಿ ಜಿಲ್ಲಾ ಕೇ‌ಂದ್ರಗಳೇ ಅಲ್ಲಿನ ಜಿಲ್ಲೆಯ ಹೆಸರಾಗಿರುವುದು ಕಾಣುತ್ತದೆ. ಮೈಸೂರು, ವಿಜಯಪುರ, ಬಾಗಲಕೋಟ, ಬೆಳಗಾವಿ, ಹುಬ್ಬಳ್ಳಿ, ಚಿತ್ರದುರ್ಗ, ಶಿವಮೊಗ್ಗ, ತುಮಕೂರು ರಾಜ್ಯದ ಬಹುತೇಕ ಜಿಲ್ಲೆಗಳ ಹೆಸರು ಅಲ್ಲಿನ ಜಿಲ್ಲಾ ಕೇಂದ್ರಗಳದ್ದೇ ಇದೆ‌. ಇವೆಲ್ಲ ಆಯಾ ಪ್ರದೇಶದ ಹೆಸರಾಗಿದ್ದರೂ ಇಡೀ ಜಿಲ್ಲೆಗೆ ಅನ್ವಯವಾಗಿರುವುದು ಗಮನಿಸಬೇಕು. ಆಯಾ ಭಾಗದ ಜನರಲ್ಲಿ ಎಲ್ಲಿಯವರು ಅಂತ ಕೇಳಿದರೆ ಜಿಲ್ಲೆಯ ಹೆಸರೇಳ್ತಾರೆ, ಇದರಿಂದ ಜಿಲ್ಲೆಗೂ ಹೆಸರು, ಹೇಳಿಕೊಳ್ಳುವವನಿಗೂ ಹೆಚ್ಚುಗಾರಿಕೆ ಇರುತ್ತದೆ. ದಕ್ಷಿಣ ಕನ್ನಡ ಎನ್ನುವುದಕ್ಕೆ ಯಾವುದೇ ಅರ್ಥವೂ ಇಲ್ಲ. ಪ್ರದೇಶ ವ್ಯಾಪ್ತಿಯೂ ಇಲ್ಲ. ಹೀಗಾಗಿ ಮಂಗಳೂರು ಆಗಿ ಬದಲಾವಣೆ ಆಗುವುದರಿಂದ ಇಡೀ ಜಿಲ್ಲೆಗೆ ಹೊಸತನ ಸಿಗಲಿದೆ ಎನ್ನುವ ಆಶಾವಾದ ಇದೆ. 

ಹೆಸರು ಬದಲಾವಣೆ ಹೊಸತಲ್ಲ.. 

ಇನ್ನು ಒಂದು ನಗರ, ಒಂದು ಜಿಲ್ಲೆಯ ಹೆಸರು ಬದಲಾವಣೆ ಹೊಸತೇನಲ್ಲ. ದೇಶವ್ಯಾಪಿ ಇಂತಹ ಬದಲಾವಣೆ ಆಗಿಂದಾಗ್ಗೆ ನಡೆದುಕೊಂಡು ಬಂದಿದೆ. ಬ್ರಿಟಿಷರ ಕಾಲದ ಮದ್ರಾಸ್ ಈಗ ಚೆನ್ನೈ ಆಗಿದೆ. ಚಂಡೀಗರ್ ಚಂಡೀಗಢ ಆಗಿದೆ. ಅಲಹಾಬಾದ್ ಈಗ ಪ್ರಯಾಗರಾಜ್ ಆಗಿದೆ‌. ಒಂದು ಕಾಲದಲ್ಲಿ ಕಾಳಿ ಘಾಟ್ ಆಗಿದ್ದ ಪಶ್ಚಿಮ ಬಂಗಾಳದ ನಗರ, ಬ್ರಿಟಿಷ್ ಕಾಲದಲ್ಲಿ ಅಪಭ್ರಂಶಗೊಂಡು ಕಲ್ಕಟ್ಟಾ ಆಗಿ, ಇತ್ತೀಚಿನ ಕಾಲದಲ್ಲಿ ಕೊಲ್ಕತ್ತಾ ಆಗಿ ಬದಲಾಗಿತ್ತು. ಬೊಂಬೈ ಆಗಿದ್ದ ನಗರ ಆಧುನಿಕ ಕಾಲದಲ್ಲಿ ಮುಂಬೈ ಆಗಿತ್ತು. ಡೆಲ್ಲಿ ಆಗಿದ್ದ ದೇಶದ ರಾಜಧಾನಿ ನವದೆಹಲಿ ಎಂದಾಗಿತ್ತು. ಈಗಲೂ ಕೆಲವರು ಪ್ರದೇಶಕ್ಕೆ ತಕ್ಕಂತೆ ಹೊಸದಿಲ್ಲಿ, ನಯಾ ದಿಲ್ಲಿ, ಹಳೆ ದಿಲ್ಲಿ ಎಂದು ಹೇಳುವುದಿದೆ. ದೆಹಲಿ ಎನ್ನುವ ನಗರ ಎರಡಾಗಿ ವಿಭಜನೆಗೊಂಡು ನವದೆಹಲಿ ಆಡಳಿತ ಕೇಂದ್ರವಾಗಿತ್ತು. 

ಬ್ರಿಟಿಷರ ಕಾಲದ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದ ಕೊಚ್ಚಿ ಇದ್ದುದು ಆಬಳಿಕ ಕೊಚ್ಚಿನ್ ಆಗಿದೆ. ಕಲ್ಲಿಕೋಟೆ, ಕ್ಯಾಲಿಕಟ್ ಆಗಿದ್ದುದು ಅಲ್ಲಿನ ವಿಮಾನ ನಿಲ್ದಾಣದ ಹೆಸರಲ್ಲೂ ಕರಿಪೂರ್ ಎಂದು ಬದಲಾಗಿದೆ. ಕೋಜಿಕ್ಕೋಡ್ ಆಲಪ್ಪುಝ ಆಗಿದೆ. ಪ್ರಾದೇಶಿಕ ಅಸ್ಮಿತೆ ಆಧರಿಸಿ ಕೇರಳದಲ್ಲಿ ಬದಲಾವಣೆ ಅತಿ ಹೆಚ್ಚು ಆಗಿರುವುದು ಕಾಣುತ್ತದೆ. ಇಂತಹ ಬದಲಾವಣೆ ಕೇರಳ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿ ದೇಶದ ಹೆಚ್ಚಿನ ಕಡೆಗಳಲ್ಲಿ ಆಗಿರುವುದು ಕಂಡುಬರುತ್ತದೆ. ಹಾಗಂತ ಹೆಸರು ಬದಲಾವಣೆ ಆದ ಮಾತ್ರಕ್ಕೆ ಯಾವುದೇ ಕೋಡು ಬರುವುದಿಲ್ಲ‌. ಒಂದೇ ಬಾರಿಗೆ ಅಭಿವೃದ್ಧಿಯೂ ಆಗುವುದಿಲ್ಲ. ಆದರೆ ಇಂತಹ ಬದಲಾವಣೆಗಳು ಪ್ರಾದೇಶಿಕವಾಗಿ ಜನರ ಅಸ್ಮಿತೆಯನ್ನು ಬದಲಿಸುತ್ತದೆ. ‌ಅದರಿಂದ ಅಭಿವೃದ್ಧಿ ಮಾದರಿಯಲ್ಲೂ ಬದಲಾವಣೆಗೆ ನಾಂದಿ ಹಾಡುತ್ತದೆ.

A notification has been issued to rename Mangaluru district, replacing the British-era name ‘South Canara’. The move has renewed interest in the historical significance of the name and why the colonial-era nomenclature has continued to be associated with coastal Karnataka.