ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ ಪ್ರತಿಭಟನೆ, ಧರಣಿ ನಡೆಸುವಂತಿಲ್ಲ ! ದೆಹಲಿ ಪೊಲೀಸ್ ಇಲಾಖೆ ಆದೇಶ

12-10-26 05:22 pm       HK News Staffer   ದೇಶ - ವಿದೇಶ

ರಾಜಧಾನಿ ದೆಹಲಿಯಲ್ಲಿ ಧರಣಿ ಹಾಗೂ ಪ್ರತಿಭಟನೆಗಳಿಗೆ ಹೆಸರಾಗಿದ್ದ ಜಂತರ್‌ ಮಂತರ್‌ ಆವರಣದಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಪ್ರತಿಭಟನೆ ಮಾಡುವಂತಿಲ್ಲ. ಈ ಬಗ್ಗೆ ದೆಹಲಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.

ನವದೆಹಲಿ, ಅ.12: ರಾಜಧಾನಿ ದೆಹಲಿಯಲ್ಲಿ ಧರಣಿ ಹಾಗೂ ಪ್ರತಿಭಟನೆಗಳಿಗೆ ಹೆಸರಾಗಿದ್ದ ಜಂತರ್‌ ಮಂತರ್‌ ಆವರಣದಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಪ್ರತಿಭಟನೆ ಮಾಡುವಂತಿಲ್ಲ. ಈ ಬಗ್ಗೆ ದೆಹಲಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. 

ಸುಪ್ರೀಂ ಕೋರ್ಟ್ ಮತ್ತು ಸಂಸತ್ ಭವನದ ಬಳಿಯಿರುವ ಐತಿಹಾಸಿಕ ತಾಣ ಜಂತರ್ ಮಂತರ್ ಆವರಣವನ್ನು ಪ್ರತಿಭಟನೆ ನಡೆಸುವ ಸ್ಥಳಗಳ ಪಟ್ಟಿಯಿಂದ ಕೈಬಿಡಲಾಗಿದೆ. ಇನ್ಮುಂದೆ ಜಂತರ್ ಮಂತರ್‌ನಲ್ಲಿ ಯಾವುದೇ ರೀತಿಯ ಧರಣಿ, ಪ್ರತಿಭಟನೆ ಅಥವಾ ಮೆರವಣಿಗೆ ನಡೆಸಲು ಅವಕಾಶವಿರುವುದಿಲ್ಲ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ರಚಿಸಿದ್ದ ಸಮಿತಿಯ ಶಿಫಾರಸಿನ ಮೇರೆಗೆ ದೆಹಲಿ ಪೊಲೀಸ್ ಕಮಿಷನರ್ ಕಚೇರಿ ಅಧಿಕೃತ ಆದೇಶ ಹೊರಡಿಸಿದೆ.

ಇದರ ಬದಲಾಗಿ, ರಾಮಲೀಲಾ ಮೈದಾನ, ಬುರಾರಿ ಮೈದಾನ ಹಾಗೂ ಪೂರ್ವ ದೆಹಲಿಯ ಸಿಬಿಡಿ ಮೈದಾನದಲ್ಲಿ ಪ್ರತಿಭಟನೆ ನಡೆಸಬಹುದು ಎಂದು ತಿಳಿಸಲಾಗಿದೆ. ನೂತನವಾಗಿ ಗುರುತಿಸಲಾಗಿರುವ ಈ ಮೂರು ಮೈದಾನಗಳಲ್ಲಿ ಪ್ರತಿಭಟನೆ ಅಥವಾ ಧರಣಿಗಳನ್ನು ಆಯೋಜಿಸಲು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ದೆಹಲಿ ಪೊಲೀಸ್ ಇಲಾಖೆ ತಿಳಿಸಿದೆ. 

ಸುಪ್ರೀಂ ಕೋರ್ಟ್ ಕೂಡ ಈ ಹಿಂದೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದರಿಂದ ಎದುರಾಗುವ ಟ್ರಾಫಿಕ್ ಸಮಸ್ಯೆಗಳನ್ನು ಉಲ್ಲೇಖಿಸಿತ್ತು. ಅಲ್ಲದೆ, ಪ್ರತಿಭಟನೆಗೆ ಬೇರೆ ಜಾಗಗಳನ್ನು ಸೂಚಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿತ್ತು. ಜಂತರ್‌ ಮಂತರ್‌ ಹತ್ತಿರವೇ ಸುಪ್ರೀಂ ಕೋರ್ಟ್‌, ಸಂಸತ್‌ ಭವನ ಇರುವ ಕಾರಣ ಅಲ್ಲಿ ಪ್ರತಿಭಟನೆ ನಡೆಸುವುದರಿಂದ ತೊಂದರೆ ಉಂಟಾಗಿತ್ತು. ಬೃಹತ್‌ ಪ್ರತಿಭಟನೆಗಳಿಗೆ ಕರೆ ನೀಡಿದರೆ ಭದ್ರತಾ ಲೋಪ, ಟ್ರಾಫಿಕ್ ಸಮಸ್ಯೆ ಎದುರಾಗುತ್ತಿತ್ತು.