ಸಚಿವ ಬಿ.ಸಿ ಪಾಟೀಲ್ ಕುಟುಂಬಕ್ಕೂ ತಗುಲಿದ ಕೊರೊನಾ ಸೋಂಕು

31-07-20 02:31 pm       Headline Karnataka News Network   ಕರ್ನಾಟಕ

ಕೃಷಿ ಸಚಿವ ಬಿ.ಸಿ ಪಾಟೀಲ್ ಅವರ ಪತ್ನಿ, ಅಳಿಯ ಹಾಗೂ ಅವರ ನಿವಾಸದ ಸಿಬ್ಬಂದಿಗಳನ್ನು ಸೇರಿ ಒಟ್ಟು ಐವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಹಾವೇರಿ, ಜುಲೈ 31: ಕೃಷಿ ಸಚಿವ ಬಿ.ಸಿ ಪಾಟೀಲ್ ಅವರ ಪತ್ನಿ, ಅಳಿಯ ಹಾಗೂ ಅವರ ನಿವಾಸದ ಸಿಬ್ಬಂದಿಗಳನ್ನು ಸೇರಿ ಒಟ್ಟು ಐವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಸಚಿವ ಬಿ.ಸಿ ಪಾಟೀಲ್ ಸ್ಪಷ್ಟಪಡಿಸಿದ್ದು, ನನ್ನ ಶ್ರೀಮತಿ, ಅಳಿಯ ಹಾಗೂ ಹಿರೇಕೆರೂರಿನ ನಿವಾಸದ ಸಿಬ್ಬಂದಿ ವರ್ಗ ಸೇರಿದಂತೆ ಒಟ್ಟು ಐದು ಜನರಿಗೆ ಕೊರೊನಾ ವೈರಸ್ ಪಾಸಿಟಿವ್ ಎಂದು ದೃಢಪಟ್ಟಿದೆ.

ಅವರನ್ನು ನಿರ್ದಿಷ್ಟವಾದ ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಲಾಗಿದ್ದು, ಅವರೆಲ್ಲ ಬೇಗ ಗುಣಮುಖರಾಗಿ ಬರಲಿ ಎಂದು ಪ್ರಾರ್ಥಿಸುತ್ತೇನೆ. ನಿಮ್ಮೆಲ್ಲರ ಹಾರೈಕೆಯೂ ಇರಲಿ ಎಂದು ಕೋರಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹಿರೇಕೆರೂರು ತಾಲೂಕಿನಲ್ಲಿ ಸಹ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಳವಾಗಿವೆ. ಜಿಲ್ಲೆಯಲ್ಲಿ ಈವರೆಗೆ 935 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇಂದು ಸಹ 86 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ. ಹಿರೇಕೆರೂರು ತಾಲೂಕಿನಲ್ಲೇ ಒಟ್ಟು 101 ಜನರಿಗೆ ಕೊರೊನಾ ಸೋಂಕು ತಗುಲಿದೆ.