ಬೆಂಗಳೂರು-ಮಂಗಳೂರು ರೈಲ್ವೆ ಹಳಿ ಮೇಲೆ ಗಜರಾಜನ ವಾಕಿಂಗ್‌

29-03-21 10:42 pm       Headline Karnataka News Network   ಕರ್ನಾಟಕ

ಶಿರಾಡಿ ಘಾಟ್ ಸಮೀಪದ ಮಾರನಹಳ್ಳಿ ಗಡಿ ಭಾಗದಲ್ಲಿ ಓಡಾಡುತ್ತಿದ್ದ ಒಂಟಿಸಲಗ, ಇಂದು ಬೆಂಗಳೂರು- ಮಂಗಳೂರು ರೈಲ್ವೆ ಹಳಿ ಮೇಲೆ ನಡೆದು ಬರುವ ಮೂಲಕ ಕೆಲಕಾಲ ಆತಂಕ ಸೃಷ್ಟಿ ಮಾಡಿತ್ತು.

ಹಾಸನ, ಮಾ 29: ಶಿರಾಡಿ ಘಾಟ್ ಸಮೀಪದ ಮಾರನಹಳ್ಳಿ ಗಡಿ ಭಾಗದಲ್ಲಿ ಓಡಾಡುತ್ತಿದ್ದ ಒಂಟಿಸಲಗ, ಇಂದು ಬೆಂಗಳೂರು- ಮಂಗಳೂರು ರೈಲ್ವೆ ಹಳಿ ಮೇಲೆ ನಡೆದು ಬರುವ ಮೂಲಕ ಕೆಲಕಾಲ ಆತಂಕ ಸೃಷ್ಟಿ ಮಾಡಿತ್ತು.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಎಡಕುಮರಿ ರೈಲ್ವೆ ನಿಲ್ದಾಣದ ಸಮೀಪ ಇರುವ 60/600 ರ ಮೈಲಿಗಲ್ಲಿನ ಸುರಂಗ ಮಾರ್ಗದಿಂದ ಒಂಟಿ ಸಲಗವೊಂದು ರಾಜಾರೋಷವಾಗಿ ನಡೆದುಕೊಂಡು ಬರುವ ಮೂಲಕ ಆ ಭಾಗದ ಜನರಿಗೆ ಆತಂಕ ಸೃಷ್ಟಿಸಿದೆ.

ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಬರುತ್ತಿದ್ದ ಕಾಡಾನೆಯಿಂದ ರೈಲ್ವೆ ನಿಲ್ದಾಣದ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಭಯಭೀತರಾಗಿದ್ದಾರೆ. ಆನೆ ಸಂಚಾರ ಮಾಡಿದ ವಿಡಿಯೋವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್​ನಲ್ಲಿ ಚಿತ್ರೀಕರಣ ಮಾಡಿದ್ದು, ಈ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

2020ರಲ್ಲಿ ಆನೆಯೊಂದು ರೈಲ್ವೆ ಹಳಿ ಮೇಲೆ ದಾಟುವಾಗ ರೈಲಿಗೆ ಸಿಲುಕಿ ಸಾವಿಗೀಡಾಗಿತ್ತು. ಇದರ ಬೆನ್ನಲ್ಲೇ ಈಗ ಆನೆ ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಬಂದಿರುವುದು, ಅದರಲ್ಲೂ ಸುರಂಗಮಾರ್ಗದ ಒಳಗಡೆಯಿಂದ ಆನೆ ಹೊರ ಬಂದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿತ್ತು. ಒಂದು ವೇಳೆ ಇದೇ ವೇಳೆಗೆ ಮಂಗಳೂರಿನಿಂದ ಅಥವಾ ಬೆಂಗಳೂರಿನಿಂದ ರೈಲು ಸಂಚಾರವಿರುತ್ತಿದ್ದರೆ ಆನೆ ಅಪಘಾತದಲ್ಲಿ ಸಾವಿಗೀಡಾಗುತ್ತಿತ್ತು.

Elephant walks on railway track near shiradi ghats of Bengaluru - Mangalore. The video of this has gone viral on social media.