ಸಿಎಂ ವಿರುದ್ಧ ರಾಜ್ಯಪಾಲರಿಗೆ ಪತ್ರ ; ಯಡಿಯೂರಪ್ಪ ವಿರೋಧಿ ಬಣದ ಹೊಸ ದಾಳ ! ಬಿಜೆಪಿಗೆ ಮತ್ತೆ ಇಕ್ಕಟ್ಟು

01-04-21 09:44 pm       Headline Karnataka News Network   ಕರ್ನಾಟಕ

ಸಿಎಂ ಯಡಿಯೂರಪ್ಪ ಮತ್ತು ಹಿರಿಯ ಸಚಿವ ಕೆ.ಎಸ್. ಈಶ್ವರಪ್ಪ ನಡುವಿನ ಮುಸುಕಿನ ಗುದ್ದಾಟ ಮತ್ತೆ ಬೀದಿಗೆ ಬಂದಿದೆ.

ಬೆಂಗಳೂರು, ಎ.1: ಸಿಎಂ ಯಡಿಯೂರಪ್ಪ ಮತ್ತು ಹಿರಿಯ ಸಚಿವ ಕೆ.ಎಸ್. ಈಶ್ವರಪ್ಪ ನಡುವಿನ ಮುಸುಕಿನ ಗುದ್ದಾಟ ಮತ್ತೆ ಬೀದಿಗೆ ಬಂದಿದೆ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ತನ್ನ ಇಲಾಖೆಗೆ ಅನುದಾನ ನೀಡುವ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಅಸಮಾಧಾನಗೊಂಡು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅಲ್ಲದೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಗೂ ಪತ್ರ ಬರೆದು ರಾಜ್ಯ ಬಿಜೆಪಿ ಸರಕಾರದಲ್ಲಿ ಕಿಡಿ ಎಬ್ಬಿಸಿದ್ದಾರೆ.

Karnataka Minister K S Eshwarappa tests positive for Covid-19 | Deccan  Herald

ರಾಜ್ಯದಲ್ಲಿ ಸಚಿವನಾಗಿರುವ ವ್ಯಕ್ತಿ ಮುಖ್ಯಮಂತ್ರಿ ವಿರುದ್ಧ ಅಸಮಾಧಾನಗೊಂಡು ರಾಜ್ಯಪಾಲರಿಗೆ ಪತ್ರ ಬರೆದು ಸಿಟ್ಟು ವ್ಯಕ್ತಪಡಿಸಿದ್ದು ಇದೇ ಮೊದಲು. ಯಾವುದೇ ಸರಕಾರದಲ್ಲಿಯೂ ಈ ರೀತಿಯ ಬೆಳವಣಿಗೆ ನಡೆದಿಲ್ಲ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಶಿವಮೊಗ್ಗ ಜಿಲ್ಲೆಯ ಅವಳಿ ಸಾಧಕರು ಎಂದೇ ಹೆಸರು ಮಾಡಿರುವ ಕೆ.ಎಸ್. ಈಶ್ವರಪ್ಪ ಮತ್ತು ಯಡಿಯೂರಪ್ಪ ಪಕ್ಷದ ಅಧ್ಯಕ್ಷರಾಗಿ ಬಿಜೆಪಿಯನ್ನು ತಳಮಟ್ಟದಿಂದ ಅಧಿಕಾರದ ಮಟ್ಟಕ್ಕೆ ತಂದವರು. ಆದರೆ, ಕಳೆದ ಹಲವು ವರ್ಷಗಳಿಂದ ಹಾವು ಮುಂಗುಸಿಯಂತಾಗಿದ್ದವರು ಕಳೆದ ಚುನಾವಣೆಯಲ್ಲಿ ಎಲ್ಲವನ್ನೂ ಮರೆತು ಒಂದಾಗಿದ್ದರು.

Karnataka elections 2018: Karnataka Governor Vajubhai Vala not alone in  giving 15 days to prove majority - The Economic Times

ಈಗ ಮುಖ್ಯಮಂತ್ರಿ ವಿರುದ್ಧವೇ ಕತ್ತಿಮಸೆದು ರಾಜ್ಯಪಾಲರಿಗೆ ದೂರು ಬರೆಯುವ ಮೂಲಕ ಬಿಜೆಪಿ ಸರಕಾರದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಬಹಿರಂಗ ಮಾಡಿದ್ದಾರೆ. ಅಲ್ಲದೆ, ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯ ಉಸ್ತುವಾರಿಗೆ ಪತ್ರ ಬರೆದು ತಮ್ಮ ಇಲಾಖೆಯಲ್ಲಿ ಮುಖ್ಯಮಂತ್ರಿ ಕೈಯಾಡಿಸುತ್ತಿರುವ ವಿಚಾರದಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ಗ್ರಾಮೀಣಾಭಿವೃದ್ಧಿ ಇಲಾಖೆಯ ಅನುದಾನವನ್ನು ನೇರವಾಗಿ ಶಾಸಕರಿಗೆ ಮುಖ್ಯಮಂತ್ರಿ ಬಿಡುಗಡೆ ಮಾಡಿದ್ದು ಈಶ್ವರಪ್ಪ ಸಿಟ್ಟಿಗೆ ಕಾರಣ ಎನ್ನಲಾಗುತ್ತಿದೆ. ಆದರೆ ಅಷ್ಟೇ ಆಗಿರುತ್ತಿದ್ದರೆ, ಪಕ್ಷದ ನಾಯಕರ ಮಧ್ಯೆ ಅಸಮಾಧಾನ ಹೊರಹಾಕಿ ಸರಿಮಾಡಿಕೊಳ್ಳುತ್ತಿದ್ದರು. ರಾಜ್ಯಪಾಲರಿಗೇ ದೂರು ಕೊಟ್ಟು ಪಕ್ಷದೊಳಗಿನ ವೈಮನಸ್ಯವನ್ನು ಜಾಹೀರುಗೊಳಿಸುವ ಅಗತ್ಯವೂ ಇರಲಿಲ್ಲ.

BJP announces 11 more candidates for WB polls, changes nominees in 2 seats  | Business Standard News

ಇದರ ಹಿಂದೆ, ಯಡಿಯೂರಪ್ಪ ವಿರೋಧಿ ಬಣದ ಕುತಂತ್ರ ಕೆಲಸ ಮಾಡಿದೆ ಅನ್ನುವ ಮಾತು ಕೇಳಿಬರುತ್ತಿದೆ. ಮುಖ್ಯಮಂತ್ರಿ ಬದಲಾವಣೆ ಖಚಿತ ಎನ್ನುತ್ತಲೇ ತಿರುಗುತ್ತಿದ್ದವರು ಈಗ ಸುಮ್ಮನಾಗಿದ್ದಾರೆ. ಮತ್ತೊಂದೆಡೆ ತನ್ನನ್ನು ಬದಲಾವಣೆ ಮಾಡಲು ಅಸಾಧ್ಯ ಎನ್ನುವ ಸಂದೇಶ ನೀಡುತ್ತಲೇ ಸರಕಾರದಲ್ಲಿ ಯಡಿಯೂರಪ್ಪ ತನ್ನ ಹಿಡಿತ ಗಟ್ಟಿಗೊಳಿಸಿದ್ದಾರೆ. ಇದೇ ವೇಳೆ, ಸಿಎಂ ಪುತ್ರ ವಿಜಯೇಂದ್ರ ಕೂಡ ಎಲ್ಲದರಲ್ಲೂ ಕೈಯಾಡಿಸುತ್ತಾ ರಾಜ್ಯದಲ್ಲಿ ಪಕ್ಷದ ಶಾಸಕರ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ. ಇದನ್ನು ಮನಗಂಡೇ ಈಶ್ವರಪ್ಪ ಅವರ ಸಿಟ್ಟಿನ ನೆಪದಲ್ಲಿ ಯಡಿಯೂರಪ್ಪ ವಿರೋಧಿಗಳು ಹೊಸ ದಾಳ ಉರುಳಿಸಿದ್ದಾರೆ ಅನ್ನುವ ಶಂಕೆಯೂ ಮೂಡತೊಡಗಿದೆ. ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಮೂಲಕ ಉದ್ದೇಶಪೂರ್ವಕವಾಗೇ ಬಹಿರಂಗ ಪತ್ರ ಬರೆಸಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.

Karnataka CM's son Vijayendra tests positive for coronavirus | The News  Minute

ಯಾಕಂದ್ರೆ, ಈಶ್ವರಪ್ಪ ಪತ್ರ ಬರೆದ ವಿಚಾರ ಬಹಿರಂಗವಾಗುತ್ತಲೇ ಕೆಲವರು ಮುಖ್ಯಮಂತ್ರಿ ಬದಲಾವಣೆಯ ಆಗ್ರಹ ಮುಂದಿಟ್ಟಿದ್ದಾರೆ. ಇನ್ನು ಕೆಲವು ಯಡಿಯೂರಪ್ಪ ಬಳಗದವರು ಸರಕಾರದ ಒಳಗೆ ಭಿನ್ನಮತ ತಂದಿಟ್ಟ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಎರಡೂ ಹೊಸ ಬೆಳವಣಿಗೆಯಾಗಿದ್ದು, ರಾಜ್ಯದಲ್ಲಿ ಮೂರು ಉಪ ಚುನಾವಣೆ ಆಗುತ್ತಿರುವ ಹೊತ್ತಲ್ಲೇ ಕಾಣಿಸಿಕೊಂಡಿದ್ದು ಬಿಜೆಪಿ ಪಾಲಿಗೆ ಮೈನಸ್ ಆಗಲಿದೆ. ಸಿಡಿ ಪ್ರಕರಣದಿಂದಾಗಿ ನಲುಗಿ ಹೋಗಿರುವ ಬಿಜೆಪಿ ನಾಯಕರು ಈ ಹೊಸ ಬೆಳವಣಿಗೆಯಿಂದ ಮತ್ತೆ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ಹಿರಿಯ ಸಚಿವರಾಗಿ ಈಶ್ವರಪ್ಪ ಸಮಸ್ಯೆಯನ್ನು ರಾಜ್ಯಪಾಲರ ಅಂಗಳಕ್ಕೆ ಒಯ್ದಿದ್ದು ಸರಿಯಲ್ಲ ಎಂದಿದ್ದಾರೆ. ಯಾವುದೇ ಅಸಮಾಧಾನ ಇದ್ದರೂ, ಸರಕಾರದ ಒಳಗೇ ಪರಿಹರಿಸಿಕೊಳ್ಳಬೇಕು ಎನ್ನುವ ಮೂಲಕ ಈಶ್ವರಪ್ಪ ನಡೆಯನ್ನು ಟೀಕಿಸಿದ್ದಾರೆ. ಇದೇ ವೇಳೆ, ಪಕ್ಷದ ಉಸ್ತುವಾರಿ ಅರುಣ್ ಸಿಂಗ್ ಕೂಡ, ಈಶ್ವರಪ್ಪ ಪಕ್ಷದ ವೇದಿಕೆಯಲ್ಲೇ ಚರ್ಚೆ ನಡೆಸಬೇಕಿತ್ತು. ಮುಖ್ಯಮಂತ್ರಿ ವಿರುದ್ಧದ ಅಸಮಾಧಾನವನ್ನು ರಾಜ್ಯಪಾಲರ ಬಳಿಗೆ ಒಯ್ಯಬಾರದಿತ್ತು ಎಂದಿದ್ದಾರೆ.

A Karnataka BJP minister has submitted a formal complaint against Chief Minister B S Yediyurappa to Governor Vajubhai Vala, accusing him of “serious lapses” and of running the administration.