ಧಾರವಾಡದ ಆಫೋಸ್ ಮಾವುಗಳಿಗೆ ಭಾರೀ ಡಿಮ್ಯಾಂಡ್ ; ಮೊದಲ ಬಾರಿಗೆ ಅರಬ್ ದೇಶಗಳಿಗೆ ರಫ್ತು !!

15-04-21 02:22 pm       Headline Karnataka News Network   ಕರ್ನಾಟಕ

ಮೊದಲ ಬಾರಿಗೆ ಧಾರವಾಡದ ಆಪೋಸ್ ಮಾವು ಅರಬ್ ರಾಷ್ಟ್ರಗಳಿಗೆ ರಫ್ತಾಗುತ್ತಿದೆ.

ಧಾರವಾಡ,ಎ.15: ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಎಲ್ಲೆಡೆ ಹಣ್ಣುಗಳ ರಾಜ ಮಾವಿನ ಹಣ್ಣುಗಳ ಸಾಮ್ರಾಜ್ಯ ಶುರುವಾಗುತ್ತದೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಮಾವಿನ ಹಣ್ಣುಗಳು ಜನರನ್ನು ಆಕರ್ಷಿಸುತ್ತವೆ. ಅದರಲ್ಲೂ ಧಾರವಾಡದ ಆಪೋಸ್ ಮಾವಿನ ಹಣ್ಣಂತೂ ಎಲ್ಲರ ನಾಲಿಗೆ ಚಪಲವನ್ನು ತೀರುಸುತ್ತದೆ. ಇಂಥ ಹಣ್ಣಿಗೆ ಈ ಬಾರಿ ಶುಕ್ರದೆಸೆ ಬಂದಿದೆ. ಮೊದಲ ಬಾರಿಗೆ ಧಾರವಾಡದ ಆಪೋಸ್ ಮಾವು ಅರಬ್ ರಾಷ್ಟ್ರಗಳಿಗೆ ರಫ್ತಾಗುತ್ತಿದೆ. ಇದರಿಂದಾಗಿ ಮಾವು ಬೆಳೆಗಾರರು ಸಂತಸದಲ್ಲಿದ್ದಾರೆ.

ಹಣ್ಣುಗಳ ರಾಜ ಮಾವು ಎಂದರೆ ಎಂಥವರೂ ಕೂಡ ಒಂದು ಕ್ಷಣ ಕಣ್ಣರಳಿಸುತ್ತಾರೆ. ಅದರ ರುಚಿಯೇ ಅಂಥದ್ದು. ಅದೇ ಕಾರಣಕ್ಕೆ ಮಾವಿಗೆ ಹಣ್ಣುಗಳ ರಾಜ ಅಂತ ಕರಿಯುತ್ತಾರೆ. ಅದರಲ್ಲೂ ರಾಜ್ಯದಲ್ಲಿಯೇ ಅತಿ ಹೆಚ್ಚು ಮಾವು ಬೆಳೆಯುವ ಧಾರವಾಡ ಜಿಲ್ಲೆಯ ಆಪೋಸ್ ಕಂಡರಂತೂ ಜನರು ಮುಗಿ ಬೀಳುತ್ತಾರೆ. ಧಾರವಾಡದ ಆಪೋಸ್ ಮಾವಿನ ಹಣ್ಣಿಗೆ ದೇಶದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲಿಯೂ ಭಾರಿ ಬೇಡಿಕೆ ಇದೆ. ಆದರೆ ಇದುವರೆಗೂ ಈ ಹಣ್ಣು ಅರಬ್ ರಾಷ್ಟ್ರಗಳ ಮಾರುಕಟ್ಟೆಗೆ ಹೋಗಿರಿಲ್ಲ. ಆದರೆ ಮೊದಲ ಬಾರಿ ಅಲ್ಲಿಗೂ ರಫ್ತಾಗಿದೆ. ಮುಂಬೈ ವ್ಯಾಪಾರಿಗಳ ಮೂಲಕ ಈ ಹಣ್ಣು ಧಾರವಾಡದಿಂದ ದುಬೈ ಮಾರುಕಟ್ಟೆ ಸೇರಿದೆ. ಇದರಿಂದಾಗಿ ಧಾರವಾಡದ ಮಾವಿನ ಕಿರೀಟಕ್ಕೆ ಮತ್ತೊಂದು ಗರಿ ಸೇರಿದಂತಾಗಿದೆ.

ಮೊದಲ ಬಾರಿಗೆ ಅರಬ್​ಗೆ

ಧಾರವಾಡ ಜಿಲ್ಲೆಯಲ್ಲಿ 8,445 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಈ ಬಾರಿ ಆರಂಭದಲ್ಲಿ ಗಿಡಗಳಲ್ಲಿ ಹೂವು ನೋಡಿದರೆ ಎಂಥವರಿಗೂ ಖುಷಿಯಾಗುವಂತಿತ್ತು. ಅದರ ಲೆಕ್ಕಾಚಾರದಲ್ಲಿ ಈ ಬಾರಿ ಸುಮಾರು 77 ಸಾವಿರ ಮೆಟ್ರಿಕ್ ಟನ್ ಮಾವಿನ ಉತ್ಪಾದನೆಯನ್ನು ಕೂಡ ನಿರೀಕ್ಷಿಸಲಾಗಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ನಿರೀಕ್ಷೆಗಳೆಲ್ಲವೂ ಹುಸಿಯಾಗಿ ಹೋಗಿ ಅರ್ಧದಷ್ಟು ಮಾವು ಸಿಗುವುದೇ ದುಸ್ತರ ಎನ್ನುವ ಹಾಗೆ ಆಗಿತ್ತು. ಆದರೆ ಇದೀಗ ಅರಬ್ ರಾಷ್ಟ್ರಗಳತ್ತ ಮಾವು ಮುಖ ಮಾಡಿರುವುದರಿಂದ ರೈತರು ಕೊಂಚ ನಿರಾಳರಾಗಿದ್ದಾರೆ. ಕಳೆದ ಬಾರಿ ಸಾಕಷ್ಟು ಪ್ರಮಾಣದಲ್ಲಿ ಮಾವು ಬಂದಿದ್ದರೂ ಕೊರೊನಾ ಹಾವಳಿಯಿಂದಾಗಿ ಮಾರುಕಟ್ಟೆಗೆ ಮಾವು ಹೋಗದೇ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದರು. ಈ ಬಾರಿ ಮಾವು ಅರಬ್ ರಾಷ್ಟ್ರಕ್ಕೆ ರಫ್ತಾಗುತ್ತಿರುವುದಕ್ಕೆ ರೈತರಿಗೆ ಖುಷಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಮಾವು ಬೆಳೆಗಾರರು ಒಂದಿಲ್ಲ ಒಂದು ಸಮಸ್ಯೆಯಿಂದ ಬಳಲುತ್ತಲೇ ಇದ್ದಾರೆ. ಒಂದು ಕಾಲಕ್ಕೆ ಹಣ್ಣುಗಳ ರಾಜ ಮಾವಿನಿಂದಲೇ ಅರ್ಥಿಕವಾಗಿ ಸದೃಢರಾಗಿದ್ದ ರೈತರು ಇವತ್ತು ಅದೇ ಬೆಳೆಯಿಂದ ನಷ್ಟ ಅನುಭವಿಸಿ ಹೈರಾಣಾಗುತ್ತಾ ಹೋಗುತ್ತಿದ್ದಾರೆ. ಈ ಸಂಕಟದ ಸಮಯದಲ್ಲಿ ಅರಬ್ ರಾಷ್ಟ್ರಕ್ಕೆ ಹಣ್ಣುಗಳ ರಾಜನ ನಡಿಗೆ ರೈತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಇದರೊಂದಿಗೆ ಸರ್ಕಾರವೂ ರೈತರಿಗೆ ರಫ್ತು ಮಾಡಲು ಅನುಕೂಲವಾಗುವಂತೆ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎನ್ನುವುದು ಜನರ ಆಶಯವಾಗಿದೆ.

Dharwad Mangos now to be exported to Arab nations for the first time on high demand.