ಕೊರೊನಾದಿಂದ ಪ್ರತಿ ಸಾವು ಕೂಡ ಸರಕಾರಿ ಪ್ರಾಯೋಜಿತ ಕೊಲೆ ; ಎಸ್.ಆರ್. ಪಾಟೀಲ

21-04-21 01:06 pm       Headline Karnataka News Network   ಕರ್ನಾಟಕ

ಕೊರೊನಾ ಸೋಂಕಿನಿಂದ ಸಂಭವಿಸುತ್ತಿರುವ ಪ್ರತೀ ಸಾವು ಕೂಡ ಸರಕಾರಿ ಪ್ರಾಯೋಜಿತ ಕೊಲೆ ಎಂಬುದಾಗಿ ಎಸ್.ಆರ್. ಪಾಟೀಲ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು, ಎ.21: ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಸಂಭವಿಸುತ್ತಿರುವ ಪ್ರತೀ ಸಾವು ಕೂಡ ಸರಕಾರಿ ಪ್ರಾಯೋಜಿತ ಕೊಲೆ ಎಂಬುದಾಗಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಕೊರೊನಾ ಸೋಂಕಿನ ಹೆಚ್ಚಳ ಮತ್ತು ಬೆಂಗಳೂರಿನಲ್ಲಿ ಕಾಣಿಸಿಕೊಂಡಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಎಸ್.ಆರ್ ಪಾಟೀಲ, ಆಸ್ಪತ್ರೆಗಳಲ್ಲಿ ರೆಮ್ ಡಿಸಿವಿಆರ್ ಇಲ್ಲ. ಬೆಡ್ ಇಲ್ಲ. ಆಮ್ಲಜನಕ ಇಲ್ಲ. ವೆಂಟಿಲೇಟರ್ ಇಲ್ಲ. ವ್ಯಾಕ್ಸಿನ್ ಕೊರತೆಯ ಸ್ಥಿತಿ ಎದುರಾಗಿದೆ. ಜನರಿಗೆ ಕನಿಷ್ಠ ಚಿಕಿತ್ಸೆಯನ್ನು ಕೊಡಿಸಲಾಗದ ಈ ಸರಕಾರ ಯಾವ ಪುರುಷಾರ್ಥಕ್ಕೆ ಇರಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

ಮೇ ತಿಂಗಳ ಅಂತ್ಯದ ವೇಳೆಗೆ ಕೊರೊನಾ ಸೋಂಕು ತೀವ್ರವಾಗಿ ಹೆಚ್ಚಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಬೆಂಗಳೂರಿನಲ್ಲಿ ಪರಿಸ್ಥಿತಿ ಕೈಮೀರಿದೆ. ಮುಂದೆ ಭೀಕರ ಸ್ಥಿತಿ ಎದುರಿಸಲು ಸಜ್ಜಾಗಬೇಕಾದ ಸರಕಾರ ಆಸ್ಪತ್ರೆಗಳಲ್ಲಿ ಬೆಡ್ ಹೆಚ್ಚಳ, ವೆಂಟಿಲೇಟರ್ ಸೌಲಭ್ಯ, ಆಕ್ಸಿಜನ್ ನೀಡದೇ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.'