ಒಂದೇ ಮಳೆಗೆ 314 ಕೋಟಿ ವೆಚ್ಚದ ರೈಲ್ವೆ ನಿಲ್ದಾಣದ ಗತಿ ನೋಡಿ

26-04-21 01:53 pm       Headline Karnataka News Network   ಕರ್ನಾಟಕ

ದೇಶದ ಮೊದಲ ರೈಲು ನಿಲ್ದಾಣ ಎಂಬ ಹಿರಿಮೆಗೆ ಪಾತ್ರವಾಗಿರುವ ನಗರದ ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ಒಂದೇ ಮಳೆಗೆ ಅರ್ಧದಷ್ಟು ಮುಳುಗಿ ಹೋಗಿದೆ.

Photo credits : Prajavaani

ಬೆಂಗಳೂರು,ಏ. 26: ಸಂಪೂರ್ಣ ಹವಾನಿಯಂತ್ರಿತ ಸೌಲಭ್ಯ ಹೊಂದಿರುವ ದೇಶದ ಮೊದಲ ರೈಲು ನಿಲ್ದಾಣ ಎಂಬ ಹಿರಿಮೆಗೆ ಪಾತ್ರವಾಗಿರುವ ನಗರದ ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ಒಂದೇ ಮಳೆಗೆ ಅರ್ಧದಷ್ಟು ಮುಳುಗಿ ಹೋಗಿದೆ.

₹314 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ನಿಲ್ದಾಣ ಉದ್ಘಾಟನೆಗೆ ಸಿದ್ಧವಾಗಿದೆ. ಆದರೆ, ಕಳೆದ ಶುಕ್ರವಾರ ರಾತ್ರಿ ಸುರಿದ ಮಳೆಗೆ ನಿಲ್ದಾಣದ ಚಾವಣಿಗಳಲ್ಲಿ ನೀರು ಸೋರಿದೆ. ಅಲ್ಲದೆ, ನಿಲ್ದಾಣದೊಳಗೆ ಪ್ಲಾಟ್‌ಫಾರಂ 1 ಮತ್ತು 7ನ್ನು ಸಂಪರ್ಕಿಸಲು ನಿರ್ಮಿಸಲಾಗಿರುವ ಸುರಂಗ ಮಾರ್ಗದಲ್ಲಿ ಎರಡು ಅಡಿಗಿಂತ ಹೆಚ್ಚು ಎತ್ತರದಲ್ಲಿ ನೀರು ನಿಂತಿದೆ’ ಎಂದು ಸ್ಥಳೀಯರೊಬ್ಬರು ಹೇಳಿದರು.

‘ವಿಶ್ವದರ್ಜೆಯ ನಿಲ್ದಾಣ ಇದಾಗಿರಲಿದೆ ಎಂಬ ಆಶಾಭಾವ ನಮ್ಮದಾಗಿತ್ತು. ಆದರೆ, ಒಂದೇ ಮಳೆಗೆ ನಿಲ್ದಾಣದ ಕಳಪೆ ಗುಣಮಟ್ಟದ ಅನಾವರಣವಾಗಿದೆ‘ ಎಂದರು.

ಸಿಬ್ಬಂದಿ ಕರೆಸಿ ನೀರನ್ನೆಲ್ಲ ಹೊರ ಹಾಕಲಾಗಿದೆ. ನೀರು ಸೋರಿಕೆಗೆ ಕಾರಣ ಏನು ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಚಾವಣಿ ಎಲ್ಲ ಸೋರಿಕೆಯಾಗಿದೆ ಎಂಬುದು ಸುಳ್ಳು. ಸುರಂಗ ಅಥವಾ ಸಬ್‌ವೇದಲ್ಲಿ ನೀರು ಹರಿದಿದೆ. ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಲಾಗಿದ್ದು, ಈ ಕಾಮಗಾರಿ ಅಂತಿಮ ಹಂತದಲ್ಲಿದೆ. ಮುಂದೆ ಎಂತಹ ಮಳೆ ಬಂದರೂ ನೀರು ಸರಾಗವಾಗಿ ಹರಿದು ಹೋಗಿ ಸಂಗ್ರಹವಾಗುತ್ತದೆ. ನಿಲ್ದಾಣದಲ್ಲಿ ಮಳೆ ನೀರು ನಿಲ್ಲುವುದಿಲ್ಲ’ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್‌ ಹೆಗ್ಡೆ ಮಾಧ್ಯಮಗಳಿಗೆ ತಿಳಿಸಿದರು.