ಬಿ.ವೈ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ ಆರೋಪ

26-08-20 06:13 pm       Headline Karnataka News Network   ಕರ್ನಾಟಕ

ರಾಜ್ಯದಲ್ಲಿ ವಿಜಯೇಂದ್ರ ಸೂಪರ್ ಸಿಎಂ ಥರ ಕಾರ್ಯ ನಿರ್ವಹಿಸುತ್ತಿದ್ದು, ತಮ್ಮದೇ ಆದ 30 ಜನರ ಕೂಟ ರಚಿಸಿಕೊಂಡಿದ್ದಾರೆ.

ಮೈಸೂರು, ಆಗಸ್ಟ್ 26: ರಾಜ್ಯದಲ್ಲಿ ವಿಜಯೇಂದ್ರ ಸೂಪರ್ ಸಿಎಂ ಥರ ಕಾರ್ಯ ನಿರ್ವಹಿಸುತ್ತಿದ್ದು, ತಮ್ಮದೇ ಆದ 30 ಜನರ ಕೂಟ ರಚಿಸಿಕೊಂಡಿದ್ದಾರೆ. ವಿಪಕ್ಷಗಳ ಕೆಲ ಮುಖಂಡರೂ ಈ ಕೂಟದಲ್ಲಿದ್ದು 1 ಸಾವಿರ ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಎನ್​. ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿ ಗೋಷ್ಠಿ ನಡೆಸಿದ ಅವರು, ಕೆಲ ಬಿಜೆಪಿ ಶಾಸಕರು ಬಿವೈ ವಿಜಯೇಂದ್ರ ವಿರುದ್ಧ ದೂರು ನೀಡಿದ್ದಾರೆ. ಕಳೆದ ಒಂದು ವರ್ಷದಿಂದ ಬಿವೈ ವಿಜಯೇಂದ್ರ ಪರ್ಯಾಯ ಸರ್ಕಾರ ನಡೆಸುತ್ತಿದ್ದಾರೆ. ಶಾಸಕರ ಬೇಡಿಕೆಗಳು ಈಡೇರುತ್ತಿಲ್ಲ. ವಿಪಕ್ಷಗಳ ಕೆಲ ಮುಖಂಡರು ಸೇರಿ 30 ಜನರ ಕೂಟ ಮಾಡಿಕೊಂಡು ಒಂದು ಸಾವಿರ ಕೋಟಿ ಸಂಗ್ರಹ ಮಾಡಿದ್ದಾರೆ. ಈ ಹಣ ದೇಶ ವಿದೇಶಗಳಲ್ಲಿ ಹೂಡಿಕೆಯಾಗಿದೆ ಅಂತಾ ಬಿಜೆಪಿ ಶಾಸಕರೇ ಆರೋಪಿಸಿ ದೂರು ನೀಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎನ್.ಲಕ್ಷ್ಮಣ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೂಡಲೇ ಈ ಬಗ್ಗೆ ತನಿಖೆ‌ ನಡೆಸುವಂತೆ ಕಾಂಗ್ರೆಸ್ ಒತ್ತಾಯಿಸುತ್ತದೆ. ವಿಜಯೇಂದ್ರ ತಮ್ಮದೇ ಆದ 30 ಜನರ ಕೂಟ ರಚಿಸಿಕೊಂಡಿದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ಇಲಾಖೆ ರಚಿಸಿದ್ದಾರೆ. ಬೆಂಗಳೂರಿನ ಪ್ರಮುಖ ಹೊಟೇಲ್‌ಗಳಲ್ಲಿ 15 ರೂಂ ಬುಕ್ ಮಾಡಿಕೊಂಡು ತಮ್ಮ ಪರ್ಯಾಯ ಸರ್ಕಾರದ ಕಾರ್ಯಚಟುವಟಿಕೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಶಾಸಕರು ಆರು ಪುಟದ ದೂರನ್ನು ಸಲ್ಲಿಸಿದ್ದಾರೆ. ಕೊರೊನಾ ಹಾಗೂ ನೆರೆ ಹಾವಳಿ ನಿಯಂತ್ರಣಕ್ಕೆ ಹಣವಿಲ್ಲ ಎನ್ನುವ ಸಿಎಂ ತಮ್ಮ ಪುತ್ರನ ಬಳಿ ಇರುವ ಈ ಹಣ ಬಳಸಿಕೊಳ್ಳಿ ಎಂದಿದ್ದಾರೆ.

ಸೆಪ್ಟಂಬರ್ ಎರಡು, ಮೂರನೇ ವಾರದಲ್ಲಿ ನವದೆಹಲಿಯಲ್ಲಿ‌ ಮಹತ್ವದ ಸುದ್ದಿಗೋಷ್ಠಿ ನಡೆಸಿ ವಿಜಯೇಂದ್ರ ಮೇಲಿನ ಆರೋಪಕ್ಕೆ ಪೂರಕವಾದ ಎಲ್ಲಾ ಆಡಿಯೋ ಹಾಗೂ ವಿಡಿಯೋ ದಾಖಲೆ ಬಿಡುಗಡೆ ಮಾಡುತ್ತೇವೆ. ನಯಾಪೈಸೆ ಲೂಟಿಯಾಗಲು ಬಿಡಲ್ಲ ಎನ್ನುವ ಮೋದಿಯವರಿಗೆ ನಿಮ್ಮ ಮೂಗಿನ ಕೆಳಗೆ ತುಪ್ಪ ಇದೆ ಎಂದು ತೋರಿಸಲು ನವದೆಹಲಿಯಲ್ಲಿ ಪ್ರೆಸ್‌ಮೀಟ್ ಮಾಡಲು ಮುಂದಾಗಿದ್ದೇವೆ ಎಂದಿದ್ದಾರೆ. ಹತ್ತು ದಿನಗಳ ಒಳಗಾಗಿ ಈ ಪ್ರಕರಣವನ್ನ ಸಿಬಿಐ ಇಲ್ಲವೇ ನ್ಯಾಯಾಂಗ ತನಿಖೆಗೆ ವಹಿಸಬೇಕು. ತಪ್ಪಿದಲ್ಲಿ ಸುಪ್ರಿಂಕೋರ್ಟ್, ಐಟಿ ಇಡಿಗೆ ಒತ್ತಾಯಿಸುತ್ತೇವೆ ಎಂದೂ ಎನ್​. ಲಕ್ಷ್ಮಣ್ ಹೇಳಿದ್ದಾರೆ.