ವೃದ್ಧೆಯನ್ನು ಹತ್ಯೆಗೈದು 45 ಲಕ್ಷ ಲೂಟಿ ; ದಂಪತಿಗಳ ಅರೆಸ್ಟ್

26-08-20 10:42 pm       Headline Karnataka News Network   ಕರ್ನಾಟಕ

ಹಣಕಾಸಿನ ತೊಂದರೆಗೆ ಸಿಲುಕಿ ವೃದ್ಧೆಯ ಹತ್ಯೆಗೈದು 45 ಲಕ್ಷ ನಗದು ಹಾಗೂ ಚಿನ್ನಾಭರಣ ಲೂಟಿ ಮಾಡಿದ್ದ ದಂಪತಿ ಸೇರಿ ಮೂವರು ಆರೋಪಿಗಳನ್ನು ಕಾಡುಗೋಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.    

ಬೆಂಗಳೂರು, ಆಗಸ್ಟ್ 26: ಹಣಕಾಸಿನ ತೊಂದರೆಗೆ ಸಿಲುಕಿ ವೃದ್ಧೆಯ ಹತ್ಯೆಗೈದು 45 ಲಕ್ಷ ನಗದು ಹಾಗೂ ಚಿನ್ನಾಭರಣ ಲೂಟಿ ಮಾಡಿದ್ದ ದಂಪತಿ ಸೇರಿ ಮೂವರು ಆರೋಪಿಗಳನ್ನು ಕಾಡುಗೋಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.    
ಬಂಧಿತರನ್ನು ರಾಯಚೂರು ಜಿಲ್ಲೆಯ ವೀರೇಶ್, ಆತನ ಪತ್ನಿ ಚೈತ್ರಾ ಮತ್ತು ಪ್ರಶಾಂತ್ ಎಂದು ಗುರುತಿಸಲಾಗಿದೆ. ಇದೇ ತಿಂಗಳ ಆ.12ರ ಬೆಳಗ್ಗೆ 10.30ರ ವೇಳೆ ಕಾಡುಗೋಡಿಯ ಚನ್ನಸಂದ್ರದಲ್ಲಿ ಜಯಮ್ಮ(65) ಅವರ ಕೊಲೆ ನಡೆದಿತ್ತು. ಈ ಕೊಲೆಯಿಂದ ಬಡಾವಣೆಯ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದರು.

ಆರೋಪಿಗಳು ಕೊಲೆಗೈದು 45 ಲಕ್ಷ ರೂ.ಹಣ, 88 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಕಾಡುಗೋಡಿ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕೊಲೆ ಮಾಡಿರುವ ಆರೋಪಿ ವೀರೇಶ್ ಮತ್ತು ಚೈತ್ರಾ ದಂಪತಿ ಕಳೆದ ಎರಡು ವರ್ಷಗಳಿಂದ ಅಪ್ಪಯ್ಯಣ್ಣ, ಜಯಮ್ಮ ಅವರ ಮನೆಯಲ್ಲಿ ಬಾಡಿಗೆಗಿದ್ದರು. ವೀರೇಶ್ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರೆ ಚೈತ್ರಾ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಲಾಕ್‍ಡೌನ್‍ನಿಂದಾಗಿ ಕೆಲಸವಿಲ್ಲದೆ ಬಾಡಿಗೆ ಕಟ್ಟಲಾಗದೇ ಆರ್ಥಿಕ ಸಂಕಷ್ಟದಲ್ಲಿ ಮುಳುಗಿದ್ದು, ದಂಪತಿ ಕಳ್ಳತನ ಮಾಡಲು ನಿರ್ಧರಿಸಿದ್ದರು.

ಅದರಂತೆ ತಮ್ಮದೇ ಗ್ರಾಮದಿಂದ ಪ್ರಶಾಂತ್ ಎಂಬ ಮತ್ತೊಬ್ಬ ಆರೋಪಿಯನ್ನು ಕರೆಸಿಕೊಂಡು ಅಪ್ಪಯ್ಯಣ್ಣ ವಿದ್ಯುತ್ ಬಿಲ್ ಪಾವತಿಸಲು ಹೋರಹೋಗಿದ್ದಾಗ ಜಯಮ್ಮ ಒಬ್ಬಂಟಿಯಾಗಿದ್ದನ್ನು ಗಮನಿಸಿ ಮೂವರು ಮನೆಗೆ ನುಗ್ಗಿ, ಕತ್ತು ಸೀಳಿ ಕೊಲೆ ಮಾಡಿ 45 ಲಕ್ಷ ನಗದು ಹಾಗೂ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದರು. ಕಾಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.