ಮೇ 17ರ ನಂತರ ರಾಜಧಾನಿ ಬೆಂಗಳೂರು ಅತಿ ಕೆಟ್ಟ ಸ್ಥಿತಿಯನ್ನು ಕಾಣಲಿದೆ ; ತಜ್ಞರ ಎಚ್ಚರಿಕೆ

10-05-21 03:13 pm       Bangalore Correspondent   ಕರ್ನಾಟಕ

ದೇಶದಲ್ಲಿ ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿ ಕರ್ನಾಟಕ ಇದ್ದು, ಮೇ 9ರ ಭಾನುವಾರ ಒಂದೇ ದಿನ 47,930 ಹೊಸ ಪ್ರಕರಣಗಳು ಪತ್ತೆಯಾಗಿದೆ.

ಬೆಂಗಳೂರು, ಮೇ 10: ಮೇ 17ರ ನಂತರ ರಾಜಧಾನಿ ಬೆಂಗಳೂರು ಕೋವಿಡ್ ಸೋಂಕಿನ ಅತಿ ಕೆಟ್ಟ ಸ್ಥಿತಿಯನ್ನು ಕಾಣಲಿದೆ ಎಂದು ಐಐಎಸ್ಸಿ ಸಂಸ್ಥೆಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ದೇಶದಲ್ಲಿ ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿ ಕರ್ನಾಟಕ ಇದ್ದು, ಮೇ 9ರ ಭಾನುವಾರ ಒಂದೇ ದಿನ 47,930 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಇದೇ ವೇಳೆ, ಮಹಾರಾಷ್ಟ್ರದಲ್ಲಿ 48,410 ಕೇಸುಗಳು ವರದಿಯಾಗಿದ್ದವು. ಮೇ 17ರ ವೇಳೆಗೆ ಬೆಂಗಳೂರು ಅತಿ ಹೆಚ್ಚು ಪ್ರಕರಣಗಳಿಗೆ ಸಾಕ್ಷಿಯಾಗಲಿದೆ. ಜೂನ್ 11ರ ವೇಳೆಗೆ ಬೆಂಗಳೂರು ಒಂದರಲ್ಲೇ 14 ಸಾವಿರ ಮಂದಿ ಸಾವು ಕಾಣಲಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.

ತಜ್ಞರ ಪ್ರಕಾರ, ಒಂದು ಪಾಸಿಟಿವ್ ಪ್ರಕರಣದ ಜೊತೆಗೆ ಮತ್ತೆರಡು ವರದಿಯಾಗದ ಕೇಸುಗಳಿರುತ್ತವೆ. ಇದು ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದಿದ್ದಾರೆ. ಭಾನುವಾರದ ಒಟ್ಟು 47 ಸಾವಿರ ಕೇಸುಗಳಲ್ಲಿ ಬೆಂಗಳೂರು ನಗರ ಒಂದರಲ್ಲೇ 20,897 ಕೇಸುಗಳಿವೆ. ಈ ರೀತಿಯ ಪ್ರಕರಣಗಳು ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಕಳೆದ ಮೇ 5ರಂದು ಕರ್ನಾಟಕದಲ್ಲಿ ಇದೇ ಮೊದಲ ಬಾರಿ 50 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಇದು ಈವರೆಗಿನ ಅತಿ ಹೆಚ್ಚು ಪ್ರಕರಣದ ದಾಖಲೆಯಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಮೇ 10ರಿಂದ 24ರ ವರೆಗೆ ಲಾಕ್ಡೌನ್ ರೀತಿಯ ನಿರ್ಬಂಧಗಳನ್ನು ರಾಜ್ಯದಲ್ಲಿ ಹೇರಿದ್ದರು. ಇದಕ್ಕೂ ಮುನ್ನ ಎ.27ರಿಂದ ಮೇ 12ರ ವರೆಗೆ ಕರ್ಫ್ಯೂ ನಿರ್ಬಂಧವನ್ನೂ ವಿಧಿಸಲಾಗಿತ್ತು.

ಇನ್ನೆರಡು ವಾರಗಳಲ್ಲಿ ಗರಿಷ್ಠ ಕೇಸ್

ಮುಂದಿನ ಎರಡು ವಾರಗಳಲ್ಲಿ ಕರ್ನಾಟಕದಲ್ಲಿ ಗರಿಷ್ಠ ಸಂಖ್ಯೆಯ ಪ್ರಕರಣಗಳು ಪತ್ತೆಯಾಗಲಿದೆ ಎಂದು ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಪ್ರೊಫೆಸರ್ ಡಾ. ಗಿರಿಧರ್ ಆರ್. ಬಾಬು ಹೇಳಿದ್ದಾರೆ. ಭಾರತ ಸರಕಾರದ ಕೋವಿಡ್ ತಾಂತ್ರಿಕ ಸಲಹೆಗಾರರ ಮಂಡಳಿಯ ಸದಸ್ಯರೂ ಆಗಿರುವ ಅವರು, ಬೆಂಗಳೂರಿನಲ್ಲಿ ಟೆಸ್ಟಿಂಗ್ ಕಡಿಮೆಯಿದೆ. ಆದರೂ ಪಾಸಿಟಿವ್ ಸಂಖ್ಯೆ ವಿಪರೀತ ಇದೆ. ಇನ್ನೆರಡು ವಾರಗಳಲ್ಲಿ ಇದು ಎಷ್ಟಾಗಬಹುದೆಂದು ಹೇಳಲಾಗದು. ಆದರೆ, ನಿರಂತರ ಟೆಸ್ಟಿಂಗ್ ನಡೆದಲ್ಲಿ ಮುಂದಿನ ಎರಡು ವಾರಗಳಲ್ಲಿ ಬೆಂಗಳೂರು ಅತಿ ಹೆಚ್ಚು ಪ್ರಕರಣಗಳನ್ನು ಕಾಣಲಿದೆ ಎಂದಿದ್ದಾರೆ.

ಹೊಸ ಪ್ರಕರಣಗಳ ಹೆಚ್ಚಳ ಕಂಡ 10ರಿಂದ 14 ದಿನಗಳಲ್ಲಿ ಸಾವಿನ ಸಂಖ್ಯೆಯೂ ಅದೇ ರೀತಿ ಹೆಚ್ಚಲಿದೆ ಎಂದು ಗಿರಿಧರ್ ಬಾಬು ಹೇಳಿದ್ದಾರೆ.