ಕೊರೊನಾ ಅಟ್ಟಹಾಸ; SSLC ಪರೀಕ್ಷೆ ಮುಂದೂಡಿಕೆ

13-05-21 05:28 pm       Headline Karnataka News Network   ಕರ್ನಾಟಕ

ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ದ್ವಿತೀಯ ಪಿಯುಸಿ ಬಳಿಕ ಈಗ ಎಸ್. ಎಸ್. ಎಲ್‌. ಸಿ. ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ.

ಬೆಂಗಳೂರು, ಮೇ 13; ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ದ್ವಿತೀಯ ಪಿಯುಸಿ ಬಳಿಕ ಈಗ ಎಸ್. ಎಸ್. ಎಲ್‌. ಸಿ. ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ. ಜೂನ್ 21ರಿಂದ ಪರೀಕ್ಷೆಗಳು ನಡೆಯಬೇಕಿತ್ತು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗುರುವಾರ ಈ ಕುರಿತು ಮಾಹಿತಿ ನೀಡಿದ್ದಾರೆ. "ಜೂನ್ 21 ರಿಂದ ಪ್ರಾರಂಭವಾಗಬೇಕಿರುವ ಎಸ್. ಎಸ್‌. ಎಲ್. ಸಿ. ಪರೀಕ್ಷೆಗಳನ್ನು ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ" ಎಂದು ಹೇಳಿದ್ದಾರೆ.

"ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ವಿದ್ಯಾರ್ಥಿ, ಪೋಷಕರು, ವಿವಿಧ ಶಾಲಾ ಸಂಘಟನೆಗಳ ಆತಂಕಗಳನ್ನು ಗಮನದಲ್ಲಿರಿಸಿಕೊಂಡು ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಕೋವಿಡ್ ಎರಡನೇ‌ ಅಲೆಯ ಪ್ರಸರಣ ಸಂಪೂರ್ಣ ತಹಬಂದಿಗೆ ಬಂದ ಸಂದರ್ಭದಲ್ಲಿ, ಸಾಕಷ್ಟು ಮುಂಚಿತವಾಗಿ ದಿನಾಂಕಗಳನ್ನು ಪ್ರಕಟಿಸಲಾಗುತ್ತದೆ" ಎಂದು ಸಚಿವರು ತಿಳಿಸಿದ್ದಾರೆ.

"ವಿದ್ಯಾರ್ಥಿಗಳು ವಿಚಲಿತರಾಗದೇ ಏಕಾಗ್ರತೆಯಿಂದ‌ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಬೇಕು. ಪರೀಕ್ಷೆಯ ಕುರಿತಂತೆ ಯಾವುದೇ ಕಾರಣಕ್ಕೂ ಆತಂಕಕ್ಕೊಳಗುವ ಅವಶ್ಯಕತೆ ಇಲ್ಲ" ಎಂದು ಸಚಿವರು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ಎಸ್. ಎಸ್. ಎಲ್. ಸಿ. ಪರೀಕ್ಷೆಯನ್ನು ಜೂನ್ 21ರಿಂದ ಜುಲೈ 5ರ ತನಕ ನಡೆಸಲಾಗುತ್ತದೆ ಎಂದು ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಕೋವಿಡ್ 2ನೇ ಅಲೆ ಹಿನ್ನಲೆಯಲ್ಲಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ.

ಕರ್ನಾಟಕದಲ್ಲಿ ಕೋವಿಡ್ ಹರಡುವಿಕೆ ತಡೆಯಲು 14 ದಿನಗಳ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಬುಧವಾರ ರಾಜ್ಯದಲ್ಲಿ 39,998 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 2053191ಕ್ಕೆ ಏರಿಕೆಯಾಗಿದೆ.

Amid the ongoing COVID-19 pandemic, the Karnataka Government has decided to postpone SSLC or Class 10 final exams.