ತುಳು ಭಾಷೆಗೆ ಅಧಿಕೃತ ಸ್ಥಾನ ;  ಕರಾವಳಿ ಶಾಸಕರಿಂದ ಸಿಎಂಗೆ ಹಕ್ಕೊತ್ತಾಯ 

27-08-20 11:35 pm       Bangalore Correspondent   ಕರ್ನಾಟಕ

ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯಾಗಿ ಮನ್ನಣೆ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕರಾವಳಿಯ ಶಾಸಕರು ಮನವಿ ಸಲ್ಲಿಸಿದ್ದಾರೆ. 

ಬೆಂಗಳೂರು, ಆಗಸ್ಟ್ 27: ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯಾಗಿ ಮನ್ನಣೆ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕರಾವಳಿಯ ಶಾಸಕರು ಮನವಿ ಸಲ್ಲಿಸಿದ್ದಾರೆ. 

ನಮ್ಮ ದೇಶದಲ್ಲಿನ ಬಹುತೇಕ ರಾಜ್ಯಗಳಲ್ಲಿ ತಮ್ಮ ತಮ್ಮ ರಾಜ್ಯದಲ್ಲಿನ ಉತ್ತಮ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಭಾಷೆಗಳನ್ನು ರಾಜ್ಯದ ಅದಿಕೃತ ಭಾಷೆಯನ್ನಾಗಿ ಸಂವಿಧಾನದ ಆರ್ಟಿಕಲ್ 345- ಬಿ ಪ್ರಕಾರ ಘೋಷಿಸಿಕೊಂಡಿದೆ. ಕಳೆದ 2011ನೇ ಜನಗಣತಿ ಪ್ರಕಾರ ಸುಮಾರು18.05 ಲಕ್ಷ ಜನರು ಅಧಿಕೃತವಾಗಿ ತುಳು ಭಾಷೆಯನ್ನು ಮಾತನಾಡುತ್ತಾರೆ.

ಕರ್ನಾಟಕ ತುಳು ಆಕಾಡೆಮಿ ಹಾಗೂ ತುಳು ಸಂಘ ಸಂಸ್ಥೆಗಳ ಪ್ರಕಾರ ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ಸರಿ ಸುಮಾರು 40 ಲಕ್ಷಕ್ಕೂ ಅಧಿಕ ತುಳು ಭಾಷಿಕರಿದ್ದು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸುಮಾರು ಒಂದುವರೆ ಕೋಟಿಗಿಂತಲೂ ಅಧಿಕ ತುಳು ಭಾಷಿಕರಿರುವುದನ್ನು ಗುರುತಿಸಲಾಗಿರುತ್ತದೆ.

ತಮ್ಮ ಅವಗಾಹಣೆಗಾಗಿ  ಸಲ್ಲಿಸಿರುವ ಮಾಹಿತಿಗಳನ್ನು ಅವಲೋಕಿಸಿ ಸಕಾಲದಲ್ಲಿ ತುಳು ಭಾಷೆಯನ್ನು ಕರ್ನಾಟಕದ ಅಧಿಕೃತ ಭಾಷೆ ಎಂದು ಸಂವಿಧಾನದ ಆರ್ಟಿಕಲ್ 345 ರ ಪ್ರಕಾರ ಘೋಷಿಸಲು ರಾಜ್ಯ ಸರ್ಕಾರ ಅನುಸರಿಸಬೇಕಾದ ಮತ್ತು ಈಗಾಗಲೇ ಕೈಗೊಂಡ ಕ್ರಮಗಳೊಂದಿಗೆ ಸಾಂವಿಧಾನಿಕ ನೀತಿ ನಿಯಮಗಳ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರ ಅನುಮೋದನೆ ನೀಡುವಂತೆ ಆಗ್ರಹಿಸಬೇಕು. ಈ ಮೂಲಕ ತುಳುನಾಡಿನ ಸಮಸ್ತರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಬೇಕೆಂದು ಕರಾವಳಿ ಜಿಲ್ಲೆಯ ಶಾಸಕರು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ. 

ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಈ ಕುರಿತಾದ ಸಾಂವಿಧಾನಿಕ ಕಾನೂನುಗಳ ಪ್ರಕಾರ ಪ್ರಸ್ತಾವನೆ ಮಂಡಿಸಿ ಅನುಮೋದನೆಯನ್ನು ಪಡೆದು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಮತ್ತು ಅಲ್ಲಿಂದ ಅನುಮೋದನೆ ಪಡೆಯುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಾಗಿ  ಸಿಎಂ ಯಡಿಯೂರಪ್ಪ ಅವರನ್ನು ಕರಾವಳಿಯ ಶಾಸಕರು ವಿನಂತಿಸಿದ್ದಾರೆ. 

ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿ, ಪುತ್ತೂರು ಶಾಸಕರಾದ ಸಂಜೀವ ಮಟಂದೂರು, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಹಾಗೂ ಶಾಂತಾರಾಮ‌ ಸಿದ್ದಿ ಉಪಸ್ಥಿತರಿದ್ದರು.