ಡಿವೈಎಸ್​ಪಿ ಗಣಪತಿ ಆತ್ಮಹತ್ಯೆ ಪ್ರಕರಣ; ಕೆ.ಜೆ. ಜಾರ್ಜ್​ ಸೇರಿ ಇಬ್ಬರಿಗೆ ಸಮನ್ಸ್​ ಜಾರಿ

28-08-20 02:45 pm       Dhruthi Anchan - Correspondant   ಕರ್ನಾಟಕ

ಡಿವೈಎಸ್​ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಜೆ. ಜಾರ್ಜ್​ಗೆ ಮತ್ತೆ ಸಂಕಷ್ಟ ಎದುರಾಗಿದೆ. ಡಿವೈಎಸ್​​ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಬಿಐ ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ವಿರುದ್ಧದ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

ಬೆಂಗಳೂರು, ಆಗಸ್ಟ್ 28: ಡಿವೈಎಸ್​​ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಬಿಐ ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ವಿರುದ್ಧದ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಈ ಮೂಲಕ ಮಾಜಿ ಸಚಿವ ಕೆ.ಜೆ. ಜಾರ್ಜ್​ಗೆ ಮತ್ತೆ ಸಂಕಷ್ಟ ಎದುರಾಗಿದೆ. 

ನ್ಯಾಯಾಧೀಶ ತ್ಯಾಜರಾಜ್ ಎನ್. ಇನವಳ್ಳಿ ಸಿಬಿಐ ಸಲ್ಲಿಸಿದ್ದ ಬಿ ರಿಪೋರ್ಟ್​ ಅನ್ನು ತಿರಸ್ಕರಿಸಿದ್ದಾರೆ. ಈ ಪ್ರಕರಣದ ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದಾರೆ. ಕೆ.ಜೆ.ಜಾರ್ಜ್, ಪ್ರಣಬ್ ಮೊಹಾಂತಿ, ಎ.ಎಂ.ಪ್ರಸಾದ್ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ. 

ಡಿವೈಎಸ್​ಪಿ ಗಣಪತಿ ಆತ್ಮಹತ್ಯೆ ಪ್ರಕರಣ ರಾಜ್ಯದ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದು ನಂತರದಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಸಿಬಿಐ ಈ ಪ್ರಕರಣದ ತನಿಖೆ ನಡೆಸಿ ಬಿ ರಿಪೋರ್ಟ್ ಸಲ್ಲಿಸಿತ್ತು. ಇದನ್ನು ಪ್ರಶ್ನಿಸಿ ಗಣಪತಿ ಅವರ ಪುತ್ರ ನೆಹಾಲ್ ಗಣಪತಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಾದ- ಪ್ರತಿವಾದ ಆಲಿಸಿದ ನ್ಯಾಯಾಪೀಠ ಸಿಬಿಐ ಸಲ್ಲಿಸಿದ್ದ ಬಿ ರಿಪೋರ್ಟ್​ ಅನ್ನು ತಿರಸ್ಕರಿಸಿದೆ. ಈ ಮೂಲಕ ಮಾಜಿ ಸಚಿವ ಕೆ.ಜೆ.ಚಾರ್ಜ್, ಎ.ಎಂ ಪ್ರಸಾದ್, ಪ್ರಣಬ್ ಮೊಹಾಂತಿಗೆ ಮತ್ತೆ ಸಂಕಷ್ಟ ಎದುರಾಗಿದೆ.

ಗಣಪತಿ ಅವರ ಸಾವಿನ ಪ್ರಕರಣದಲ್ಲಿ ಸಿಬಿಐ ಬಿ ರಿಪೋರ್ಟ್​ ಸಲ್ಲಿಸಿರುವುದಕ್ಕೆ ವಿಶೇಷ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಆತ್ಮಹತ್ಯೆ ಪ್ರಚೋದನೆಗೆ ಸಾಕಷ್ಟು ಸಾಕ್ಷಿಗಳಿದ್ದರೂ ಬಿ ರಿಪೋರ್ಟ್ ನೀಡಿರುವುದಕ್ಕೆ ಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿದೆ. ಈ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ಮುಂದೂಡಲಾಗಿದೆ.