ಕೆಎಸ್‌ಆರ್‌ಟಿಸಿ ಬಸ್‌ ಆಯ್ತು ಮಹಿಳಾ ಶೌಚಗೃಹ!!!

28-08-20 05:36 pm       Dhruthi Anchan - Correspondant   ಕರ್ನಾಟಕ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಹಿಳೆಯರಿಗಾಗಿಯೇ ಸಿದ್ದಪಡಿಸಿದ ರಾಜ್ಯದ ಮೊದಲ ಹೈಟೆಕ್ ಸ್ತ್ರೀ ಶೌಚಾಲಯ ಇಂದು ಲೋಕಾರ್ಪಣೆಯಾಗಿದೆ.

ಬೆಂಗಳೂರು, ಆಗಸ್ಟ್ 28:  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಹಿಳೆಯರಿಗಾಗಿಯೇ ಸಿದ್ದಪಡಿಸಿದ ರಾಜ್ಯದ ಮೊದಲ ಹೈಟೆಕ್ ಸ್ತ್ರೀ ಶೌಚಾಲಯ ಇಂದು ಲೋಕಾರ್ಪಣೆಯಾಗಿದೆ. ಬಸ್ ಶೌಚಾಲಯವನ್ನು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅನಾವರಣಗೊಳಿಸಿದರು. ಈ ವೇಳೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಇತರೆ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ‌ ಪ್ರಾಧಿಕಾರದ ವತಿಯಿಂದ ಸಾಮಾಜಿಕ ಕಳಕಳಿ ( CSR ) ಯೋಜನೆಯಡಿ ಈ ಶೌಚಗೃಹದ ನಿರ್ಮಾಣದ ವೆಚ್ಚವನ್ನು ಭರಿಸಲಾಗಿದೆ. 

ನಿಗಮದ ಮುಖ್ಯ ಕಾಳಜಿ ಮಹಿಳಾ ಸ್ವಾಸ್ಥ್ಯ ಸಮಾಜವಾಗಿದ್ದು ಆ ಹಿನ್ನೆಲೆಯಲ್ಲಿ ದೇಶದ ರಸ್ತೆ ಸಾರಿಗೆ ನಿಗಮದಲ್ಲಿಯೇ ಪ್ರಪ್ರಥಮ ಬಾರಿಗೆ ಇಂತಹ ಸುಸಜ್ಜಿತ ಶೌಚಾಲಯವನ್ನು ಅನುಪಯುಕ್ತ ಬಸ್ಸಿನಲ್ಲಿ ‌ನಿರ್ಮಿಸಲಾಗಿದೆ. ನಿಗಮವು ಹಲವು ಮಹಿಳಾ ಸ್ನೇಹಿ‌ ಉಪಕ್ರಮಗಳನ್ನು ಜಾರಿಗೆ ತಂದಿದ್ದು, ಬಸ್ ​ನಿಲ್ದಾಣ ಹಾಗೂ ಬಸ್ಸುಗಳನ್ನು ಮಹಿಳಾ ಸ್ನೇಹಿಯಾಗಿಸುವ ನಿಟ್ಟಿನಲ್ಲಿನ ಈ ಪ್ರಯತ್ನ ಮಾಡಲಾಗಿದೆ.

ಈ ಶೌಚಾಲಯದಲ್ಲಿ ಮಗುವಿಗೆ ಹಾಲುಣಿಸುವ ಸ್ಥಳ, ಸ್ಯಾನಿಟರಿ‌ ನ್ಯಾಪ್ಕಿನ್ ವೆಂಡಿಂಗ್ ಯಂತ್ರ, ಇನ್ಸಿನೇರೇಟರ್, ಮಕ್ಕಳ ಡೈಪರ್ ಬದಲಿಸುವ ಸ್ಥಳ, ವಾಷ್ ಬೇಸಿನ್​​ಗಳು,  ‌ಸೆನ್ಸಾರ್ ದೀಪಗಳು, ಸೋಲಾರ್ ವಿದ್ಯುತ್ ದ್ವೀಪಗಳನ್ನ  ಅಳವಡಿಸಲಾಗಿದೆ.

ಸ್ವಚ್ಛ ಹಾಗೂ ಆರೋಗ್ಯಕರ ಪರಿಸರ ನಿಗಮದ ಪ್ರಥಮ ಆದ್ಯತೆಯಾಗಿದ್ದು, ಕೊರೊನಾದ ಈ ಸಂದರ್ಭದಲ್ಲಿ, ಈ ಸ್ವಚ್ಛ ಹಾಗೂ ಸುಸಜ್ಜಿತ ಶೌಚಾಲಯ ಮಾದರಿಯಾಗಲಿದೆ. ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಸಾಕಾರ ಮಾಡುವ ನಿಟ್ಟಿನಲ್ಲಿ ಕೆ ಎಸ್​ಆರ್​ಟಿಸಿಯ ಪ್ರಯತ್ನ ಶ್ಲಾಘನೀಯ ಎಂದು ಸನ್ಮಾನ್ಯ ಉಪ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಹಾಗೂ ಇದೇ ರೀತಿಯಲ್ಲಿ ಅನುಪಯುಕ್ತ ಬಸ್​​ಗಳನ್ನ ವಿವಿಧ ಯೋಜನೆಗಳಿಗೆ ಉಪಯೋಗಿಸಲು ಸಲಹೆ ನೀಡಿದ್ದಾರೆ.