ರಾಜ್ಯದ ಮೊದಲ ರೋರೋ ರೈಲು ಸೇವೆಗೆ ಹಸಿರು ನಿಶಾನೆ ತೋರಿದ ಮುಖ್ಯಮಂತ್ರಿ

30-08-20 03:48 pm       Headline Karnataka News Network   ಕರ್ನಾಟಕ

ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಹಾಗೂ ಕೇಂದ್ರ ರಾಜ್ಯ ರೇಲ್ವೆ ಸಚಿವ ಸುರೇಶ್ ಅಂಗಡಿ ರಾಜ್ಯದ ಮೊದಲ ರೋ ರೋ ರೈಲು ಸೇವೆಗೆ ಚಾಲನೆ ನೀಡಿದರು.

ಬೆಂಗಳುರು, ಆಗಸ್ಟ್.30: ಬೆಂಗಳೂರು ಗ್ರಾಮಾಂತರದ  ನೆಲಮಂಗಲದಿಂದ ಮಹಾರಾಷ್ಟ್ರದ  ಸೊಲ್ಲಾಪುರದ   ಬಾಳೆ  ರೈಲ್ವೆ ನಿಲ್ದಾಣದ ನಡುವೆ ಸಂಚರಿಸುವ ರೋಲ್ಆನ್-ರೋಲ್ಆಫ್ ರೈಲು(ರೋ-ರೋ ರೈಲು)  ಸೇವೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದ್ದಾರೆ .

ಸರಕು ತುಂಬಿದ ಟ್ರಕ್ ಅಥವಾ ಲಾರಿಗಳ ಸಾಗಣೆಯ ಸೇವೆಗೆ ಈ ರೈಲು ಬಳಕೆಯಾಗಲಿದೆ. ಇದರ ಪ್ರಾಯೋಗಿಕ ಸಂಚಾರಕ್ಕೆ ಯಡಿಯೂರಪ್ಪ, ಗೃಹ ಕಚೇರಿ ಕೃಷ್ಣಾದಿಂದ ವಿಡಿಯೋ ಕಾನ್ಫರೆನ್ಸ್​ ಮೂಲಕ ಚಾಲನೆ ನೀಡಿದರು.

ಬೆಂಗಳೂರಿನ ನೆಲಮಂಗಲದಿಂದ ಮಹಾರಾಷ್ಟ್ರದ ಸೊಲ್ಲಾಪುರದ ಬಾಳೆಗೆ ಈ ರೈಲು ಸೇವೆ ಆರಂಭವಾಗಿದ್ದು,  ನೈರುತ್ಯ ರೈಲ್ವೆಯಲ್ಲಿ ಪ್ರಥಮವಾಗಿ ಆರಂಭವಾಗಿರುವ ರೋರೋ ರೈಲು ಇದಾಗಿದೆ.  ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದ ಕೃಷಿ ಉತ್ಪಾದನಾ ಪ್ರದೇಶ ಹಾಗೂ ಕೃಷಿ ಬಳಕೆ ಕೇಂದ್ರಗಳ ನಡುವೆ ಸಂಪರ್ಕ ಸಾಧಿಸುವ ಗುರಿ ಹೊಂದಿದೆ.