ಕೊಪ್ಪಳದಲ್ಲಿ ಸೃಷ್ಟಿಯಾಗಲಿದೆ ದೇಶದ ಮೊದಲ ಆಟಿಕೆ ಉತ್ಪಾದನಾ ಕ್ಲಸ್ಟರ್!!

31-08-20 09:39 am       Dhruthi Anchan - Correspondent   ಕರ್ನಾಟಕ

ಸ್ವಾವಲಂಬಿ ರಾಷ್ಟ್ರ ನಿರ್ಮಾಣಕ್ಕೆ ನರೇಂದ್ರ ಮೋದಿಯವರ #ವೋಕಲ್ ಫಾರ್ ಲೋಕಲ್ ಪರಿಕಲ್ಪನೆಗೆ ಅನುಗುಣವಾಗಿ ಆಟಿಕೆ ತಯಾರಿಕೆ ಮೂಲಕ ಆರ್ಥಿಕತೆ ಹಾಗು ಉದ್ಯೋಗ ಸೃಷ್ಟಿಗೆ ಬಲ ತುಂಬಲು ದೇಶದ ಮೊದಲ ಆಟಿಕೆ ಉತ್ಪಾದನಾ ಕ್ಲಸ್ಟರ್ ಕೊಪ್ಪಳದಲ್ಲಿ ಪ್ರಾರಂಭಿಸಲಾಗುತ್ತಿದೆ

ಬೆಂಗಳೂರು, ಆಗಸ್ಟ್ 31 : ಕೊಪ್ಪಳ ಜಿಲ್ಲೆಯಲ್ಲಿ ದೇಶದ ಮೊದಲ ಆಟಿಕೆ ಉತ್ಪಾದನಾ ಕೇಂದ್ರ ಸ್ಥಾಪನೆಗೆ ಮುಂದಾಗಿರುವ ಸಿಎಂ ಯಡಿಯೂರಪ್ಪ ನಿರ್ಧಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

 ಮನ್‍ಕಿ ಬಾತ್‍ನಲ್ಲಿ ಮಕ್ಕಳ ಆಟಿಕೆಗಳ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಈ ಹಿನ್ನಲೆ ಕೊಪ್ಪಳದ  400 ಎಕರೆ ಪ್ರದೇಶದಲ್ಲಿ ಆಟಿಕೆಗಳ ನಿರ್ಮಾಣಕ್ಕೆ ವಿಶೇಷ ಕೈಗಾರಿಕಾ ವಲಯ ಸ್ಥಾಪಿಸಲಾಗುತ್ತಿದ್ದು, ಉದ್ಯಮ ಸ್ಥಾಪನೆಗೆ ಸುಮಾರು 5000 ಕೋಟಿ ರೂ. ಬಂಡವಾಳ ಹೂಡಿಕೆ  ಮಾಡಲಾಗುತ್ತದೆ.

ಎಸ್‍ಇಝೆಡ್‍ನಲ್ಲಿ ಶ್ರೇಷ್ಠ ದರ್ಜೆಯ ಮೂಲಭೂತ ಸೌಲಭ್ಯ ಕಲ್ಪಿಸಲಾಗುತ್ತಿದ್ದು,  5 ವರ್ಷಗಳಲ್ಲಿ 40 ಸಾವಿರ ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಇದಕ್ಕೆ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತವನ್ನು ಆಟಿಕೆ ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ಕರೆಗೆ ರಾಜ್ಯಗಳು ಉತ್ಸಾಹವನ್ನು ನೋಡಿ ಸಂತೋಷವಾಗಿದೆ ಎಂದು ಹೇಳುವ ಮೂಲಕ ಬಿಎಸ್‌ವೈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ