ನಾಳೆಯಿಂದ ಬಾರ್‌ ಅಂಡ್‌ ರೆಸ್ಟೋರೆಂಟ್ ಓಪನ್‌ ; ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

31-08-20 10:23 pm       Headline Karnataka News Network   ಕರ್ನಾಟಕ

ಅನ್‌ಲಾಕ್‌-04ರಲ್ಲಿ ಷರತ್ತು ಬದ್ಧವಾಗಿ ಬಾರ್‌ ಮತ್ತು ರೆಸ್ಟೋರೆಂಟ್‌ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ನಾಳೆಯಿಂದ ರೆಸ್ಟೋರೆಂಟ್ ಮತ್ತು ಪಬ್‌ಗಳು ಬಹಳ ದಿನಗಳ ನಂತರ ಬಾಗಿಲು ತೆರೆಯುವುದು ಖಚಿತವಾಗಿದೆ.

ಬೆಂಗಳೂರು, ಆಗಸ್ಟ್ 31: ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನ್‌ಲಾಕ್-04 ಮಾರ್ಗಸೂಚಿ ನಾಳೆಯಿಂದ ಅನ್ವಯವಾಗಲಿದ್ದು, ಬಾರ್‌ ಮತ್ತು ರೆಸ್ಟೋರೆಂಟ್‌ಗಳು ರಾಜ್ಯಾದ್ಯಂತ ಮತ್ತೆ ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಕಳೆದ ವಾರವೇ ರಾಜ್ಯ ಸರ್ಕಾರ ಮಾಹಿತಿ ನೀಡಿತ್ತು. ಅದರಂತೆ ನಾಳೆಯಿಂದ ಬಾರ್‌ ಮತ್ತು ರೆಸ್ಟೋರೆಂಡ್‌ಗಳು ಆರು ತಿಂಗಳ ನಂತರ ಬಾಗಿಲು ತೆರೆಯಲಿವೆ. ಈ ಮೂಲಕ ಸಮಾಜದಲ್ಲಿ ಮತ್ತಷ್ಟು ಹಣ ಸಂಚಯವಾಗಲಿದೆ ಎನ್ನಲಾಗುತ್ತಿದೆ. ಆದರೆ, ಬಾರ್‌ ಮತ್ತು ರೆಸ್ಟೋರೆಂಟ್‌ ಆರಂಭವಾದರೂ ಸಹ ರಾಜ್ಯ ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಇಂದು ಬಿಡುಗಡೆ ಮಾಡಿದ್ದು, ಅದನ್ನು ಖಡ್ಡಾಯವಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದೆ.

ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯ ಪ್ರಕಾರ, "ನಾಳೆಯಿಂದ ಬಾರ್ ಅಂಡ್ ರೆಸ್ಟೋರೆಂಟ್ ಪಬ್‌ಗಳು ಬಾಗಿಲು ತೆರೆಯಲಿವೆ. ಆಹಾರದ ಜೊತೆಗೆ ಮದ್ಯ ಕುಡಿಯಲು ಅವಕಾಶ ನೀಡಲಾಗಿದೆ. ಆದರೆ, ಶೇ.50 ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದಕ್ಕಿಂತ ಹೆಚ್ಚಿನ ಗ್ರಾಹಕರಿಗೆ ಒಳಗೆ ಅನುಮತಿ ನೀಡುವಂತಿಲ್ಲ" ಎಂದು ಸೂಚಿಸಲಾಗಿದೆ.

"ಈ ಹಿಂದೆ ಪಾರ್ಸೆಲ್ ಗೆ ಮಾತ್ರ ಅನುಮತಿ ನೀಡಲಾಗಿತ್ತು. ಈಗ ಆ ಆದೇಶ ವಾಪಸ್ಸು ಪಡೆದು ಅಲ್ಲೇ ಮದ್ಯ ಕುಡಿಯಲು ಅವಕಾಶ ನೀಡಲಾಗಿದೆ. ಆದರೆ, ಕಂಟೋನ್ಮೆಂಟ್ ವಲಯಗಳಲ್ಲಿ ನಿರ್ಬಂಧ ಮಂದುವರಿಯಲಿದೆ. ಕಂಟೈನ್ಮೆಂಟ್ ವಲಯಗಳಾಚೆಗೆ ಮಾತ್ರ ಅನುಮತಿ. ಇದಲ್ಲದೆ, ಬಾರ್‌ ಮತ್ತು ಪಬ್‌ಗಳ ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಬಾರ್ ಮತ್ತು ರೆಸ್ಟೋರೆಂಟ್ ಕೆಲಸಗಾರರು ಗ್ರಾಹಕರ ಕೈಗೆ ಮದ್ಯ ಕೊಡುವಂತಿಲ್ಲ. ಇದರ ಜೊತೆಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ತಿಳಿಸಲಾಗಿದೆ.