ಪ್ರಸಿದ್ಧ ವಿಜ್ಞಾನ ಲೇಖಕ, ಡಿಆರ್ ಡಿಓ ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ ಇನ್ನಿಲ್ಲ

02-07-21 03:41 pm       Headline Karnataka News Network   ಕರ್ನಾಟಕ

ಪ್ರಸಿದ್ಧ ವಿಜ್ಞಾನ ಬರಹಗಾರ, ಡಿಆರ್ ಡಿಓ ಸಂಸ್ಥೆಯ ವಿಜ್ಞಾನಿ, ಎಚ್ಎಎಲ್ ಸಂಸ್ಥೆಯ ನಿವೃತ್ತ ಇಂಜಿನಿಯರ್ ಆಗಿರುವ ಹಾಲ್ದೊಡ್ಡೇರಿ ಸುಧೀಂದ್ರ ನಿಧನರಾಗಿದ್ದಾರೆ.

ಬೆಂಗಳೂರು, ಜುಲೈ 2: ಪ್ರಸಿದ್ಧ ವಿಜ್ಞಾನ ಬರಹಗಾರ, ಡಿಆರ್ ಡಿಓ ಸಂಸ್ಥೆಯ ವಿಜ್ಞಾನಿ, ಎಚ್ಎಎಲ್ ಸಂಸ್ಥೆಯ ನಿವೃತ್ತ ಇಂಜಿನಿಯರ್ ಆಗಿರುವ ಹಾಲ್ದೊಡ್ಡೇರಿ ಸುಧೀಂದ್ರ (61) ನಿಧನರಾಗಿದ್ದಾರೆ.

ಒಂದು ವಾರದ ಹಿಂದೆ ಅವರಿಗೆ ತೀವ್ರ ಹೃದಯಾಘಾತವಾಗಿತ್ತು. ಆಬಳಿಕ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು ತುರ್ತು ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟದಲ್ಲಿದ್ದರು. ತೀವ್ರ ಆಘಾತವಾಗಿದ್ದರಿಂದ ಮೆದುಳಿಗೆ ರಕ್ತ ಪೂರೈಕೆ ಸ್ಥಗಿತಗೊಂಡು ಮೆದುಳು ನಿಷ್ಕ್ರಿಯಗೊಂಡಿತ್ತು ಎಂದು ವೈದ್ಯರು ತಿಳಿಸಿದ್ದರು.

ಆದರೆ, ಒಂದು ವಾರ ಕಾಲ ಅವರನ್ನು ಉಳಿಸಿಕೊಳ್ಳಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಬ್ರೇನ್ ಡೆಡ್ ಆಗಿದ್ದರಿಂದ ವೈದ್ಯರು ಇಂದು ಮಧ್ಯಾಹ್ನ ಅವರನ್ನು ನಿಧನರಾಗಿರುವರು ಎಂದು ಘೋಷಿಸಿದ್ದಾರೆ. ಸುದೀರ್ಘ ಕಾಲ ವಿಜ್ಞಾನಿಯಾಗಿದ್ದು, ಡಿಆರ್ ಡಿಓದಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಜೊತೆಗೆ ಮುಂಚೂಣಿಯಲ್ಲಿ ಗುರುತಿಸಲ್ಪಟ್ಟಿದ್ದ ಹಾಲ್ದೊಡ್ಡೇರಿ ಸುಧೀಂದ್ರ ಕನ್ನಡದ ಬಹುತೇಕ ಪತ್ರಿಕೆಗಳಲ್ಲಿ ವಿಜ್ಞಾನ ಅಂಕಣಗಳನ್ನು ಬರೆಯುತ್ತಿದ್ದರು.

ನಿವೃತ್ತಿಯಾಗುವ ಮೊದಲೇ ವಿಜ್ಞಾನದ ಅಂಕಣಗಳಿಂದಲೇ ತುಂಬ ಪ್ರಸಿದ್ಧಿ ಪಡೆದಿದ್ದ ಹಾಲ್ದೊಡ್ಡೇರಿಯವರು ಅಂತರಿಕ್ಷ ವಿಜ್ಞಾನ, ಕ್ಷಿಪಣಿಗಳು, ರಾಕೆಟ್ ಸೈನ್ಸ್, ಜಲ ಮತ್ತು ನೆಲದ ಕೌತುಕಗಳು, ಆಧುನಿಕ ವಿಜ್ಞಾನದ ಕೊಡುಗೆಗಳು ಹೀಗೆ ಹಲವು ವಿಚಾರಗಳಲ್ಲಿ ತಮ್ಮದೇ ಧಾಟಿಯಲ್ಲಿ ಬರೆಯುತ್ತಿದ್ದ ಅಂಕಣಗಳು ಕನ್ನಡದ ಲಕ್ಷಾಂತರ ಓದುಗರನ್ನು ತಲುಪಿದ್ದವು.

ಕೊರೊನಾ ಸಂದರ್ಭದಲ್ಲಿ ಹೃದಯಾಘಾತ ಆಗಿದ್ದರೂ, ಅವರ ಆಘಾತಕ್ಕೆ ಕೊರೊನಾ ಕಾರಣವಾಗಿರಲಿಲ್ಲ. ಕೊರೊನಾ ಸೋಂಕು ಇರಲಿಲ್ಲ ಎಂದು ವೈದ್ಯರು ತಿಳಿಸಿದ್ದರು. ನಾಡಿನ ಉದ್ದಗಲಕ್ಕೂ ಹಾಲ್ದೊಡ್ಡೇರಿ ಅವರು ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದರು.

ವಿಜ್ಞಾನಕ್ಕೆ ತನ್ನ ಜ್ಞಾನವನ್ನು ಮುಡಿಪಾಗಿಟ್ಟಿದ್ದ ಸುಧೀಂದ್ರ ಅವರ ದೇಹವನ್ನು ಬೆಂಗಳೂರಿನ ಮೆಡಿಕಲ್ ಕಾಲೇಡಿಗೆ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

Former scientist DRDO Haldodderi Sudhindra passes away at (61) in Bengaluru.