ದೇವಸ್ಥಾನದಲ್ಲಿ ಎಲ್ಲ ಧಾರ್ಮಿಕ ಸೇವೆಗಳು ಪುನರಾರಂಭ

02-09-20 09:57 am       Dhruthi Anchan - Correspondent   ಕರ್ನಾಟಕ

ರಾಜ್ಯದ ದೇವಾಲಯಗಳಲ್ಲಿ ದೇವರ ದರ್ಶನದ ಜತೆಗೆ ಭಕ್ತರಿಗೆ ತೀರ್ಥ, ಪ್ರಸಾದ ವಿತರಣೆ, ಅಭಿಷೇಕ ಸೇರಿದಂತೆ ಎಲ್ಲಾ ಸೇವೆಗಳನ್ನು ನಡೆಸಲು ಅನುಮತಿ ನೀಡಲಾಗಿದೆ.

ಬೆಂಗಳೂರು, ಸೆಪ್ಟೆಂಬರ್. 2: ಲಾಕ್ ಡೌನ್ ಸಮಯದಲ್ಲಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡದಂತಾಗಿತ್ತು. ಇದೀಗ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಭಕ್ತರಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ಎಲ್ಲಾ ಬಗೆಯ ಧಾರ್ಮಿಕ ಸೇವೆಗಳ ಪುನರಾರಂಭಕ್ಕೆ ಅನುಮತಿ ಕೊಟ್ಟಿದೆ.

ರಾಜ್ಯದ ದೇವಾಲಯಗಳಲ್ಲಿ ಸರ್ವ ಸೇವೆಗೆ ಅವಕಾಶ ನೀಡಲಾಗಿದೆ. ಸರಳವಾಗಿ ಉತ್ಸವ ನಡೆಸಲು ಅನುಮತಿ ನೀಡುವುದರ ಜೊತೆಗೆ  ಭಕ್ತರಿಗೆ ತೀರ್ಥ, ಪ್ರಸಾದ ವಿತರಣೆ, ಅಭಿಷೇಕ ಸೇರಿದಂತೆ ಎಲ್ಲಾ ಸೇವೆಗಳನ್ನು ಕೈಗೊಳ್ಳಬಹುದು ಎಂದು ಹೇಳಲಾಗಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಇನ್ನಿತರ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳು ಹೊರಡಿಸುವ ಆದೇಶ ಪಾಲಿಸಲು ನಿರ್ದೇಶನ ನೀಡಲಾಗಿದೆ.

ಜಾತ್ರಾ ಉತ್ಸವ, ಬ್ರಹ್ಮ ರಥೋತ್ಸವ ಮೊದಲಾದ ಉತ್ಸವಗಳನ್ನು ತಾತ್ಕಾಲಿಕವಾಗಿ ಮುಂದೂಡಬೇಕೆಂದು ಹೇಳಲಾಗಿದ್ದು, ಉತ್ಸವಗಳ ದಿನಗಳಂದು ದೇವಾಲಯದ ಒಳ ಪ್ರಕಾರದಲ್ಲಿ ಜನಸಂದಣಿಯಿಲ್ಲದೇ ಸರಳವಾಗಿ ನಡೆಸಬಹುದಾಗಿದೆ ಎಂದು ಹೇಳಲಾಗಿದೆ