ಸ್ಯಾಂಡಲ್‍ವುಡ್ ಅಥವಾ ಬೆಂಗಳೂರಿಗೆ ಮಾತ್ರ ಡ್ರಗ್ಸ್ ದಂಧೆ ಸಿಮೀತವಾಗಿಲ್ಲ; ಎಲ್.ಆರ್.ಶಿವರಾಮೇಗೌಡ

02-09-20 11:16 am       Headline Karnataka News Network   ಕರ್ನಾಟಕ

ಡ್ರಗ್ಸ್ ದಂಧೆ ಗ್ರಾಮೀಣ ಭಾಗಗಳಿಗೆ ತಲುಪಿದ್ದು, ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲೂ ಡ್ರಗ್ಸ್ ದೊರೆಯತ್ತಿದೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ಮಂಡ್ಯ, ಸೆಪ್ಟೆಂಬರ್.2: ಡ್ರಗ್ಸ್ ಮಾಫಿಯಾದಲ್ಲಿ ಬೆಂಗಳೂರು ಹಾಗೂ ಸ್ಯಾಂಡಲ್‍ವುಡ್ ಒಂದು ಕಡೆಯಾದ್ರೆ, ಗ್ರಾಮೀಣ ಭಾಗ ಇನ್ನೊಂದು ಕಡೆಯಾಗಿದ್ದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲೂ ಡ್ರಗ್ಸ್ ದೊರೆಯುತ್ತಿದೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ನಾಗಮಂಗಲದಲ್ಲಿ ಮಾಧ್ಯಮಗಳೊಂದಿಗೆ ಮಾತಾನಾಡಿದ ಶಿವರಾಮೇಗೌಡ,. ಗ್ರಾಮೀಣ ಭಾಗದಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದ್ದು, ಯುವಕರು ಇದರಿಂದ ಹಾಳಾಗುತ್ತಿದ್ದಾರೆ. ಇದೆಲ್ಲವನ್ನು ಕಂಡರೂ ಕಾಣದಂತೆ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ . ನಾಗಮಂಗಲದಲ್ಲೂ ಡ್ರಗ್ಸ್ ಮಾರಾಟ ಜೋರಾಗಿ ನಡೆಯುತ್ತಿದೆ ಎಂದಿದ್ದಾರೆ.

ಈ ಹಿಂದೆ ಮಹಾನ್ ನಟರು ಇದ್ದ ಸ್ಯಾಂಡಲ್‍ವುಡ್‍ನಲ್ಲಿ ಈ ರೀತಿಯ ಚಟುವಟಿಕೆಗಳು ನಡೆದಿರೋದು ನಿಜಕ್ಕೂ ಬೇಸರದ ಸಂಗತಿ. ಬೆಂಗಳೂರಿನ ಕಲ್ಯಾಣ ನಗರದ ನನ್ನ ಶಾಲೆಯ ರಸ್ತೆಯಲ್ಲಿ ನೈಜೀರಿಯಾ, ಸೌಥ್ ಆಫ್ರಿಕಾ ಪ್ರಜೆಗಳು ಡ್ರಗ್ಸ್ ಮಾರಾಟ ಹಾಗೂ ಸೇವನೆ ಮಾಡ್ತಾ ಇದ್ದಾರೆ. ಈ ಬಗ್ಗೆ ಪೊಲೀಸರಿಗೆ ಹೇಳಿದ್ರು ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಈ ಡ್ರಗ್ಸ್ ದಂಧೆ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಮಾತ್ರವಲ್ಲ ಕಳೆದ 20 ವರ್ಷಗಳಿಂದ ಈ ವ್ಯವಹಾರ ನಡೆಯುತ್ತಿದೆ. ಆದ್ರೆ ಇದೀಗ ಹಂತ ಹಂತವಾಗಿ ದೊಡ್ಡ ಪ್ರಮಾಣಕ್ಕೆ ಈ ದಂಧೆ ವ್ಯಾಪಿಸಿದೆ. ಡ್ರಗ್ಸ್ ದಂಧೆಕೋರರಿಗೆ ರಾಜಕಾರಣಿಗಳು  ಹಾಗೂ  ಪ್ರಭಾವಿಗಳ ಬೆಂಬಲದಿಂದ ಇಷ್ಟರ ಮಟ್ಟಿಗೆ ಈ ದಂಧೆ ವ್ಯಾಪಿಸಿದೆ. ಇದಲ್ಲದೇ ಗೋವಾ, ಶ್ರೀಲಂಕಾಗಳಿಗೆ ಕರೆದುಕೊಂಡು ಹೋಗಿ ಇಸ್ಪೀಟ್ ಆಟ ಆಡಿಸಲಾಗುತ್ತಿದೆ ಹಾಗೂ ತೋಟದ ಮನೆಗಳಲ್ಲಿ ರೇವ್ ಪಾರ್ಟಿಗಳು ನಡೆಯುತ್ತಿವೆ. ಇಂತಹ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ಕಠಿಣ ಕ್ರಮವಹಿಸಬೇಕಾಗಿದೆ ಎಂದು ಶಿವರಾಮೇಗೌಡ ಆಗ್ರಹಿಸಿದ್ದಾರೆ.