ಕಮಲ್ ಪಂತ್ ಬೆಂಗಳೂರು ಕಮಿಷನರ್ ಆಗಿ ಅಧಿಕಾರ ಸ್ವೀಕಾರ - ಭಾವುಕರಾಗಿ ನಿರ್ಗಮಿಸಿದ ಭಾಸ್ಕರ್ ರಾವ್

01-08-20 08:26 am       Bangalore Correspondent   ಕರ್ನಾಟಕ

ನಗರದ ನೂತನ ಸಿಟಿ ಪೊಲೀಸ್ ಕಮಿಷನರ್ ಆಗಿ ಕಮಲ್ ಪಂತ್ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ನಿರ್ಗಮನದ ಕೊನೆಯ ಕ್ಷಣದಲ್ಲಿ ಭಾಸ್ಕರ್ ರಾವ್ ಭಾವುಕರಾದ ದೃಶ್ಯಕ್ಕೂ ಈ ಕಾರ್ಯಕ್ರಮ ಸಾಕ್ಷಿಯಾಯಿತು.

ಬೆಂಗಳೂರು(ಆ. 01): ನಗರದ ನೂತನ ಸಿಟಿ ಪೊಲೀಸ್ ಕಮಿಷನರ್ ಆಗಿ ಕಮಲ್ ಪಂತ್ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಉನ್ನತ ಅಧಿಕಾರಿಗಳ ಉಪಸ್ಥಿತಿಯಲ್ಲಿ ಇಂದು ಅಧಿಕಾರ ಹಸ್ತಾಂತರ ನಡೆಯಿತು. ನಿರ್ಗಮಿತ ಭಾಸ್ಕರ್ ರಾವ್ ಅವರ ಸ್ಥಾನವನ್ನು ಕಮಲ್ ಪಂತ್ ತುಂಬಿದ್ದಾರೆ. ನಿರ್ಗಮನದ ಕೊನೆಯ ಕ್ಷಣದಲ್ಲಿ ಭಾಸ್ಕರ್ ರಾವ್ ಭಾವುಕರಾದ ದೃಶ್ಯಕ್ಕೂ ಈ ಕಾರ್ಯಕ್ರಮ ಸಾಕ್ಷಿಯಾಯಿತು.

ಕಮಲ್ ಪಂಥ್ ಅವರು ಬೆಂಗಳೂರಿನ ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು. ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದು ಅಧಿಕಾರ ಹಸ್ತಾಂತರ ನಡೆಯಿತು.

ನಗರದ ಜಂಟಿ ಪೊಲೀಸ್ ಆಯುಕ್ತರು, ಡಿಸಿಪಿಗಳು ಮೊದಲಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಬರುವ ಮುನ್ನ ಕಮಲ್ ಪಂತ್ ಅವರು ಸಿಎಂ ಭೇಟಿ ಮಾಡಿದರು.ನಿರ್ಗಮಿತ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಕೈಮುಗಿದು ಕಚೇರಿ ಒಳಗೆ ಹೋದರು.

ಕಾರ್ಯಕ್ರಮದ ವೇಳೆ ಭಾವುಕರಾದ ಭಾಸ್ಕರ್ ರಾವ್ ತಮ್ಮ ಸ್ನೇಹಿತರೂ ಆದ ಕಮಲ್ ಪಂತ್ ಅವರಿಗೆ ಬ್ಯಾಟನ್ ಕೊಟ್ಟು ಕೈ ಮುಗಿದು ನಿರ್ಗಮಿಸಿದರು.

ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ನೂತನ ಕಮಿಷನರ್ ಕಮಲ್ ಪಂತ್, ಸರ್ಕಾರ ತನಗೆ ಕೊಟ್ಟಿರುವ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತೇನೆ ಎಂದು ವಾಗ್ದಾನ ನೀಡಿದರು.

ಕೋವಿಡ್-19ನಿಂದ ಮೃತಪಟ್ಟ ಪೊಲೀಸ್ ಇಲಾಖೆ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪೊಲೀಸ್ ಆಯುಕ್ತ ಕಮಲ ಪಂತ್, ಕೊರೋನಾ ಜೊತೆ ಕಾನೂನು ಸುವ್ಯವಸ್ಥೆ ಕಾಪಾಡುವುದು ತಮ್ಮ ಮೊದಲ ಕರ್ತವ್ಯ. ಆದರೆ, ಏನೇ ಪರಿಸ್ಥಿತಿ ಇದ್ದರೂ ಮೊದಲ ಆದ್ಯತೆ ಕೋವಿಡ್ ವಿರುದ್ಧದ ಹೋರಾಟಕ್ಕೆ ಎಂದು ಸ್ಪಷ್ಟಪಡಿಸಿದರು.

ಯಾವುದೇ ಸಮಸ್ಯೆಯಾಗದಂತೆ ಕರ್ತವ್ಯ ನಿರ್ವಹಿಸುತ್ತೇನೆಂದು ಭರವಸೆ ನೀಡುತ್ತೇನೆ. ಡ್ರಗ್ಸ್ ಮತ್ತು ಸೈಬರ್ ಪ್ರಕರಣಕ್ಕೆ ವಿಶೇಷ ಒತ್ತು ಕೊಡುತ್ತೇನೆ. ರೌಡಿ ಶೀಟರ್ಗಳಿಗೆ ಬಿಸಿ ಮುಟ್ಟಿಸುವುದು ಮುಖ್ಯ ಉದ್ದೇಶ ಎಂದು ಕಮಲ್ ಪಂತ್ ತಿಳಿಸಿದರು.

ಜನರ ಕಷ್ಟಗಳಿಗೆ ಸ್ಪಂದಿಸಲು ತಿಂಗಳಿಗೊಮ್ಮೆ ಆಯಾ ಡಿಸಿಪಿ ಕಚೇರಿಗಳಿಗೆ ಹೋಗುತ್ತೇನೆ ಎಂದೂ ನೂತನ ಪೊಲೀಸ್ ಆಯುಕ್ತರು ಹೇಳಿದರು.

ಈಗ ಜನಜೀವನ ಸಾಮಾನ್ಯ ಸ್ಥಿತಿಗೆ ಬರುತ್ತಿದೆ. ಕ್ರಮೇಣವಾಗಿ ಪೊಲೀಸರ ಕೆಲಸವೂ ಹೆಚ್ಚುತ್ತಿದೆ. ಆಗಸ್ಟ್ 5ರ ನಂತರ ಈ ಕೆಲಸ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕಮಲ್ ಪಂತ್ ಎಚ್ಚರಿಸಿದರು.

ಭಾಸ್ಕರ್ ರಾವ್ ಅವರನ್ನ ಆಲಿಂಗಿಸಿ ಬೀಳ್ಕೊಟ್ಟ ನೂತನ ಪೊಲೀಸ್ ಕಮಿಷನರ್ ಕಮಲ್ ಪಂತ್ (ಎಡಗಡೆ)

ನಿರ್ಗಮಿತ ಪೊಲೀಸ್ ಕಮಿನಷರ್ ಭಾಸ್ಕರ್ ರಾವ್ ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.