ಅಕ್ರಮ ಮರಳುಗಾರಿಕೆಗೆ ಸಹಕಾರ ; ಡಿವೈಎಸ್ಪಿ ಸಸ್ಪೆಂಡ್

03-09-20 06:07 pm       Headline Karnataka News Network   ಕರ್ನಾಟಕ

ಅಪಘಾತ ಪ್ರಕರಣವನ್ನು ತಿರುಚಿ ಕರ್ತವ್ಯಲೋಪ ಎಸಗಿದ್ದಾರೆ ಎಂಬ ಆರೋಪದ ಮೇರೆಗೆ ಚಾಮರಾಜನಗರದ ಡಿವೈಎಸ್ಪಿ ಜೆ. ಮೋಹನ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಚಾಮರಾಜನಗರ, ಸೆಪ್ಟೆಂಬರ್ 3: ಅಕ್ರಮ ಮರಳು ಸಾಗಾಣಿಕೆಗೆ ಸಹಕರಿಸಿ, ಮರಳು ಲಾರಿಯ ಅಪಘಾತ ಪ್ರಕರಣವನ್ನು ತಿರುಚಿ ಕರ್ತವ್ಯಲೋಪ ಎಸಗಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಚಾಮರಾಜನಗರದ ಡಿವೈಎಸ್ಪಿ ಮೋಹನ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಡಿವೈಎಸ್ಪಿ ಜೆ.ಮೋಹನ್ ಅವರನ್ನು ಅಮಾನತುಗೊಳಿಸಲಾಗಿದೆ. ಕೆ.ಎಸ್.ಪಿ(ಡಿಪಿ) ನಿಯಮಗಳ 1965/89ರ ನಿಯಮ 5ರ ಅನ್ವಯ ಶಿಸ್ತು ಕ್ರಮ ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಸರ್ಕಾರದ ಒಳಾಡಳಿತ ಇಲಾಖೆಯ (ಪೊಲೀಸ್ ಸೇವೆಗಳು) ಅಧೀನ ಕಾರ್ಯದರ್ಶಿ ಬಿ.ಕೆ ಭುವನೇಂದ್ರ ಕುಮಾರ್ ಈ ಆದೇಶ ಹೊರಡಿಸಿದ್ದಾರೆ.

ಮೇ 15 ರಂದು ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಟಿಪ್ಪರ್ ಲಾರಿಯೊಂದು ಚಾಮರಾಜನಗರ ತಾಲೋಕಿನ ಮಾದಾಪುರದ ಬಳಿ ನಿಂತಿತ್ತು. ವಿಷಯ ಗೊತ್ತಾಗಿ ಚಾಮರಾಜನಗರ ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ಮಂಜು ತಮ್ಮ ಜೀಪಿನಲ್ಲಿ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಪೊಲೀಸ್ ಜೀಪ್ ನೋಡಿದ ಚಾಲಕ  ಟಿಪ್ಪರ್ ಲಾರಿಯಿಂದ ಇಳಿದು  ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಎದುರಿನಿಂದ ಬಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ.

ಆದರೆ ಅಕ್ರಮ ಮರಳು ಸಾಗಾಣಿಕೆ ವಿಚಾರ ಮೇಲಾಧಿಕಾರಿಗಳಿಗೆ ತಿಳಿದರೆ ತಮಗೆ ತೊಂದರೆಯಾಗುತ್ತದೆ ಎಂದು ಟಿಪ್ಪರ್ ನಲ್ಲಿದ್ದ ಮರಳನ್ನು ರಸ್ತೆ ಬದಿ ಸುರಿದು ಎಂ ಸ್ಯಾಂಡ್ ಸಾಗಾಣಿಕೆಯಾಗುತ್ತಿತ್ತು ಎಂದು  ಬಿಂಬಿಸಲಾಗಿತ್ತು ಎಂಬ ಆರೋಪ ಪೊಲೀಸರ ಮೇಲೆ ಕೇಳಿ ಬಂದಿತ್ತು. ಈ ಆರೋಪದ ಮೇರೆಗೆ ಈಗಾಗಲೇ ಚಾಮರಾಜನಗರ ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎಂ ಮಂಜು, ಪೂರ್ವ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಎಸ್.ಪಿ ಸುನೀಲ್ ಹಾಗೂ ಹೆಡ್ ಕಾನ್ಸ್ ಟೇಬಲ್  ನಾಗ ನಾಯಕ ಎಂಬುವರನ್ನು ಅಮಾನತು ಮಾಡಲಾಗಿದೆ.

ಪೊಲೀಸರು ಯಾರಿಗೋ ಸಹಾಯ ಮಾಡಲು  ತನಿಖೆಯನ್ನು ಸರಿಯಾಗಿ ಮಾಡದೆ ಕರ್ತವ್ಯ ಲೋಪ ಎಸಗಿದ್ದರು ಎಂಬ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದಿದ್ದವು. ಈ ಹಿನ್ನಲೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾಹದ್ದಣ್ಣನವರ್ ಮೇ 25 ರಂದು ಸಲ್ಲಿಸಿದ್ಡರು. ಡಿವೈಎಸ್ಪಿ ಜೆ.ಮೋಹನ್ ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎಂ ಮಂಜು, ಪೂರ್ವ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಎಸ್.ಪಿ ಸುನೀಲ್ ಅಕ್ರಮ ಮರಳು ಸಾಗಾಣಿಕೆದಾರರೊಂದಿಗೆ ಕೈ ಜೋಡಿಸಿದ್ದಾರೆ. ಜೊತೆಗೆ ತಮ್ಮ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆಗೆ ಅನುವು ಮಾಡಿಕೊಟ್ಟು  ಮರಳು ಟಿಪ್ಪರ್ ಲಾರಿ ಅಫಘಾತವಾದರೂ ತಮಗೆ ಸಮಸ್ಯೆಯಾಗಲಿದೆ ಎಂದು ಟಿಪ್ಪರ್  ಲಾರಿಯಲ್ಲಿದ್ದ ಮರಳನ್ನು ತೆರವುಗೊಳಿಸಿ, ಆ ಟಿಪ್ಪರ್ ಲಾರಿಗೆ  ಎಂ.ಸ್ಯಾಂಡ್ ತುಂಬಿ ಮೂಲಕ ಪ್ರಕರಣ ತಿರುಚಲು ಪ್ರಯತ್ನಿಸಿ ಕರ್ತವ್ಯಲೋಪ ಎಸಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

Join our WhatsApp group for latest news updates