ಸಂಪುಟ ವಿಸ್ತರಣೆ ಮತ್ತೆ ಮುನ್ನೆಲೆಗೆ ; ಎಂಟಿಬಿ, ಕತ್ತಿಗೆ ಸ್ಥಾನ ಸಾಧ್ಯತೆ 

04-09-20 05:15 pm       Headline Karnataka News Network   ಕರ್ನಾಟಕ

ಮತ್ತೆ ಸಂಪುಟ ವಿಸ್ತರಣೆ ವಿಚಾರ ಮುನ್ನೆಲೆಗೆ ಬಂದಿದೆ. ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವ ಮಂದಿಗೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಬೆಂಗಳೂರು, ಸೆಪ್ಟಂಬರ್ 4: ಮತ್ತೆ ಸಂಪುಟ ವಿಸ್ತರಣೆ ವಿಚಾರ ಮುನ್ನೆಲೆಗೆ ಬಂದಿದೆ. ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವ ಮಂದಿಗೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮುಂದಿನ ವಾರದಲ್ಲಿ ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳಲಿದ್ದು ಸಚಿವ ಸಂಪುಟ ವಿಸ್ತರಣೆಗೆ ಅಸ್ತು ಹೇಳಿಸಿಕೊಂಡು ಬರಲಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. 

ಮೂಲಗಳ ಪ್ರಕಾರ, ಸಿಎಂ ಯಡಿಯೂರಪ್ಪ ಪಿತೃಪಕ್ಷಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ. ಆನಂತ್ರವೇ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆಯಿದೆ. ಹಾಗೆ ಆದಲ್ಲಿ ಸೆಪ್ಟಂಬರ್‌ 17 ಕ್ಕೆ ಪಿತೃ ಪಕ್ಷ ಮುಗಿಯುತ್ತದೆ. ಇದಾದ ಬಳಿಕ ಅಂದರೆ ಸೆ.18- 19ರ ವೇಳೆಗೆ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ನಿಚ್ಚಳ ಎನ್ನಲಾಗ್ತಿದೆ. ಅದಕ್ಕೂ ಮುನ್ನ ಸೆ.13 ಅಥವಾ 14 ಕ್ಕೆ ಬಿ.ಎಸ್ ಯಡಿಯೂರಪ್ಪ ದೆಹಲಿಗೆ ತೆರಳಲಿದ್ದಾರೆ. ವರಿಷ್ಠರ ಜೊತೆಗೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. 

ಸಂಪುಟಕ್ಕೆ ಸೇರ್ಪಡೆಗೊಳ್ಳಲು ಸಾಕಷ್ಟು ಜನ ಆಕಾಂಕ್ಷಿಗಳಿದ್ದಾರೆ. ವಲಸಿಗರ ಪೈಕಿ ಎಂಟಿಬಿ ನಾಗರಾಜ್, ಆರ್‌. ಶಂಕರ್‌ ಹಾಗೂ ಎಚ್‌. ವಿಶ್ವನಾಥ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಪೈಕಿ ಎಂಬಿಟಿ ಹಾಗೂ ಆರ್‌. ಶಂಕರ್‌ಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚು. ಅಲ್ಲದೆ, ಮೂಲ ಬಿಜೆಪಿಯಿಂದ ಅರವಿಂದ ಲಿಂಬಾವಳಿ ಹಾಗೂ ಉಮೇಶ್ ಕತ್ತಿಗೆ ಮಂತ್ರಿ ಸ್ಥಾನ ಸಿಗಲಿದೆ ಎನ್ನಲಾಗ್ತಿದೆ. 

ಸಂಪುಟ ವಿಸ್ತರಣೆಯ ಮಾತು ಬಂದಾಗ, ಪುನಾರಚನೆ ಆಗಬೇಕು ಎಂಬ ಕೂಗು ಕೇಳಿಬಂದಿತ್ತು. ಈ ವಿಚಾರ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಆದರೆ ಸದ್ಯ ವಿಸ್ತರಣೆಯನ್ನು ಮಾಡಿ ಡಿಸೆಂಬರ್‌ ಕೊನೆಯಲ್ಲಿ ಪುನಾರಚನೆ ಮಾಡುವ ಸಾಧ್ಯತೆ ಇದೆ ಎನ್ನುತ್ತದೆ ಮಾಹಿತಿ. ಈ ನಡುವೆ ಮಂತ್ರಿ ಸ್ಥಾನವನ್ನು ಪಡೆದುಕೊಳ್ಳಲು ಬೇರೆ ಬೇರೆ ಕಡೆಯಿಂದ ಪೈಪೋಟಿಯೂ ಶುರುವಾಗಿದೆ. ಸಚಿವ ಸ್ಥಾನಕ್ಕಾಗಿ ತೆರೆಮರೆಯಲ್ಲಿ ಲಾಬಿ ನಡೆಸುತ್ತಿದ್ದು ಕೊನೆಕ್ಷಣದಲ್ಲಿ ಯಾರಿಗೆ ಸ್ಥಾನ ಸಿಗಬಹುದು ಎಂಬುದನ್ನು ಈಗಲೇ ಹೇಳುವಂತಿಲ್ಲ.

Join our WhatsApp group for latest news updates