ಕೊರೋನಾದಿಂದ ಗುಣಮುಖರಾದ ಮಹಿಳೆಗೆ ಮತ್ತೊಮ್ಮೆ ಕೊರೋನಾ ಪಾಸಿಟಿವ್ !!

06-09-20 06:39 pm       Headline Karnataka News Network   ಕರ್ನಾಟಕ

27 ವರ್ಷ ವಯಸ್ಸಿನ ಮಹಿಳೆಯೊಬ್ಬರಿಗೆ ಕಳೆದ ಜುಲೈನಲ್ಲಿ ಸೋಂಕು ದೃಢವಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಯಶಸ್ವಿಯಾಗಿ ಗುಣಮುಖ ಆಗಿದ್ದು ಇದೀಗ ಮತ್ತೆ ಕೊರೋನಾ ಪಾಸಿಟಿವ್ ವರದಿಯಾಗಿದೆ.

ಬೆಂಗಳೂರು, ಸೆಪ್ಟೆಂಬರ್ 06: ಬೆಂಗಳೂರಿನಲ್ಲಿ ಕೊರೊನಾದಿಂದ ಗುಣಮುಖವಾಗಿದ್ದ ಮಹಿಳೆಗೆ ಒಂದು ತಿಂಗಳ ನಂತರ ಮತ್ತೆ ಪಾಸಿಟಿವ್ ವರದಿ ಬಂದಿದೆ. 

27 ವರ್ಷದ ಮಹಿಳೆ ಕೊರೋನಾ ಸೋಂಕು ತಗುಲಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು, ಆದರೆ  ಒಂದು ತಿಂಗಳ ನಂತರ ಮತ್ತೆ ಪಾಸಿಟಿವ್ ವರದಿ ಬಂದಿದೆ ಎಂದು ಫೋರ್ಟಿಸ್ ಆಸ್ಪತ್ರೆ ಖಚಿತಪಡಿಸಿದೆ. ರಾಜ್ಯದಲ್ಲಿ ಮರೆಯಾದ ಕೊರೋನಾ ಮತ್ತೆ ಬಂದ ಮೊದಲ ಪ್ರಕರಣ ಇದಾಗಿದೆ ಎಂದು ಹೇಳಲಾಗಿದೆ. 

ಆಗಸ್ಟ್ 24 ರಂದು ಹಾಂಕಾಂಗ್ ನಲ್ಲಿ ವಿಶ್ವದ ಮೊದಲ ಈ ರೀತಿ ಪ್ರಕರಣ ಕಂಡುಬಂದರೆ, ತೆಲಂಗಾಣ ಆರೋಗ್ಯ ಸಚಿವ ಇಟಾಲಾ ರಾಜೇಂದರ್ ರಾಜ್ಯದಲ್ಲಿ ಇಬ್ಬರಿಗೆ ಕೊರೋನಾವೈರಸ್ ಎರಡು ಸಲ ಬಂದಿವೆ ಎಂದು ಹೇಳಿದ್ದಾರೆ. ಮುಂಬೈನ ವೈದ್ಯರೊಬ್ಬರಿಗೆ ಎರಡು ತಿಂಗಳ ಅಂತರದ ನಂತರ ಎರಡನೇ ಸಲ ಕೊರೋನಾ ಪಾಸಿಟಿವ್ ಬಂದಿದೆ.

ರೋಗನಿರೋಧಕ ಶಕ್ತಿ ಕಡಿಮೆಯಾದಂತೆ ಕೊರೊನಾ ಪಾಸಿಟಿವ್ ಬಂದಿರಬಹುದೆಂದು ಹೇಳಲಾಗಿದೆ.