ಶಿರೂರು ಮಠಕ್ಕೆ ಅಪ್ರಾಪ್ತರ ನೇಮಕ ; ಹೈಕೋರ್ಟ್ ನಲ್ಲಿ ಜಟಿಲ ವಾದ, ಸೋದೆ ಮಠದ ವಿರುದ್ಧ ಜಟಾಪಟಿ, ತೀರ್ಪು ಕಾದಿರಿಸಿದ ಕೋರ್ಟ್

24-09-21 10:19 pm       Headline Karnataka News Network   ಕರ್ನಾಟಕ

ಉಡುಪಿ ಶ್ರೀಕೃಷ್ಣ ಮಠದ ಅಷ್ಟಮಠಗಳ ಪೈಕಿ ಶಿರೂರು ಮಠಕ್ಕೆ 16 ವರ್ಷದ ಅಪ್ರಾಪ್ತರನ್ನು ಮಠಾಧಿಪತಿಯಾಗಿ ಪಟ್ಟಾಭಿಷೇಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ಆಲಿಸಿರುವ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. 

ಬೆಂಗಳೂರು, ಸೆ.24: ಉಡುಪಿ ಶ್ರೀಕೃಷ್ಣ ಮಠದ ಅಷ್ಟಮಠಗಳ ಪೈಕಿ ಶಿರೂರು ಮಠಕ್ಕೆ 16 ವರ್ಷದ ಅಪ್ರಾಪ್ತರನ್ನು ಮಠಾಧಿಪತಿಯಾಗಿ ಪಟ್ಟಾಭಿಷೇಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ಆಲಿಸಿರುವ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. 

ಶಿರೂರು ಮಠದ ಭಕ್ತ ಸಮಿತಿಯ ಕಾರ್ಯದರ್ಶಿ ಪಿ. ಲಾತವ್ಯ ಆಚಾರ್ಯ ಸೇರಿ ನಾಲ್ವರು ಸಲ್ಲಿಸಿರುವ ಮನವಿಗೆ ಸಂಬಂಧಿಸಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ನೇತೃತ್ವದ ಪೀಠವು ಸುದೀರ್ಘವಾಗಿ ನಾಲ್ಕು ತಾಸುಗಳಿಗೂ ಹೆಚ್ಚು ಕಾಲ ವಾದ- ಪ್ರತಿವಾದವನ್ನು ಆಲಿಸಿದ್ದು ತಿದ್ದುಪಡಿ ಮಾಡಿದ ಮನವಿಯನ್ನು ಅರ್ಜಿದಾರರ ಪರವಾಗಿ ಸಲ್ಲಿಸಿದ್ದ ವಕೀಲ ಡಿ ಆರ್ ರವಿಶಂಕರ್, ಅಪ್ರಾಪ್ತರಿಗೆ ಸನ್ಯಾಸವನ್ನು ಹೇರುವುದರಿಂದ ಅವರು ಐಹಿಕ ಭೋಗಗಳನ್ನು ಪರಿತ್ಯಾಗ ಮಾಡಬೇಕಾಗುತ್ತದೆ. ಇದು ಸಂವಿಧಾನದ 21 ಮತ್ತು 39 (ಇ) ಮತ್ತು (ಎಫ್) ವಿಧಿಯ ಉಲ್ಲಂಘನೆಯಾಗುತ್ತದೆ ಎಂಬ ಪ್ರಮುಖ ಪ್ರಶ್ನೆಯನ್ನು ಎತ್ತಿದರು.

ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ಹಿರಿಯ ವಕೀಲ ಎಸ್.ಎಸ್ ನಾಗಾನಂದ್ ಅವರು “18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸನ್ಯಾಸ ದೀಕ್ಷೆ ನೀಡುವುದಕ್ಕೆ ಯಾವುದೇ ಶಾಸನಬದ್ಧ, ಸಂವಿಧಾನಬದ್ಧವಾದ ನಿರ್ಬಂಧವಿಲ್ಲ ಮತ್ತು ಅದು ಅಪಾಯಕರ ಅಭ್ಯಾಸವಲ್ಲ” ಎಂದು ಪೀಠಕ್ಕೆ ವಿವರಿಸಿದರು.

ಉಡುಪಿಯ ಅಷ್ಟಮಠಗಳಲ್ಲಿ ಬ್ರಹ್ಮಚಾರಿ, ಅವಿವಾಹಿತರಿಗೆ ಮಾತ್ರ ಸನ್ಯಾಸ ದೀಕ್ಷೆ ನೀಡುವ ಪರಂಪರೆಯಿದೆ. ಇದರ ಜೊತೆಗೆ ಪೀಠಾಧಿಪತಿಯಾಗುವವರ ಕೌಟುಂಬಿಕ ಹಿನ್ನೆಲೆ, ಶಾಸ್ತ್ರೀಯ ಅಧ್ಯಯನದ ಕಡೆಗಿನ ಅವರ ಒಲವು, ಶ್ರೀ ಜಯತೀರ್ಥ ರಚಿಸಿರುವ ಶ್ರೀಮನ್ ನ್ಯಾಯಸುಧಾ ಅಧ್ಯಯನ ಮಾಡುವ ಶಕ್ತಿ ಹೊಂದಿರುವುದು ಮತ್ತು ಶ್ರೀ ಮಧ್ವಾಚಾರ್ಯರ ತತ್ವಗಳನ್ನು ಪ್ರತಿಪಾದಿಸುವುದನ್ನು ವಿಶೇಷವಾಗಿ ಗಮನಿಸಲಾಗುತ್ತದೆ. ಇದರ ಜೊತೆಗೆ ಪೀಠದ ಮಠಾಧಿಪತಿ ಸ್ಥಾನಕ್ಕೆ ಅವರು ಹೊಂದುತ್ತಾರೆಯೇ ಎಂಬುದನ್ನು ಅವರ ಜಾತಕ ಪರಿಶೀಲಿಸುವ ಮೂಲಕ ಖಾತರಿಪಡಿಸಕೊಳ್ಳಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಪೀಠಾಧಿಪತಿ ಸ್ಥಾನಕ್ಕೆ ಪರಿಗಣಿಸಲ್ಪಟ್ಟವರು 18 ವರ್ಷಕ್ಕಿಂತ ಚಿಕ್ಕವರಾದರೆ ಅದು ಕಾಕತಾಳೀಯವಷ್ಟೆ ಎಂದು ಹೇಳಿದರು.

ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಿಸುವ ಅಧಿಕಾರ ಸೋದೆ ಮಠಕ್ಕೆ ಇದೆಯೇ? 

ಶಿರೂರು ಮಠಕ್ಕೆ ಪೀಠಾಧಿಪತಿಯನ್ನು ನೇಮಿಸುವ ಅಧಿಕಾರ ಸೋದೆ ವಾದಿರಾಜ ಮಠಕ್ಕೆ ಇದೆಯೇ ಎಂಬ ಅರ್ಜಿದಾರರ ಪ್ರಶ್ನೆಗೆ ಅಮಿಕಸ್ ಕ್ಯೂರಿ ನಾಗಾನಂದ್ ಅವರು “1917ರಲ್ಲೇ ಮದ್ರಾಸ್ ಹೈಕೋರ್ಟ್ ದ್ವಂದ್ವ ಮಠ ವ್ಯವಸ್ಥೆಯನ್ನು ಪರಿಗಣಿಸಿದೆ. ಈ ಸಂಪ್ರದಾಯದ ಪ್ರಕಾರ ದ್ವಂದ್ವ ಮಠದ ಪೈಕಿ ಒಂದು ಮಠದ ಮುಖ್ಯ ಪೀಠಾಧಿಪತಿ ತಮ್ಮ ಉತ್ತರಾಧಿಕಾರಿಯನ್ನು ಗುರುತಿಸದೇ ನಿಧನರಾದರೆ ಮತ್ತೊಂದು ಮಠದ ಮುಖ್ಯ ಪೀಠಾಧಿಪತಿಯು ಸದರಿ ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸುವ ಅಧಿಕಾರ ಹೊಂದಿರುತ್ತಾರೆ” ಎಂದು ಹೇಳಿದರು. ಭಾರತೀಯ ಪ್ರೌಢವಾಸ್ಥೆ ಕಾಯಿದೆ ಪ್ರಕಾರ 18 ವರ್ಷದವರನ್ನು ಪ್ರಾಪ್ತ ವಯಸ್ಕರು ಎನ್ನಲಾಗುತ್ತದೆ. ಆದರೆ, ಧಾರ್ಮಿಕ ವಿಷಯಗಳಿಗೆ ಬಂದಾಗ 14 ವರ್ಷ ವಯಸ್ಸನ್ನು ಪರಿಗಣಿಸಲಾಗುತ್ತದೆ. ಶಾಸ್ತ್ರಗಳು ಹಾಗೂ ಶ್ಲೋಕಗಳ ಪ್ರಕಾರ 14 ವರ್ಷ ದಾಟಿದವರು ವೈರಾಗ್ಯ ನಿರ್ಧಾರ ಕೈಗೊಳ್ಳಬಹುದು. ಬೌದ್ಧ ಧರ್ಮದವರಲ್ಲಿ ಚಿಕ್ಕ ಮಕ್ಕಳಿಗೇ ಸನ್ಯಾಸ ನೀಡಲಾಗುತ್ತದೆ. ಶಿರೂರು ಮಠಕ್ಕೆ ಮಠಾಧಿಪತಿ ಆಗಿರುವವರಿಗೆ 17 ವರ್ಷ. ತಂದೆ ಡಾಕ್ಟರೇಟ್ ಪಡೆದಿದ್ದು, ತಾಯಿಯೂ ವಿದ್ಯಾವಂತೆ. ಮಗನಿಗೂ ವಿರಕ್ತಿಯಲ್ಲಿ ಆಸಕ್ತಿಯಿದೆ. ಆ ಪ್ರಕಾರವೇ ಸನ್ಯಾಸ ದೀಕ್ಷೆ ನೀಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಲೋಪವೇನೂ ಆಗಿಲ್ಲ ಎಂದು ಹೇಳಿದರು. 

ಅಪ್ರಾಪ್ತರು ಆಸ್ತಿ ಹೊಣೆಗಾರಿಕೆ ನಿಭಾಯಿಸುವಂತಿಲ್ಲ 

ಅರ್ಜಿದಾರರ ಪರ ವಕೀಲ ಡಿ. ಆರ್ ರವಿಶಂಕರ್ ಅವರು “ಅಪ್ರಾಪ್ತರನ್ನು ಸನ್ಯಾಸಿಯಾಗಿ ನೇಮಿಸುವಂತಿಲ್ಲ. ಅಪ್ರಾಪ್ತರಿಗೆ ಪೀಠಾಧಿಪತಿಯ ಹೊಣೆಗಾರಿಕೆ ಮತ್ತು ವೈರಾಗ್ಯವನ್ನು ಹೇರಬಾರದು. ಮಠಕ್ಕೆ ನಡೆದುಕೊಳ್ಳುವವರನ್ನು ಮಾತ್ರ ಪೀಠಾಧಿಪತಿಯಾಗಿ ನೇಮಿಸಬಹುದು. ಆದರೆ, ಹಾಲಿ ಪೀಠಾಧಿಪತಿ ಶಿರೂರು ಮಠಕ್ಕೆ ನಡೆಕೊಂಡವರಲ್ಲ. ಅವರು ಸೋದೆ ವಾದಿರಾಜ ಮಠದ ಅನುಯಾಯಿಯೊಬ್ಬರ ಪುತ್ರರಾಗಿದ್ದಾರೆ. ಪೀಠಾಧಿಪತಿ ಆಗುವವರಿಗೆ ಆಸ್ತಿ ನಿರ್ವಹಣೆಯ ಹೊಣೆಗಾರಿಕೆಯಿದ್ದು, ಕಾನೂನು ಪ್ರಕಾರ ಅಪ್ರಾಪ್ತರು ಆಸ್ತಿ ಹೊಣೆಗಾರಿಕೆ ನಿಭಾಯಿಸುವಂತಿಲ್ಲ. ಆದ್ದರಿಂದ, ಪೀಠಾಧಿಪತಿಯಾಗಿ ಅಪ್ರಾಪ್ತರ ನೇಮಿಸಿರುವ ಕ್ರಮವನ್ನು ಸಂವಿಧಾನಬಾಹಿರ ಎಂದು ಘೋಷಿಸಬೇಕು” ಎಂದು ಕೋರಿದರು.

ಶಿರೂರು ಮಠದ ಮೇಲೆ ಹಿಡಿತ ಸಾಧಿಸುವ ಉದ್ದೇಶ 

ಸೋದೆ ವಾದಿರಾಜ ಮಠದ ಪರ ವಕೀಲರು, ಮನವಿದಾರರ ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಇದೊಂದು ವೈಯಕ್ತಿಕ ಹಿತಾಸಕ್ತಿಯಿಂದ ಕೂಡಿದ ಅರ್ಜಿಯಾಗಿದೆ. ಅರ್ಜಿದಾರ ಲಾತವ್ಯ ಆಚಾರ್ಯ ಹಾಗೂ ಎರಡನೇ ಅರ್ಜಿದಾರ ಶ್ರೀನಿವಾಸ ಆಚಾರ್ಯ, ಶಿರೂರು ಮಠದ ಹಿಂದಿನ ಪೀಠಾಧಿಪತಿಯ ಸಹೋದರರು. ಮೂರನೇ ಅರ್ಜಿದಾರ ಶ್ರೀನಿವಾಸ ಆಚಾರ್ಯ ಅವರ ಮಗ. ನಾಲ್ಕನೇ ಅರ್ಜಿದಾರ ಲಾತವ್ಯ ಆಚಾರ್ಯ ಅವರ ಮಗ. ಶಿರೂರು ಮಠದ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಅವರು ಒಟ್ಟಿಗೆ ಸೇರಿ 2020ರ ಡಿಸೆಂಬರ್ ನಲ್ಲಿ ಟ್ರಸ್ಟ್ ರಚಿಸಿಕೊಂಡಿದ್ದಾರೆ. ಲಾತವ್ಯ ಆಚಾರ್ಯ ಅವರ ಮಗನನ್ನು ಮಠದ ಪೀಠಾಧಿಪತಿಯಾಗಿ ಮಾಡಬೇಕು ಎಂದು ನಿರ್ಧರಿಸಿದ್ದರು. ಅದು ಸಾಧ್ಯವಾಗದಿದ್ದಾಗ ಈ ಹಿಂದೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಲ್ಲಿ ಹಿನ್ನಡೆ ಅನುಭವಿಸಿದ ನಂತರ ಹೈಕೋರ್ಟ್ನಲ್ಲಿ ಈ ಪಿಐಎಲ್ ಸಲ್ಲಿಸಿದ್ದಾರೆ” ಎಂದು ವಾದಿಸಿದರು. 

“ಉಡುಪಿಯ ಅಷ್ಟ ಮಠಗಳನ್ನು ದ್ವಂದ್ವ ಮಠಗಳಾಗಿ ನಾಲ್ಕು ಜೊತೆ ಮಾಡಲಾಗಿದೆ. ಶಿರೂರು ಹಾಗೂ ಸೋದೆ ಮಠಗಳು ದ್ವಂದ್ವ ಮಠಗಳಾಗಿವೆ. ದ್ವಂದ್ವ ಮಠಗಳಲ್ಲಿ ಯಾವುದೇ ಒಂದು ಮಠದ ಪೀಠಾಧಿಪತಿ ಮೃತಪಟ್ಟಾಗ ಅಥವಾ ಇತರ ಕಾರಣಗಳಿಂದ ಅವರು ಪೀಠಾಧಿಪತಿಯಾಗಿ ಮುಂದುವರಿಯಲು ಸಾಧ್ಯವಾಗದಿದ್ದಾಗ, ಅದಕ್ಕೆ ಪೀಠಾಧಿಪತಿಯನ್ನು ನೇಮಕ ಮಾಡುವ ಎಲ್ಲ ಅಧಿಕಾರ ಮತ್ತೊಂದು ಮಠದ ಪೀಠಾಧಿಪತಿಗೆ ಇರುತ್ತದೆ” ಎಂದರು

The state high court adjourned for order in High court into a petition challenging the appointment of a minor as the successor in place of the late Sri Laxmivara Theertha Swamiji of Shiroor Math. The public interest litigation in this respect has been filed by secretary of Shiroor Math Devotees Committee, P Lathavya Acharya and four others.