ಬ್ರೇಕಿಂಗ್ ನ್ಯೂಸ್
02-11-21 10:12 pm Headline Karnataka News Desk ಕರ್ನಾಟಕ
ಬೆಂಗಳೂರು, ನ.2: ಕೊನೆಯ ಎರಡು ವಾರ ಕಾಲ ಇಡೀ ರಾಜ್ಯ ಸರಕಾರವೇ ಅಲ್ಲಿ ಝಂಡಾ ಊರಿತ್ತು. ಒಂದ್ಕಡೆ ಸಿಎಂ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯ ಮತಕ್ಷೇತ್ರ, ಇನ್ನೊಂದ್ಕಡೆ ಸಚಿವ ಬಿಸಿ ಪಾಟೀಲರ ಹಿರೇಕೆರೂರಿನ ಪಕ್ಕದ ಕ್ಷೇತ್ರ. ಹಾಗಿದ್ದರೂ, ಹಾನಗಲ್ ನಲ್ಲಿ ಬಿಜೆಪಿ ಸೋಲು ಕಂಡಿದ್ದು ಬಿಜೆಪಿಯೊಳಗೇ ದೊಡ್ಡ ಒಳ ಬೇಗುದಿ ಸೃಷ್ಟಿಸಿದೆ. ಗೆದ್ದೇ ಗೆಲ್ಲುತ್ತೇವೆ ಎಂದು ಬೀಗಿದ್ದಲ್ಲದೆ, ಕೊನೆ ಕೊನೆಗೆ ಇಡೀ ರಾಜ್ಯ ಸರಕಾರದ ಸಚಿವರು, ಮುಖ್ಯಮಂತ್ರಿಯಾಗಿ ಪ್ರಚಾರ ನಡೆಸಿದರೂ ಮತದಾರ ಮಾತ್ರ ಒಲಿಯದೇ ಇರುವುದು ಬಿಜೆಪಿ ಒಳ ರಾಜಕೀಯದ ಪಟ್ಟನ್ನು ಹೊರಹಾಕಿದೆ.
ಸಹಜವಾಗೇ, ಈ ಸೋಲಿನ ಕ್ರೆಡಿಟ್ಟನ್ನು ಸಿಎಂ ಬೊಮ್ಮಾಯಿ ತಲೆಗೆ ಕಟ್ಟಲಾಗುತ್ತಿದೆ. ಯಾಕಂದ್ರೆ, ಸಿಎಂ ಅದೇ ಜಿಲ್ಲೆಯವರು ಮತ್ತು ಪಕ್ಕದ ಶಿಗ್ಗಾಂವಿ ಕ್ಷೇತ್ರದವರು. ಅಷ್ಟೇ ಅಲ್ಲ, ಲಿಂಗಾಯತ ಪ್ರಾಬಲ್ಯದ ಹಾನಗಲ್ ಸಿಎಂ ಪಾಲಿಗೆ ಬೀಗರ ಊರು. ಅವರ ಪತ್ನಿ ಇದೇ ಕ್ಷೇತ್ರದವರು ಅನ್ನುವ ಕಾರಣಕ್ಕೆ ಹಾನಗಲ್ ಗೆಲುವು ಬಿಜೆಪಿ ಮತ್ತು ಬೊಮ್ಮಾಯಿ ಪಾಲಿಗೆ ಅತ್ಯಂತ ಪ್ರಮುಖವಾಗಿತ್ತು. ಸಿಂದಗಿ ಗೆಲುವಿಗಿಂತಲೂ ಹಾನಗಲ್ ನಲ್ಲಿ ಸೋಲು ಕಾಣುವುದಂದ್ರೆ, ರಾಜ್ಯದ ಜನತೆಯ ಮೇಲೆ ಬೇರೆಯದೇ ಸಂದೇಶ ಹೋಗುತ್ತದೆ ಅನ್ನುವ ಕಾರಣಕ್ಕಾಗಿ ಗೆಲ್ಲಲೇಬೇಕೆಂದು ಶ್ರಮ ಹಾಕಲಾಗಿತ್ತು. ಆದರೆ ಬಿಜೆಪಿ ನಾಯಕರು ಹಾಕಿದ್ದ ಶ್ರಮ ಫಲ ನೀಡದೇ ಇರುವುದು ಯಾಕೆ ಎನ್ನುವುದು ತೀವ್ರ ಚರ್ಚೆಗೀಡಾಗಿರುವ ವಿಷಯ.
ಇಲ್ಲಿ ಬಿಜೆಪಿ ನಾಯಕರು ಹಾಕಿದ್ದ ಶ್ರಮ ಮತ್ತು ಗೇಮ್ ಪ್ಲಾನ್ ಗಿಂತಲೂ ಬೇರೆಯದ್ದೇ ವಿಚಾರ ವರ್ಕೌಟ್ ಆಗಿದೆ ಅನ್ನುವ ಮಾತು ಕೇಳಿಬರುತ್ತಿದೆ. ಲಿಂಗಾಯತ ಪ್ರಾಬಲ್ಯದ ಮತಕ್ಷೇತ್ರ ಆಗಿದ್ದರೂ ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ತಂಡಕ್ಕೆ ಹಾನಗಲ್ಲನ್ನು ಗೆಲ್ಲಿಸಲಾಗಲಿಲ್ಲ ಅನ್ನುವ ಸಂದೇಶ ಹೈಕಮಾಂಡಿಗೆ ಹೋಗುವಂತಾಗಿದ್ದು ದೊಡ್ಡ ಮೈನಸ್ ಪಾಯಿಂಟ್. ಇದೇ ರೀತಿಯ ಫಲಿತಾಂಶ ಬರಬೇಕೆಂದು ಯಡಿಯೂರಪ್ಪ ವಿರೋಧಿ ಬಣ ಒಳಗಿಂದೊಳಗೇ ಕಸರತ್ತು ನಡೆಸಿತ್ತಾ ಅನ್ನುವ ಮಾತು ಕೇಳಿಬರುವಂತಾಗಿದೆ. ಯಾಕಂದ್ರೆ, ಸಿಎಂ ಬೊಮ್ಮಾಯಿ ಅಧಿಕಾರಕ್ಕೇರಿ ಕೇವಲ ಎರಡು ತಿಂಗಳಲ್ಲೇ ತಮ್ಮ ಮಾತು ಮತ್ತು ಆಡಳಿತದ ನಡವಳಿಕೆಯಿಂದ ಭಾರೀ ವರ್ಚಸ್ಸು ಬೆಳೆಸಿಕೊಂಡಿದ್ದರು. ಇಡೀ ರಾಜ್ಯದಲ್ಲಿ ಬೊಮ್ಮಾಯಿ ತಮ್ಮದೇ ರೀತಿಯ ಸಜ್ಜನ ಸ್ವಭಾವದಿಂದಾಗಿ ಅಷ್ಟೇ ಜನಮನ್ನಣೆಯನ್ನೂ ಗಳಿಸಿದ್ದರು. ಯಡಿಯೂರಪ್ಪ ಇದ್ದಾಗಿನ ಸಂದರ್ಭಕ್ಕಿಂತಲೂ ಉತ್ತಮ ಆಡಳಿತ ಬೊಮ್ಮಾಯಿ ಅವಧಿಯಲ್ಲಿ ನಡೀತಿದೆ ಅನ್ನುವ ಸಂದೇಶ ಜನತೆಗೂ ಹೋಗಿತ್ತು. ಆದರೆ, ಈ ರೀತಿಯ ಉತ್ತಮ ಸಂದೇಶ ಹೋಗಿದ್ದು ವಿರೋಧಿ ಪಾಳಯಕ್ಕೆ ಸಹಿಸಲು ಆಗಲಿಲ್ಲ.
ಇದಕ್ಕಿಂತಲೂ ಹೆಚ್ಚು ಒಳಬೇಗುದಿಗೆ ಕಾರಣವಾಗಿದ್ದು, ಮುಂದಿನ ಚುನಾವಣೆಯನ್ನೂ ಸಿಎಂ ಬೊಮ್ಮಾಯಿ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದು ರಾಷ್ಟ್ರೀಯ ನಾಯಕರು ಹೇಳತೊಡಗಿದ್ದು. ಹಾವೇರಿಗೆ ಬಂದಿದ್ದ ಕೇಂದ್ರ ಸಚಿವ, ಚುನಾವಣಾ ಚಾಣಕ್ಯ ಅಮಿತ್ ಷಾ ಬೊಮ್ಮಾಯಿ ಪರವಾಗಿ ಬ್ಯಾಟಿಂಗ್ ಮಾಡಿದ್ದಲ್ಲದೆ, ಬೊಮ್ಮಾಯಿ ಅವರೇ ನಮ್ಮ ನಾಯಕ ಎಂದಿದ್ದು ಕೆಲವರ ಕಣ್ಣು ಕೆಂಪಾಗಿಸಿತ್ತು. ಯಾಕಂದ್ರೆ, ಮುಂದಿನ ಬಾರಿಯೂ ಬಿಜೆಪಿ ಬಹುಮತ ಸಾಧಿಸಿದಲ್ಲಿ ಬೊಮ್ಮಾಯಿ ಅವರಿಗೇ ಪಟ್ಟ ಹೋಗುತ್ತದೆ. ಮತ್ತು ಅಧಿಕಾರ ಕೇಂದ್ರ ಯಡಿಯೂರಪ್ಪ ಮತ್ತು ತಂಡದಲ್ಲೇ ಇರುತ್ತದೆ ಅನ್ನುವ ದೂರಾಲೋಚನೆ ವಿರೋಧಿ ಪಾಳಯದ್ದಿತ್ತು. ಇವೆಲ್ಲ ಕಾರಣಕ್ಕೆ ಹಾನಗಲ್ ಚುನಾವಣೆಯಲ್ಲಿ ಸೋತರೂ ಬಿಜೆಪಿ ಸರಕಾರಕ್ಕೇನೂ ಆಗೋದಿಲ್ಲ. ಬದಲಿಗೆ, ಸಿಎಂ ಬೊಮ್ಮಾಯಿ ಪಾಲಿಗೆ ಮಾತ್ರ ದೊಡ್ಡ ಮೈನಸ್ ಆಗುತ್ತದೆ ಅನ್ನುವ ಒಳ ರಾಜಕೀಯ ಇಲ್ಲಿ ವರ್ಕೌಟ್ ಆಗಿದೆ ಅನ್ನೋ ಮಾತು ಕೇಳಿಬಂದಿದೆ. ಇದೇ ಸೋಲನ್ನು ಮುಂದಿಟ್ಟು ಮುಂದಿನ ಬಾರಿಗೆ ಬೊಮ್ಮಾಯಿಗೆ ಅಧಿಕಾರ ನಿರಾಕರಣೆಯನ್ನು ಮಾಡಬಹುದು ಅನ್ನುವ ಕೆಲವರ ದೂರಗಾಮಿ ಆಲೋಚನೆಯೂ ವರ್ಕೌಟ್ ಆಗಿದೆ.
ಈ ರೀತಿಯ ಒಳಸುಳಿಯ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಿಎಂ ಬೊಮ್ಮಾಯಿ ತಿಳಿಯದವರೇನೂ ಅಲ್ಲ. ಆದರೆ, ಕೊನೆಕ್ಷಣದಲ್ಲಿ ಬಂದಿದ್ದ ಗುಪ್ತಚರ ವರದಿಯಿಂದಾಗಿ ಸಿಎಂ ಬೊಮ್ಮಾಯಿ ತೀವ್ರ ಚಿಂತೆಗೀಡಾಗಿದ್ದರು. ಏನೆಲ್ಲ ಕಸರತ್ತು ಮಾಡಿದ್ದರೂ ಮೈನಸ್ ಇದೆಯೆಂಬ ಆಂತರಿಕ ಸಮೀಕ್ಷೆ ಹೇಳಿದ್ದು ಮತ್ತು ಅದಕ್ಕೆ ಕಾರಣವಾದ ಕೆಲವು ಅಂಶಗಳ ಬಗ್ಗೆ ಹೆಡ್ ಲೈನ್ ಕರ್ನಾಟಕ (Headline Karnataka) ಮತದಾನಕ್ಕೆ ಮೂರು ದಿನ ಇರುವಾಗಲೇ ಪ್ರಸಾರ ಮಾಡಿತ್ತು. ಆದರೆ, ಈಗ ಬಿಜೆಪಿ ಸೋಲಿಗೆ ಪಕ್ಷದ ಒಳಗಿನ ಒಳಪಟ್ಟೇ ಕಾರಣ ಅನ್ನುವ ಗುಸು ಗುಸು ಆವರಿಸಿದೆ. ಸಿಎಂ ತವರಲ್ಲೇ ಬಿಜೆಪಿ ವಿಫಲವಾಗಿದ್ದು ಪಕ್ಷದ ಒಳಗೇ ತೀವ್ರ ಬೇಗುದಿ ಸೃಷ್ಟಿ ಮಾಡಿದೆ. ಹಾನಗಲ್ ಫಲಿತಾಂಶದ ಬಳಿಕ ಪ್ರತಿಕ್ರಿಯೆ ನೀಡಿದ್ದ ಯಡಿಯೂರಪ್ಪ, ಈ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಇದು ಯಾಕಾಯ್ತು, ಏನೇನು ತಪ್ಪು ಆಗಿದೆ ಅನ್ನೋದ್ರ ಬಗ್ಗೆ ನಾವು ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದು ಇದೇ ಭಾವನೆಯನ್ನು ಹೊಮ್ಮಿಸಿತ್ತು.
ಸಾಧಾರಣವಾಗಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ, ಉಪ ಚುನಾವಣೆಯಲ್ಲಿ ಹೆಚ್ಚಾಗಿ ಆಡಳಿತ ಪಕ್ಷವೇ ಗೆಲ್ಲುತ್ತದೆ ಅನ್ನುವುದು ಸಾಮಾನ್ಯ ಲೆಕ್ಕಾಚಾರ. ಈ ಬಾರಿಯೂ ಬಿಜೆಪಿಗೆ ಹಾನಗಲ್ ಕಷ್ಟವಾಗಲಿದೆ ಎಂದು ಆಂತರಿಕ ಸಮೀಕ್ಷೆ ಹೇಳಿದ್ದರೂ, ಗೆಲ್ಲಲೇಬೇಕೆಂದು ಶ್ರಮ ಹಾಕಿದರೆ ಇವ್ಯಾವುದೇ ತಡೆಗಳು ಅಡ್ಡಿಯಾಗಲ್ಲ ಅನ್ನುವ ಮಾತುಗಳೇ ಹೆಚ್ಚಿದ್ದವು. ಅದೇ ರೀತಿ, ಬಿಜೆಪಿ ಸರಕಾರದ ನಾಯಕರು ಮತ್ತು ಬೊಮ್ಮಾಯಿ ಅಂಡ್ ಟೀಮ್ ಕೆಲಸ ಮಾಡಿತ್ತು. ಹಾಗೆ ನೋಡಿದರೆ, ಕಳೆದ ಬಾರಿ ತುಮಕೂರಿನ ಶಿರಾದಲ್ಲಿ ಗೆಲುವು ಕಂಡಿದ್ದೇ ಅಚ್ಚರಿಯದ್ದು. ಅಲ್ಲಿ ಬಿಜೆಪಿಗೆ ನೆಲೆಯೇ ಇರದಿದ್ದ ಜಾಗವಾಗಿತ್ತು. ಯಡಿಯೂರಪ್ಪ ಪುತ್ರ ವಿಜಯೇಂದ್ರ ಮತ್ತವರ ತಂಡ ವಿಶೇಷ ಶ್ರಮ ಹಾಕಿದ್ದರಿಂದ ಜಯ ಲಭಿಸಿತ್ತು. ಆದರೆ, ಈಗಿನ ಸನ್ನಿವೇಶದಲ್ಲಿ ಸಿಎಂ ಉದಾಸಿ ಬಹುಕಾಲದಿಂದ ಪ್ರತಿನಿಧಿಸುತ್ತಿದ್ದ ಬಿಜೆಪಿ ಪ್ರಾಬಲ್ಯದ ಕ್ಷೇತ್ರ ಹಾನಗಲ್. ಹಿಂದುಳಿದ ಮತ್ತು ಮುಸ್ಲಿಂ ಮತಗಳು ಇದ್ದರೂ, ಅಲ್ಲಿ ಬಿಜೆಪಿ ವಿರೋಧಿ ಧ್ರುವೀಕರಣ ಆಗಿದ್ದು ಬೊಮ್ಮಾಯಿ ಅವರನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ.
ಇದೇ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದ ಒಂದು ಮಾತು ಮಾರ್ಮಿಕ ಆಗಿತ್ತು. ಯಾಕೆ ನೀವು, ಈ ಫಲಿತಾಂಶವನ್ನು ಕೇವಲ ಸಿಎಂ ಬೊಮ್ಮಾಯಿಗೆ ಸೀಮಿತಗೊಳಿಸಬೇಕು. ಇಡೀ ಬಿಜೆಪಿ ಸರಕಾರಕ್ಕೆ ಮುಖಭಂಗ ಆಗುವ ಫಲಿತಾಂಶ ಇದು. ರಾಜ್ಯದಲ್ಲಿ ಬಿಜೆಪಿ ಅಧಿಕಾರ ಇದ್ದು, ಅವರ ವಿರುದ್ಧ ಜನರು ಮತ ನೀಡಿದ್ದಾರೆ. ಇದು ಜನರು ಸರಕಾರದ ವಿರುದ್ಧ ನಿಂತಿದ್ದಾರೆ ಅನ್ನುವುದರ ಪ್ರತೀಕ ಎಂದು ಹೇಳಿದ್ದು ಬಿಜೆಪಿ ನಾಯಕರಿಗೆ ಮುಖಕ್ಕೆ ಹೊಡೆದಂತಿತ್ತು. ಕಾಂಗ್ರೆಸ್ ನಾಯಕರು ಮಾತ್ರ, ಈ ಒಂದು ಫಲಿತಾಂಶವನ್ನೇ ಮುಂದಿಟ್ಟು ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೇರುತ್ತದೆ ಎಂದು ಕನಸು ಕಾಣುತ್ತಿದ್ದಾರೆ. ಆದರೆ, ಈಗಿನ ರಾಜಕಾರಣ ನೋಡಿದರೆ, ಇವತ್ತು ಬಂದಿರುವ ಅಕ್ಕಪಕ್ಕದ ಜಿಲ್ಲೆಗಳ ಫಲಿತಾಂಶ ನೋಡಿದರೆ ಮತದಾರನ ನಿರ್ಣಯವನ್ನು ಯಾವುದೇ ರೀತಿಯಲ್ಲೂ ನಿರೀಕ್ಷೆಯೇ ಮಾಡುವಂತಿಲ್ಲ ಅನ್ನುವಂತಿದೆ.
ಹಾನಗಲ್ ಗೆಲುವಿಗೆ ಶ್ರೀನಿವಾಸ ಮಾನೆ ಕ್ಷೇತ್ರದಲ್ಲಿದ್ದುಕೊಂಡು ಕೋವಿಡ್ ಸಂದರ್ಭದಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ ಅನ್ನುವ ಅನುಕಂಪ ಮಾತ್ರ ಕಾರಣವಾಗಿದ್ದಲ್ಲ. ಹಲವು ವಿಚಾರಗಳು, ಪಕ್ಷದ ನಾಯಕರ ಒಳಬೇಗುದಿಯ ಅಸ್ತ್ರಗಳು ಕಾರಣವಾಗಿವೆ ಅನ್ನೋದು ಕೂಡ ಅಷ್ಟೇ ಸತ್ಯ. ಜೆಡಿಎಸ್ ಕಡೆಯಿಂದ ಮುಸ್ಲಿಂ ಮತ ಸೆಳೆಯಲೆಂದೇ ಹೂಡಿದ್ದ ಅಸ್ತ್ರವೂ ವರ್ಕೌಟ್ ಆಗದೇ ಇದ್ದುದು ಬಿಜೆಪಿ ನಾಯಕರಿಗೇ ತಲೆ ತುರಿಸಿಕೊಳ್ಳುವಂತಾಗಿದೆ. ಇವೆಲ್ಲದಕ್ಕೂ ಅಚ್ಚರಿ ಏನಂದ್ರೆ, ಎರಡೂ ಕಡೆ ಜೆಡಿಎಸ್ ಠೇವಣಿಯನ್ನೇ ಕಳಕೊಂಡು ಹೀನಾಯ ಸೋಲುಂಡಿದ್ದು. 2018ರಲ್ಲಿ ಸಿಂದಗಿಯಲ್ಲಿ ಗೆದ್ದಿದ್ದ ಕ್ಷೇತ್ರದಲ್ಲೂ ಜೆಡಿಎಸ್ಸಿಗೆ ಠೇವಣಿ ಉಳಿಸುವುದಕ್ಕೂ ಆಗಲಿಲ್ಲ ಅನ್ನೋದು ದೊಡ್ಡ ಹಿನ್ನಡೆ.
ಹಾನಗಲ್ ಕ್ಷೇತ್ರ – ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆಲುವಿನ ಅಂತರ 7373. ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ- 80117, ಕಾಂಗ್ರೆಸ್ ಶ್ರೀನಿವಾಸ ಮಾನೆ- 87490, ಜೆಡಿಎಸ್ ನಿಯಾಜ್ ಶೇಖ್- 927
ಸಿಂದಗಿ ಕ್ಷೇತ್ರ – ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ(93,380) ಗೆಲುವಿನ ಅಂತರ 31,088, ಕೈ ಅಭ್ಯರ್ಥಿ ಅಶೋಕ್ ಮನಗೂಳಿಗೆ ಸಿಕ್ಕಿದ್ದು 62,292, ಜೆಡಿಎಸ್ ನಾಜಿಯಾ ಅಂಗಡಿ- 4321
The incumbent Bharatiya Janata Party (BJP) government was left red-faced despite winning one of the two assembly seats in the Karnataka bypolls. The party, spearheaded by Chief Minister Basavaraj Bommai, registered a landslide victory in Sindgi, a seat previously held by the Deve Gowda-led JD(S). But in the prestige seat of Hangal, Bommai’s backyard where the party pulled out all the stops, the BJP lost to the Congress, sending shock waves across the party.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
26-11-24 09:43 pm
HK News Desk
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
26-11-24 11:23 pm
Udupi Correspondent
Mangalore, Suicide, Belthangady: ಬೆಳ್ತಂಗಡಿ ;...
26-11-24 10:58 pm
Mangalore Baby, Lady goschen Hospital: ಲೇಡಿಗೋ...
26-11-24 10:50 pm
Tamil Actor Surya, Jyothika, Udupi temple: ಕೊ...
26-11-24 08:23 pm
Mangalore, Police Anupam Agarwal IPS, DYFI; ಸ...
26-11-24 05:37 pm
26-11-24 03:10 pm
Mangalore Correspondent
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm