ಶ್ರೀಕಿ ಕಸ್ಟಡಿಯಲ್ಲಿದ್ದಾಗ 5 ಸಾವಿರ ಬಿಟ್ ಕಾಯಿನ್ ವರ್ಗಾವಣೆ ! ಯಾರ ಖಾತೆಗೆಲ್ಲ ಸಂದಾಯ ಆಗಿದೆ ; ಪ್ರಿಯಾಂಕ್ ಖರ್ಗೆ ಪ್ರಶ್ನೆ

17-11-21 10:04 pm       Hk Desk, Bengaluru   ಕರ್ನಾಟಕ

ರಾಜ್ಯ ಬಿಜೆಪಿ ಸರಕಾರದ ಪ್ರಭಾವಿಗಳು ಭಾಗಿಯಾಗಿದ್ದಾರೆ ಎನ್ನಲಾದ ಬಿಟ್ ಕಾಯಿನ್ ಹಗರಣದ ವಿಚಾರದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವರಾದ ಪ್ರಿಯಾಂಕ ಖರ್ಗೆ ಮತ್ತು ರಾಮಲಿಂಗಾ ರೆಡ್ಡಿ ಸುದ್ದಿಗೋಷ್ಠಿ ನಡೆಸಿದ್ದು, ಮತ್ತಷ್ಟು ಪ್ರಶ್ನೆಗಳನ್ನು ಬಿಜೆಪಿ ನಾಯಕರ ಮುಂದಿಟ್ಟಿದ್ದಾರೆ.

ಬೆಂಗಳೂರು, ನ.17: ರಾಜ್ಯ ಬಿಜೆಪಿ ಸರಕಾರದ ಪ್ರಭಾವಿಗಳು ಭಾಗಿಯಾಗಿದ್ದಾರೆ ಎನ್ನಲಾದ ಬಿಟ್ ಕಾಯಿನ್ ಹಗರಣದ ವಿಚಾರದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವರಾದ ಪ್ರಿಯಾಂಕ ಖರ್ಗೆ ಮತ್ತು ರಾಮಲಿಂಗಾ ರೆಡ್ಡಿ ಸುದ್ದಿಗೋಷ್ಠಿ ನಡೆಸಿದ್ದು, ಮತ್ತಷ್ಟು ಪ್ರಶ್ನೆಗಳನ್ನು ಬಿಜೆಪಿ ನಾಯಕರ ಮುಂದಿಟ್ಟಿದ್ದಾರೆ.

ಹ್ಯಾಕರ್ ಶ್ರೀಕಿ ಪೊಲೀಸ್ ಕಸ್ಟಡಿಯಲ್ಲಿದ್ದಾಗ 5 ಸಾವಿರ ಬಿಟ್ ಕಾಯಿನ್ ಗಳು ಆತನ ಬಳಿ ಇದ್ದವು ಎನ್ನುವ ಮಾಹಿತಿಗಳಿವೆ. ಆದರೆ, ಆರೋಪಿ ಕಸ್ಟಡಿಯಲ್ಲಿದ್ದಾಗಲೇ ಆತನ ಬಳಿಯಿದ್ದ ಬಿಟ್ ಕಾಯಿನ್ ಬೇರೆಯವರ ಖಾತೆಗಳಿಗೆ ವರ್ಗಾವಣೆ ಆಗಿದೆ. ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದೆ. ಯಾರಿಗೆಲ್ಲ ಎಷ್ಟು ವರ್ಗಾವಣೆ ಆಗಿದೆ, ವರ್ಗಾವಣೆ ಆಗಿರುವ ಖಾತೆಗಳು ಯಾರದ್ದು ಎನ್ನುವ ಮಾಹಿತಿಯನ್ನು ರಾಜ್ಯ ಸರಕಾರ ನೀಡಬೇಕು. ಆತ ಕಸ್ಟಡಿಯಲ್ಲಿರುವಾಗಲೇ 18 ಮತ್ತು 28 ಕೋಟಿ ಹಣ ಕೆಲವರ ಖಾತೆಗಳಿಗೆ ವರ್ಗಾವಣೆ ಆಗಿದ್ದು ಹೇಗೆ.. ಇದರ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಿಲ್ಲ ಯಾಕೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಎತ್ತಿದ್ದಾರೆ.

ನಾವು ಪೊಲೀಸರ ಅಧಿಕೃತ ದಾಖಲೆ ಇಟ್ಟುಕೊಂಡೇ ಪ್ರಶ್ನೆ ಮಾಡುತ್ತಿದ್ದೇವೆ. ನಮ್ಮ ಸಂಶಯ, ಪ್ರಶ್ನೆಗಳಿಗೆ ರಾಜ್ಯ ಸರಕಾರ, ತನಿಖೆ ನಡೆಸಿದ ಪೊಲೀಸರು ಉತ್ತರ ನೀಡಬೇಕಾಗಿದೆ. ಒಂದು ಕಡೆ ಶ್ರೀಕಿ ಬಳಿ 31 ಬಿಟ್ ಕಾಯಿನ್ ಇತ್ತು ಎಂದು ಹೇಳುತ್ತಾರೆ. ಮತ್ತೊಂದು ಕಡೆ 186 ಬಿಟ್ ಕಾಯಿನ್ ಇದ್ದ ಬಗ್ಗೆ ಮಾಹಿತಿ ನೀಡುತ್ತಾರೆ. ಈ ಬಿಟ್ ಕಾಯಿನ್ ಗಳು ಈಗ ಯಾರ ಬಳಿ ಇದೆ ಎನ್ನುವುದನ್ನು ಹೇಳುವುದಿಲ್ಲ. ಶ್ರೀಕಿ ಸ್ನೇಹಿತ ರಾವಿನ್ ಖಂಡೇವಾಲನ ಬಳಿ ಬಿಟ್ ಕಾಯಿನ್ ಗಳಿದ್ದವು. ಅವು ಎಲ್ಲಿ ಹೋದವು ಅನ್ನುವುದರ ಬಗ್ಗೆ ಉತ್ತರ ಇಲ್ಲ.

ಈ ನಡುವೆ ರಾಜ್ಯ ಪೊಲೀಸರು ತನಿಖೆಗಾಗಿ ಇಂಟರ್ ಪೋಲ್ ಗೆ ಪತ್ರ ಬರೆಯುತ್ತಾರೆ. ಆದರೆ, ಪತ್ರದಲ್ಲಿ ಕೇವಲ 23 ಸಾವಿರ ಎಂದು ತಪ್ಪು ಮಾಹಿತಿ ನೀಡುತ್ತಾರೆ. 23 ಸಾವಿರ ರೂಪಾಯಿಯೋ, 23 ಸಾವಿರ ಕೋಟಿಯೋ ಏನೆಂದು ಸ್ಪಷ್ಟವಾಗಿ ಹೇಳಿಲ್ಲ. ಪತ್ರದಲ್ಲಿ ಕೇಸ್ ಫೈಲ್ ಇಲ್ಲ. ಫೈಲ್ ನಂಬರ್ ಇಲ್ಲ. ರಾಜ್ಯ ಸರಕಾರ ಮತ್ತು ಪೊಲೀಸರು ಸೇರಿ ಒಟ್ಟು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿರುವುದು ಇದರ ಮೂಲಕ ಸ್ಪಷ್ಟವಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.

ಮರಿ ಯಡ್ಯೂರಪ್ಪ ಅನ್ನುವ ಧೈರ್ಯ ಇದೆಯೇ

ಇದೇ ವೇಳೆ, ಮೈಸೂರಿನ ಸಂಸದ ಪ್ರತಾಪ ಸಿಂಹ ತನ್ನನ್ನು ಹೆಣ್ಣೋ ಗಂಡೋ ಅನ್ನುವ ಪ್ರಶ್ನೆ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಅವನು ಹಿಂದೆ ಪತ್ರಿಕೆಯಲ್ಲಿ ಕೆಲಸ ಮಾಡಿ ಬಂದಿದ್ದಾದರೆ ಕನ್ನಡದ ಹೆಸರಿನ ಜ್ಞಾನ ಇರಬೇಕಿತ್ತು. ನಾನು ಎತ್ತಿರುವ ಪ್ರಶ್ನೆ ಬಿಟ್ಟು ವೈಯಕ್ತಿಕ ನಿಂದನೆ ಮಾಡುತ್ತಾನೆ. ನನಗೆ ಮರಿ ಖರ್ಗೆ ಎಂದು ಹೇಳುವ ಈತನಿಗೆ, ಯಡಿಯೂರಪ್ಪ ಪುತ್ರನಿಗೆ ಮರಿ ಯಡ್ಯೂರಪ್ಪಾ ಅಥವಾ ಅಮಿತ್ ಷಾ ಪುತ್ರನಿಗೆ ಮರಿ ಜೈಶಾ ಎಂದು ಹೇಳುವ ಧೈರ್ಯ ಇದೆಯೇ.. ಈ ಪ್ರತಾಪಸಿಂಹ ಕೇವಲ ಉತ್ತರ ಕುಮಾರ ಅಷ್ಟೇ. ಯಾರದ್ದೋ ಪ್ರಶ್ನೆಗೆ ಏನೋ ಉತ್ತರ ಕೊಟ್ಟು ಪೌರುಷ ಮೆರೆಯೋನು ಎಂದು ಟೀಕಿಸಿದರು.

ನಳಿನ್ ಕಟೀಲ್ ಮೌನದಲ್ಲೇ ಸಂಶಯ

ಬಿಟ್ ಕಾಯಿನ್ ಹಗರಣದ ವಿಚಾರ ರಾಜ್ಯದಲ್ಲಿ ಇಷ್ಟೊಂದು ಸದ್ದು ಮಾಡುತ್ತಿದ್ದರೆ, ಆಡಳಿತ ಪಕ್ಷದ ಅಧ್ಯಕ್ಷ ನಳಿನ್ ಕಟೀಲ್ ಸುಮ್ಮನಿದ್ದಾರೆ. ಏನೊಂದೂ ಪ್ರತಿಕ್ರಿಯೆ ಕೊಡದೆ ಸುಮ್ಮನಿರುವುದೇ ಸಂಶಯ ಮೂಡಿಸುತ್ತಿದೆ. ಅವರಿಗೆ ಈ ಹಗರಣದ ಬಗ್ಗೆ ಸಾಕಷ್ಟು ಮಾಹಿತಿ ಇರುವುದರಿಂದ ಸುಮ್ಮನಿದ್ದಾರೆಯೇ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನೆ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಅಧಿಕಾರಿ

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ಕ್ರೈಮ್ ಬ್ರಾಂಚ್ ಮಹಿಳಾ ಪೊಲೀಸ್ ಅಧಿಕಾರಿ ಕಾತ್ಯಾಯಿನಿ ಬಂದು ಕುಳಿತಿದ್ದರು. ಬಳಿಕ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪಿಸಿ ಕಚೇರಿ ಕೊಠಡಿಯಿಂದ ಹೊರಕ್ಕೆ ಕಳುಹಿಸಿದ ಘಟನೆ ನಡೆಯಿತು. ಯಾವ ವಿಚಾರದ ಬಗ್ಗೆ ಸುದ್ದಿಗೋಷ್ಟಿ ನಡೆಸುತ್ತಿದ್ದಾರೆಂದು ತಿಳಿಯಲು ರಾಜ್ಯ ಸರಕಾರ ಪಿಎಸ್ಐ ದರ್ಜೆಯ ಅಧಿಕಾರಿಯನ್ನು ಕಳುಹಿಸಿತ್ತೇ ಎಂದು ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡಿದ್ದಾರೆ. 

Five thousand Bitcoin transferred when Sriki was in Police custody alleges Priyank Kharge.