ಬಿಟ್ ಕಾಯಿನ್ ಬಗ್ಗೆ ಕಾಂಗ್ರೆಸಿಗರ ಮೌನ ; ರಾಜ್ಯ ಬಿಜೆಪಿ ಸರ್ಜರಿ ಮತ್ತೆ ಮುಂದಕ್ಕೆ, ಬೀಸೋ ದೊಣ್ಣೆಯಿಂದ ಪಾರಾದ ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ! ಹಾವು ಏಣಿಯಾಟದ ರಾಜಕೀಯ ತೂಗುಯ್ಯಾಲೆ !

16-01-22 10:11 pm       HK Desk news   ಕರ್ನಾಟಕ

ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಗೆ ಸಂಕ್ರಾಂತಿಯ ಗಡುವು ಅನ್ನೋದು ಮತ್ತೆ ಮುಂದಕ್ಕೆ ಹೋಗಿದೆ. ಸಂಕ್ರಾಂತಿ ಬಳಿಕ ರಾಜ್ಯ ಬಿಜೆಪಿಗೆ ಸರ್ಜರಿ, ಸಿಎಂ ಬದಲಾವಣೆ ಸಾಧ್ಯತೆ, ಹೊಸ ಸಂಪುಟ ರಚನೆ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೊಸಬರ ನೇಮಕ ಇತ್ಯಾದಿ ಸುದ್ದಿಗಳು 15 ದಿನಗಳ ಹಿಂದೆ ತೀವ್ರವಾಗಿ ಹರಿದಾಡಿದ್ದವು.

ಬೆಂಗಳೂರು, ಜ.16 : ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಗೆ ಸಂಕ್ರಾಂತಿಯ ಗಡುವು ಅನ್ನೋದು ಮತ್ತೆ ಮುಂದಕ್ಕೆ ಹೋಗಿದೆ. ಸಂಕ್ರಾಂತಿ ಬಳಿಕ ರಾಜ್ಯ ಬಿಜೆಪಿಗೆ ಸರ್ಜರಿ, ಸಿಎಂ ಬದಲಾವಣೆ ಸಾಧ್ಯತೆ, ಹೊಸ ಸಂಪುಟ ರಚನೆ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೊಸಬರ ನೇಮಕ ಇತ್ಯಾದಿ ಸುದ್ದಿಗಳು 15 ದಿನಗಳ ಹಿಂದೆ ತೀವ್ರವಾಗಿ ಹರಿದಾಡಿದ್ದವು. ಕೊನೆಗೊಮ್ಮೆ ಸಿಎಂ ಬದಲಾವಣೆ ಆಗದಿದ್ದರೂ, ಹಿರಿಯ ಸಚಿವರನ್ನು ಕೈಬಿಟ್ಟು ಹೊಸ ಸಂಪುಟ ರಚನೆ ಮಾಡುವುದು ಪಕ್ಕಾ ಎನ್ನಲಾಗಿತ್ತು. ಅಷ್ಟೇ ಅಲ್ಲ, ಮುಂದಿನ ಚುನಾವಣೆ ದೃಷ್ಟಿಯಿಂದ ಪ್ರಮುಖ ಜಾತಿ ಬಲದ ವ್ಯಕ್ತಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವುದು ಎನ್ನುವ ಮಾತುಗಳಿದ್ದವು.

ಆದರೆ, ಈ ನಡುವೆ ದಿಢೀರ್ ಆಗಿ ಎದ್ದು ಬಂದ ಕೊರೊನಾ ಸೋಂಕು, ಉತ್ತರ ಪ್ರದೇಶದಲ್ಲಿ ಚುನಾವಣೆ ಘೋಷಣೆಯಾಗಿದ್ದರಿಂದ ಕೇಂದ್ರ ನಾಯಕರು ಅತ್ತ ಬಿಝಿಯಾಗಿದ್ದು, ರಾಜ್ಯದ ಬಿಜೆಪಿ ನಾಯಕರ ಉಸಿರನ್ನು ಸದ್ಯಕ್ಕೆ ಉಳಿಸಿಬಿಟ್ಟಿದೆ. ಹೀಗಾಗಿ  ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಇಬ್ಬರು ಕೂಡ ಮಾರ್ಜ್ 10ರ ಗಡುವು ಕಳೆಯುವ ವರೆಗೆ ಚಿಂತೆ ಮಾಡುವ ಅಗತ್ಯ ಇಲ್ಲ. ಆ ಮಟ್ಟಿಗೆ ರಾಜ್ಯ ಬಿಜೆಪಿ ನಾಯಕರು ಮತ್ತು ಸಿಎಂ ಬೊಮ್ಮಾಯಿ ಬೀಸೋ ದೊಣ್ಣೆಯಿಂದ ಪಾರಾಗಿದ್ದಾರೆ.

ಒಂದು ತಿಂಗಳ ಹಿಂದೆ, ಅಂದರೆ ಡಿಸೆಂಬರ್ ಆರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ತಲೆದಂಡ ಪಡೆಯುವುದು ಪಕ್ಕಾ ಎನ್ನುವ ಸುದ್ದಿ ದೆಹಲಿ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಬಿಟ್ ಕಾಯಿನ್ ಹಗರಣದಲ್ಲಿ ನಳಿನ್ ಕುಮಾರ್ ಹೆಸರು ಕೇಳಿಬಂದಿದ್ದರಿಂದ ಪ್ರಧಾನಿ ಮೋದಿ ಹುದ್ದೆ ತೆರವಿಗೆ ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿಗಳಿದ್ದವು. ರಾಜಧಾನಿ ದೆಹಲಿಯ ಮಾಧ್ಯಮ ವಲಯದಲ್ಲಿ ಈ ಕುರಿತು ಖಚಿತ ಮಾಹಿತಿಗಳು ಇದ್ದುದರಿಂದ ರಾಜ್ಯಾಧ್ಯಕ್ಷರ ತಲೆದಂಡ ಖಚಿತ ಎನ್ನಲಾಗಿತ್ತು. ಆದರೆ, ಈ ಮಾತುಗಳು ಕೇವಲ ವದಂತಿಗಷ್ಟೇ ಸೀಮಿತವಾಗಿದ್ದು ನಿಜಕ್ಕೂ ಅಚ್ಚರಿ.

ಇದಕ್ಕೆ ಕಾರಣ ಹಲವಿರಬಹುದು. ಬಿಟ್ ಕಾಯಿನ್ ಪ್ರಕರಣದಲ್ಲಿ ಸಾವಿರಾರು ಕೋಟಿ ಹಗರಣ ಆಗಿದೆ ಎಂದು ಗುಲ್ಲೆಬ್ಬಿಸಿದ್ದ ಕಾಂಗ್ರೆಸ್ ನಾಯಕರು ಬೆಳಗಾವಿ ಅಧಿವೇಶನದಲ್ಲಿ ಉದ್ದೇಶಪೂರ್ವಕ ಮೌನ ವಹಿಸಿದ್ದು ಈ ವಿಚಾರದಲ್ಲಿ ಏನೋ ಅಡಗಿದೆ ಎನ್ನುವುದನ್ನು ಪರೋಕ್ಷವಾಗಿ ತೋರಿಸಿಕೊಟ್ಟಿದ್ದಾರೆ. ಬಿಜೆಪಿ ಸರಕಾರದಲ್ಲಿ ದೊಡ್ಡ ಹಗರಣ ಆಗಿದ್ದನ್ನು ಸದ್ದು ಮಾಡುವಷ್ಟರ ಮಟ್ಟಿಗೆ ಒಯ್ಯಲು ಕಾಂಗ್ರೆಸ್ ನಾಯಕರು ಸೋತಿದ್ದರ ಹಿಂದೆ ಸೋತಂತೆ ನಟಿಸಿದ್ದಾರೆ ಅನ್ನುವ ರೀತಿ ವರ್ತಿಸಿದ್ದಾರೆ. ಯಾಕಂದ್ರೆ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಐದು ಸಾವಿರ ಕೋಟಿಯ ಹಗರಣ ಎಂದಿದ್ದರು. ಸರಕಾರದ ಇ-ಟೆಂಡರ್, ಜನಧನ್ ಖಾತೆಯಿಂದ ಹಣ ಕದ್ದಿದ್ದು, ವಿವಿಧ ರಾಜ್ಯ ಸರಕಾರಗಳ ಬೊಕ್ಕಸಕ್ಕೆ ಕನ್ನ ಹಾಕಿದ್ದರ ಬಗ್ಗೆ ಹೇಳಿಕೊಂಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರ ಹೆಸರು, ಅವರ ಜೊತೆಗೆ ಪಾಲುದಾರಿಕೆ ಪಡೆದವರ ಹೆಸರು ಹೇಳಿದ್ದೂ ಅದೇ ಲಕ್ಷ್ಮಣ್. ಇವೆಲ್ಲದಕ್ಕೂ ರೂವಾರಿಯಾಗಿದ್ದ ಶ್ರೀಕಿಯನ್ನು ಇವರೆಲ್ಲ ಸೇರಿ ಮುಗಿಸಿ ಹಾಕುತ್ತಾರೋ ಅನ್ನುವ ಬಗ್ಗೆ ಆತಂಕ ಇದೆ ಎಂದೂ ಹೇಳಿದ್ದರು.

ಕಾಯಿನ್ ಬಗ್ಗೆ ಕಾಂಗ್ರೆಸಿಗರ ಮೌನದ ಗುಟ್ಟೇನು ?

ಬೆಳಗಾವಿ ಅಧಿವೇಶನಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕೂಡ ಬಿಟ್ ಕಾಯಿನ್ ಹಗರಣ ಮುಂದಿಟ್ಟು ಬಿಜೆಪಿ ನಾಯಕರನ್ನು ಕಟ್ಟಿಹಾಕುವುದಾಗಿ ಹೇಳಿದ್ದರು. ಆದರೆ, ಅಧಿವೇಶನದಲ್ಲಿ ಬಿಜೆಪಿಯವರಂತೂ ಈ ಬಗ್ಗೆ ಮಾತನಾಡಿಲ್ಲ. ಕಾಂಗ್ರೆಸ್ ನಾಯಕರು ಜಾಣ ಮೌನವನ್ನು ವಹಿಸಿದ್ದಲ್ಲದೆ, ಪೊಲೀಸರಿಗೂ ಸಿಗದೆ ನಾಪತ್ತೆಯಾಗಿದ್ದ ಆರೋಪಿ ಶ್ರೀಕಿ ಬಗ್ಗೆ ಪ್ರಶ್ನೆ ಎತ್ತುವುದಕ್ಕೂ ಹಿಂಜರಿಕೆ ತೋರಿದ್ದು ಇದರಲ್ಲಿ ಉದ್ದೇಶಪೂರ್ವಕ ಮೌನ ವಹಿಸಿದ್ದಕ್ಕೆ ಸಾಕ್ಷಿ ಅನ್ನಲೇಬೇಕು. ಪ್ರತಿಪಕ್ಷಗಳೇ ಮೌನ ವಹಿಸಿದ ಮೇಲೆ ತಾವಾಗೇ ಕ್ರಮ ಕೈಗೊಂಡು ವಿವಾದ ಮೈಮೇಲೆ ಎಳಕೊಳ್ಳುವುದು ಯಾಕೆ ಅಂತಲೋ ಏನೋ ಬಿಜೆಪಿ ನಾಯಕರು ಹಗರಣವನ್ನು ಸದ್ದಿಲ್ಲದೆ ಮುಚ್ಚಿ ಹಾಕಿದ್ದಾರೆ. ಆರೋಪ ಕೇಳಿಬಂದ ಪಕ್ಷದ ನಾಯಕರ ಮೇಲೆ ತೂಗುಗತ್ತಿ ಬೀಸುವುದನ್ನೂ ಗಾಳಿಗೆ ಹಾರಿಸಿದ್ದಾರೆ.

ಆದರೆ ಬಿಜೆಪಿ ಒಳಗಿನ ರೆಬಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರ, ಚುನಾವಣೆ ದೃಷ್ಟಿಯಿಂದ ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತೆ ಎನ್ನುತ್ತಲೇ ಬಂದಿದ್ದಾರೆ. ಡಿಸೆಂಬರ್ ಕೊನೆಯಲ್ಲಿ ಸಿಎಂ ಬದಲಾವಣೆಯ ಮಾತನ್ನೂ ಹೇಳಿದ್ದರು. ರಾಜ್ಯ ಬಿಜೆಪಿಯಲ್ಲಿ ಮಹತ್ತರ ಬದಲಾವಣೆ ಅಂತೂ ಖಂಡಿತ ಎಂದು ಹೇಳಿದ್ದು ಬಿಜೆಪಿ ಒಳಗೆ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಸೂಚಿಸಿತ್ತು. ಆನಂತರ, ತನ್ನ ಮಾತಿನ ವರಸೆಯನ್ನು ಬದಲಿಸಿ ಸಚಿವ ಸಂಪುಟ ಪುನಾರಚನೆ ಆಗಲಿದೆ, ಹಿರಿಯರನ್ನು ಕೈಬಿಟ್ಟು ಹೊಸಬರನ್ನು ಸೇರಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದರು. ಆಮೂಲಕ ಬಿಜೆಪಿ ವರಿಷ್ಠರು, ಹಿಂದೆ ನಿಂತು ಕೈಯಾಡಿಸುವ ಆರೆಸ್ಸೆಸ್ ನಾಯಕರ ಇಂಗಿತವನ್ನು ಹೊರಹಾಕಿದ್ದರು. ಆದರೆ ಸದ್ಯಕ್ಕೆ ಬೀಸೋ ದೊಣ್ಣೆ ಒಂದು ಹಂತಕ್ಕೆ ಮುಂದಕ್ಕೆ ಹೋಗಿದೆ.

ನಿರಾಣಿಗೆ ಸಿಎಂ ಪಟ್ಟ ಎಂಬ ವದಂತಿ ಸೃಷ್ಟಿ

ಈ ನಡುವೆ, ಡಿಸೆಂಬರ್ ಕೊನೆಯ ವೇಳೆಗೆ ಸಿಎಂ ಬಸವರಾಜ ಬೊಮ್ಮಾಯಿ ವೈರಾಗ್ಯದ ಮಾತಾಡಿದ್ದು, ತನ್ನದೇ ಕ್ಷೇತ್ರದಲ್ಲಿ ನಿಂತು ಅಧಿಕಾರ ಶಾಶ್ವತವಲ್ಲ ಎಂದಿದ್ದು ಸಿಎಂ ಬದಲಾವಣೆಯ ಸಂಕೇತ ಎಂದೇ ಹೇಳಲಾಗಿತ್ತು. ಸಂಕ್ರಾಂತಿ ವೇಳೆಗೆ ಅವರನ್ನು ಎಬ್ಬಿಸಿ, ಇನ್ಯಾರನ್ನೋ ಕೂರಿಸಲಿದ್ದಾರೆ ಎನ್ನುವ ವದಂತಿಯೂ ಹರಡಿತ್ತು. ಇದಕ್ಕೆ ಪೂರಕ ಎನ್ನುವಂತೆ ಸಚಿವ ಮುರುಗೇಶ ನಿರಾಣಿ, ಸಿಎಂ ಬೊಮ್ಮಾಯಿ ಜೊತೆಗಿದ್ದ ಸಮಾರಂಭದಲ್ಲಿಯೇ ಬೊಮ್ಮಾಯಿ ಕೇಂದ್ರ ಸಚಿವರಾಗಲಿದ್ದಾರೆ ಎಂದು ಹೇಳಿ ವದಂತಿಗೆ ರೆಕ್ಕೆ ಪುಕ್ಕ ಹಬ್ಬಿಸಿದ್ದರು. ಈ ವೇಳೆ, ಸಹಜವಾಗೇ ಮತ್ತೊಬ್ಬ ಲಿಂಗಾಯತ ವ್ಯಕ್ತಿಯಾಗಿರುವ ಮತ್ತು ಅಮಿತ್ ಷಾ ಜೊತೆಗೆ ಹತ್ತಿರದ ನಂಟು ಇಟ್ಟುಕೊಂಡಿರುವ ನಿರಾಣಿಯೇ ಸಿಎಂ ಆಗಲಿದ್ದಾರೆ ಎನ್ನುವ ಮಾತೂ ಕೇಳಿಬಂದಿತ್ತು.

ಆಗಿನ ಸನ್ನಿವೇಶ, ರಾಜ್ಯ ನಾಯಕರ ವರ್ತನೆ ನೋಡಿದರೆ ಅಂಥ ಸಾಧ್ಯತೆ ತಳ್ಳಿಹಾಕುವಂತೆಯೂ ಇರಲಿಲ್ಲ. ಆದರೆ ಈ ನಡುವೆ ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆದಿತ್ತು. ರಾಜ್ಯ ರಾಜಕೀಯ, ಚುನಾವಣೆಯಲ್ಲಿ ಹಿನ್ನಡೆ ವಿಚಾರದ ಬಗ್ಗೆ ಚರ್ಚೆ ನಡೆಸುವುದಕ್ಕೆ ಪಕ್ಷದ ಉಸ್ತುವಾರಿ ಅರುಣ್ ಸಿಂಗ್ ಕೂಡ ಬಂದಿದ್ದರು. ಆದರೆ, ಕಾರ್ಯಕಾರಿಣಿಗೆ ಬಂದ ಅರುಣ್ ಸಿಂಗ್ ಮತ್ತು ಇತರ ನಾಯಕರಿಗೆ ಮಾಜಿ ಸಿಎಂ ಯಡಿಯೂರಪ್ಪ ಶಾಕ್ ಕೊಟ್ಟಿದ್ದರು. ಯಡಿಯೂರಪ್ಪ ಮತ್ತು ಪುತ್ರರು ಕಾರ್ಯಕಾರಿಣಿಗೆ ಗೈರಾಗಿ ನೇರವಾಗಿ ದುಬೈಗೆ ಹಾರುವ ಮೂಲಕ ರಾಜ್ಯ ಬಿಜೆಪಿ ಒಳಗಿನ ಮುಸುಕಿನ ಗುದ್ದಾಟವನ್ನು ಹೊರಹಾಕಿದ್ದರು. ಇದರಿಂದ ಮುಜುಗರಕ್ಕೆ ಒಳಗಾಗಿದ್ದ ಅರುಣ್ ಸಿಂಗ್ ಕಾರ್ಯಕಾರಿಣಿಯ ಎರಡನೇ ದಿನ ಮಧ್ಯಾಹ್ನಕ್ಕೆ ಮೊದಲೇ ಗಂಟುಮೂಟೆ ಕಟ್ಟಿದ್ದರು.

ಏನಿದ್ದರೂ ಯಡಿಯೂರಪ್ಪ ಅಂಕಿತ ಬೇಕಷ್ಟೇ !  

ಸಿಎಂ ಬೊಮ್ಮಾಯಿ ಬದಲಾವಣೆ, ನಿರಾಣಿಗೆ ಪಟ್ಟ ಕಟ್ಟುವುದಂತೂ ಯಡಿಯೂರಪ್ಪ ಅಂಡ್ ಪಟಾಲಂಗೆ ಇಷ್ಟವಿರಲಿಲ್ಲ. ಅಷ್ಟೇ ಅಲ್ಲ, ಅಂಥ ಪ್ರಸ್ತಾಪಕ್ಕೆ ಪ್ರಬಲ ವಿರೋಧವನ್ನೂ ಹೊಂದಿದ್ದರು. ಹಾಗಾಗಿ ಕಾರ್ಯಕಾರಿಣಿಯಿಂದ ದೂರ ನಿಲ್ಲುವ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಸಡ್ಡು ಹೊಡೆದಿದ್ದರು. ಇದರ ಬಗ್ಗೆ ಅರಿತ ಆರೆಸ್ಸೆಸ್ಸಿನ ಒಂದು ಬಣ ಸಿಎಂ ಬದಲಾವಣೆ ಮಾಡುವುದಿದ್ದರೂ, ಯಡಿಯೂರಪ್ಪ ಒಪ್ಪುವ ವ್ಯಕ್ತಿಯೇ ಆಗಬೇಕು ಎಂಬ ಬಗ್ಗೆ ತಲಾಶ್ ನಡೆಸಿತ್ತು. ಈ ನಿಟ್ಟಿನಲ್ಲಿ ಯಡಿಯೂರಪ್ಪ ಬಣಕ್ಕೂ ಸಲ್ಲುವ ಮತ್ತು ಇತ್ತ ಆರೆಸ್ಸೆಸ್ ನಾಯಕರಿಗೂ ಸಲ್ಲುವ ವ್ಯಕ್ತಿಯ ಹೆಸರನ್ನು ಫೈನಲ್ ಮಾಡಿದ್ದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಸಿಎಂ ಪಟ್ಟ ಕಟ್ಟಿ ಒಕ್ಕಲಿಗರಿಗೆ ಸ್ಥಾನ, ಅದರ ಜೊತೆಗೆ ರಾಜ್ಯದಲ್ಲಿ ಮೊದಲ ಬಾರಿಗೆ ಮಹಿಳೆಗೆ ಸಿಎಂ ಸ್ಥಾನ ಒದಗಿಸುವ ಚಿಂತನೆ ನಡೆದಿತ್ತು. ಶೋಭಾ ಸಂಪುಟದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ, ಯತ್ನಾಳರಿಗೂ ಸ್ಥಾನ ಕೊಟ್ಟು ಹಲವು ಹಿರಿಯರನ್ನು ಬದಲಿಸುವುದಕ್ಕೂ ಪ್ಲಾನ್ ಆಗಿತ್ತು. ಶೋಭಾಗೆ ಈ ಬಗ್ಗೆ ರೆಡಿ ಆಗಿರುವಂತೆ ಸೂಚನೆಯನ್ನೂ ನೀಡಲಾಗಿತ್ತು ಅನ್ನುವ ಮಾಹಿತಿ ಬಿಜೆಪಿ ಒಳಗಿಂದಲೇ ತಿಳಿದುಬಂದಿತ್ತು. ಇದರ ಬಗ್ಗೆ ಸುಳಿವು ಪಡೆದ ಕೆ.ಎಸ್.ಈಶ್ವರಪ್ಪ ತಾವು ಸ್ಥಾನ ಬಿಟ್ಟು ಕೊಡಲು ಸಿದ್ಧ ಎಂದಿದ್ದು ಈ ರೀತಿಯ ಚಿಂತನೆ ಆಗಿದ್ದು ಸತ್ಯ ಎನ್ನುವುದನ್ನು ಸೂಚಿಸಿತ್ತು. 

ಆದರೆ ಸಿಎಂ ಸ್ಥಾನವನ್ನು ಕರಾವಳಿಗೆ ಕೊಟ್ಟರೆ, ಆಕೂಡಲೇ ರಾಜ್ಯಾಧ್ಯಕ್ಷರ ಬದಲಾವಣೆಯೂ ಆಗಬೇಕಿತ್ತು. ಸಿಎಂ ಬೊಮ್ಮಾಯಿಗೆ ಮಂಡಿ ನೋವು ನೆಪದಲ್ಲಿ ಸ್ಥಾನ ತ್ಯಜಿಸಲು ಹೇಳುವ ಬಗ್ಗೆಯೂ ಪ್ಲಾನ್ ಆಗಿತ್ತು. ಆದರೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರು ಎನ್ನುವ ಬಗ್ಗೆ ಚರ್ಚೆ ನಡೆದು, ಆರೆಸ್ಸೆಸ್ ಗುಂಪು ಬಿ.ಎಲ್.ಸಂತೋಷ್ ಅವರ ನಿಷ್ಠ ಎಂದು ಗುರುತಿಸಿರುವ ಮತ್ತೊಬ್ಬ ಲಿಂಗಾಯತ ಲಕ್ಷ್ಮಣ ಸವದಿಗೆ ಪಟ್ಟ ಕಟ್ಟಲು ಮುಂದಾಗಿತ್ತು. ಆದರೆ, ಸವದಿ ಹೆಸರನ್ನು ಯಡಿಯೂರಪ್ಪ ಅಂಡ್ ಟೀಂ ಒಪ್ಪಿರಲಿಲ್ಲ. ಸವದಿ ಲಿಂಗಾಯತ ಅನ್ನುವ ನೆಲೆಯಲ್ಲಿ ಆ ವ್ಯಕ್ತಿಗೆ ಪಟ್ಟ ಕಟ್ಟಿ ಚುನಾವಣೆ ಎದುರಿಸುವ ಚಿಂತನೆ ಇತ್ತು. ಆದರೆ ಸವದಿ ಹೆಸರಿಗೆ ಅತ್ತ ಶೆಟ್ಟರ್ ಟೀಂ ಆಗಲೀ, ಉತ್ತರ ಕರ್ನಾಟಕದ ಆರೆಸ್ಸೆಸ್ ಬಳಗ ಆಗಲೀ ಒಪ್ಪಿಗೆ ಸೂಚಿಸಲಿಲ್ಲ.

ಹೀಗೆ ರಾಜ್ಯ ಬಿಜೆಪಿಗೆ ಸರ್ಜರಿ ಮಾಡುವ ಬಗ್ಗೆ ಏನೆಲ್ಲಾ ಕಸರತ್ತು ನಡೆದಿದ್ದರೂ, ಅದ್ಯಾವುದೂ ಸಕ್ಸಸ್ ಅಂತೂ ಆಗಿಲ್ಲ. ಇವೆಲ್ಲ ಅಂತೆ ಕಂತೆಗಳ ನಡುವೆ ಸರ್ಜರಿ ಗಡುವು ಈಗ ಮಾರ್ಚ್ ಗೆ ಹೋಗಿದೆ. ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕವೇ ಏನಿದ್ದರೂ ಆ ಬಗ್ಗೆ ಚಿಂತನೆ ಎನ್ನುವ ಮಾಹಿತಿಯಿದೆ. ಹೀಗಾಗಿ ಯಡಿಯೂರಪ್ಪ ಮತ್ತು ಬಿ.ಎಲ್. ಸಂತೋಷ್ ಬಣದ ಎರಡು ದೋಣಿಗಳ ಹಾವು ಏಣಿಯಾಟದಲ್ಲಿ ಈ ಸರಕಾರ ಮುಗಿದು ಹೋದರೂ ಅಚ್ಚರಿ ಇಲ್ಲ.

Congress who was lunging against BJP Bitcoin scam is now silent. In Karnataka, Chief Minister Basavaraj Bommai's government was in doldrums over an alleged multi-crore bitcoin scam that has hacker, Srikrishna Ramesh alias Sriki, at the centre of it. While the Congress has accused the Bommai government of covering up the scam – which according to the Opposition could implicate BJP politicians and high-ranking police officials – the BJP government in Karnataka has brushed off the matter as a "non-issue".