ಕಾಂಗ್ರೆಸ್ ಕೊಳೆತು ನಾರುತ್ತಿದೆ, ಕೊಳೆತ ಮಾವಿನ ಹಣ್ಣನ್ನು ಯಾರಾದ್ರೂ ಖರೀದಿಸ್ತಾರಾ..? ಸಿದ್ದರಾಮಯ್ಯಗೆ ಸಚಿವ ಈಶ್ವರಪ್ಪ ಟಾಂಗ್ 

26-01-22 02:25 pm       HK Desk news   ಕರ್ನಾಟಕ

ಬಿಜೆಪಿ ಶಾಸಕರು, ಸಚಿವರು ನನ್ನ ಸಂಪರ್ಕದಲ್ಲಿದ್ದಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಕೆ.ಎಸ್ ಈಶ್ವರಪ್ಪ ಟಾಂಗ್ ನೀಡಿದ್ದಾರೆ.

ಚಿಕ್ಕಮಗಳೂರು, ಜ.26 : ಬಿಜೆಪಿ ಶಾಸಕರು, ಸಚಿವರು ನನ್ನ ಸಂಪರ್ಕದಲ್ಲಿದ್ದಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಕೆ.ಎಸ್ ಈಶ್ವರಪ್ಪ ಟಾಂಗ್ ನೀಡಿದ್ದಾರೆ. ಕೊಳೆತುಹೋಗಿರುವ ಮಾವಿನ ಹಣ್ಣನ್ನ ಯಾರಾದ್ರೂ ಖರೀದಿ ಮಾಡ್ತಾರಾ..? ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕೊಳೆತು ನಾರುತ್ತಿದೆ. ಬಿಜೆಪಿ ಮೋದಿಯಂತಹ ವ್ಯಕ್ತಿಯ ಒಳ್ಳೆ ಸೇಬು. ಒಳ್ಳೆಯ ಸೇಬನ್ನ ಬಿಟ್ಟು ಕೊಳೆತು ಮಾವಿನ ಹಣ್ಣಿನ ಹತ್ತಿರ ಹೋಗ್ತಾರಾ ? ಎಂದು ಪ್ರಶ್ನೆ ಮಾಡಿದ್ದಾರೆ. 

ಕಾಂಗ್ರೆಸ್ ಪಕ್ಷಕ್ಕೆ ಡಿಮ್ಯಾಂಡ್ ಕ್ರಿಯೇಟ್ ಮಾಡೋಕೆ ಈ ರೀತಿಯ ಆಟ ಆಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು, ಸರ್ಕಾರ ಕಳೆದುಕೊಂಡರು. ಈಗಲೂ ಮಾನ ಮರ್ಯಾದೆ ಇಲ್ಲದ ಹಾಗೆ ಈ ರೀತಿ ಮಾತನಾಡುತ್ತಿದ್ದಾರೆ. ನರೇಂದ್ರ ಮೋದಿಯಂಥ ನಾಯಕ ಕಾಂಗ್ರೆಸ್ ನಲ್ಲಿ, ಜೆಡಿಎಸ್ ನಲ್ಲಿ ಸಿಕ್ತಾರಾ..? ನಮ್ಮತ್ರ ಬೈಸಿಕೊಳ್ಳೋಕೆ ಈ ರೀತಿ ಮಾತುಗಳನ್ನು ಸಿದ್ದರಾಮಯ್ಯ ಆಡ್ತಾರೆ. ನಾನು ಬದುಕಿದ್ದೇನೆ, ಜೀವಂತವಿದ್ದೀನಿ ಅಂತಹ ತೋರಿಸಿಕೊಳ್ಳೋಕೆ ಈ ರೀತಿ ಮಾತಾಡ್ತಾರೆ. ಎಷ್ಟು ಜನ ಇದ್ದಾರೆ ಅನ್ನೋದನ್ನ ಹೇಳಲ್ಲ, ಹೆಸರನ್ನು ಹೇಳಲ್ಲ.‌ ಇಟ್ಕೋ ನಿನ್ನ ಹತ್ರನೇ, ನಮಗೇನಂತೆ ಎಂದು ಏಕವಚನದಲ್ಲೇ ಈಶ್ವರಪ್ಪ ವಾಗ್ದಾಳಿ ನಡೆಸಿದರು.‌

ನಾನು ಡಿಕೆಶಿ, ಸಿದ್ದರಾಮಯ್ಯಗೆ ಸವಾಲು ಹಾಕುತ್ತೇನೆ. ಒಬ್ಬ ಬಿಜೆಪಿ ಸಿಂಹದಮರಿ ಎಂಎಲ್ಎನ ಕಾಂಗ್ರೆಸ್ಗೆ ಬರ್ತಾರೆ ಅಂತಾ ಹೆಸರು ಹೇಳಲಿ. ಇಬ್ಬರು ಕೂಡ ಬರೀ ಪುಕ್ಸಟ್ಟೆ ಮಾತುಗಳನ್ನು ಆಡ್ತಾರೆ ಎಂದು ಚಿಕ್ಕಮಗಳೂರಿಗೆ ಉಸ್ತುವಾರಿ ಸಚಿವನಾಗಿ ಬಂದ ಕೆಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. 

ಕಾಂಗ್ರೆಸ್ನವರು ಈಗ ಮಹಾದಾಯಿ ವಿಚಾರದಲ್ಲಿ ಪಾದಯಾತ್ರೆ ಮಾಡ್ತಾರಂತೆ. ಕಾಂಗ್ರೆಸ್ಸನ್ನ ಒಂದು ರಾಜಕೀಯ ಪಕ್ಷ ಅಂತಾ ಕರೆಯಬೇಕಾ.? ಇನ್ನೇನು ಕರೆಯಬೇಕೋ ಗೊತ್ತಾಗಲ್ಲ. ಕಾಂಗ್ರೆಸ್ ಹುಳ ತಿಂದು ಹೋಗಿರುವ ಮರ, ಗೆದ್ದಲು ತಿಂದಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಸಾಯಿಸುತ್ತಾರೆ. ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಮಹಾಪುರುಷರೆಲ್ಲಾ ಹೋಗಿದ್ದಾರೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸ್ವಾರ್ಥಿಗಳು. ಇವರ ಸ್ವಾರ್ಥಕ್ಕೆ ಏನು ಬೇಕಾದರೂ ಹೇಳಿಕೆ ಕೊಡುತ್ತಾರೆ, ಪಾದಯಾತ್ರೆ ಮಾಡುತ್ತಾರೆ. 

ಇವತ್ತು ನೀನು ವಿರೋಧಪಕ್ಷದ ನಾಯಕ ಅಲ್ಲವೆಂದು ಸಿದ್ದರಾಮಯ್ಯಗೆ ಹೇಳಿದ್ರೆ, ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಖಂಡಿತವಾಗಿಯೂ ಇರಲ್ಲ. ಜೆಡಿಎಸ್ ನಲ್ಲಿ ಅವಕಾಶ ಸಿಕ್ಕಿಲ್ಲವೆಂದು ಪಕ್ಷ ಬಿಟ್ಟರು. ವಿರೋಧ ಪಕ್ಷದ ನಾಯಕನ ಸ್ಥಾನ ಸಿಗುತ್ತೆ ಅಂತಾ ಕಾಂಗ್ರೆಸ್ಗೆ ಬಂದ್ರು. ಅಂದಿನಿಂದಲೂ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸ್ಥಾನವನ್ನು ಅಲಂಕರಿಸುತ್ತಾ ಬಂದಿದ್ದಾರೆ.‌ ಹಾಗಾದ್ರೆ ಕಾಂಗ್ರೆಸ್ನಲ್ಲಿ ಬೇರೆ ಯಾರು ನಾಯಕರು ಇಲ್ವಾ..  ಸೋನಿಯಾ ಗಾಂಧಿ ಕರೆದ್ರೂ ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಹೋಗಲಿಲ್ಲ. ರಾಜ್ಯದಲ್ಲಿ ಪುಕ್ಸಟೆ ಸ್ಥಾನ ಸಿಗುತ್ತೆ ಅಂತ ಇಲ್ಲೇ ಇದ್ದಾರೆ. ಇಂಥವರು ನಮ್ಮ ಬಗ್ಗೆ ಮಾತನಾಡುತ್ತಾರೆ, ಅವರ ಚಟ ತೀರಿಸೋಕೆ ಮಾತನಾಡಲಿ ಬಿಡಿ ಎಂದು ಕೆ.ಎಸ್ ಈಶ್ವರಪ್ಪ ಮೊನಚು ಮಾತುಗಳಿಂದ ತಿವಿದಿದ್ದಾರೆ.

Eshwarappa slams congress leader Siddaramaiah says he's a rotten mango.