ಶೋರೂಮಿನಲ್ಲಿ ರೈತನಿಗೆ ಅವಮಾನ ; ಮನೆಗೆ ಬಂತು  ಹೊಸ ಗೂಡ್ಸ್​ ಜೀಪ್​, ಶುಭಕೋರಿದ ಆನಂದ್ ಮಹಿಂದ್ರಾ ! 

30-01-22 12:22 pm       HK Desk news   ಕರ್ನಾಟಕ

ಕಾರು ಖರೀದಿಗೆ ಹೋಗಿದ್ದ ವೇಳೆ ಅವಮಾನಕ್ಕೆ ಒಳಗಾಗಿದ್ದ ತುಮಕೂರು ರೈತನ ಮನೆಗೆ ಹೊಸ ಗೂಡ್ಸ್​ ಜೀಪ್​ ಕಳುಹಿಸುವ ಮೂಲಕ ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಶುಭಕೋರಿದ್ದಾರೆ.

ತುಮಕೂರು, ಜ 30: ಕಾರು ಖರೀದಿಗೆ ಹೋಗಿದ್ದ ವೇಳೆ ಅವಮಾನಕ್ಕೆ ಒಳಗಾಗಿದ್ದ ತುಮಕೂರು ರೈತನ ಮನೆಗೆ ಹೊಸ ಗೂಡ್ಸ್​ ಜೀಪ್​ ಕಳುಹಿಸುವ ಮೂಲಕ ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರಾ ಅವರು ಶುಭಕೋರಿದ್ದಾರೆ.

ಟ್ವೀಟ್ ಮೂಲಕ ರೈತನಿಗೆ ಶುಭಕೋರಿರುವ ಆನಂದ್ ಮಹೀಂದ್ರಾ ನಮ್ಮ ಮಹೀಂದ್ರಾ ಕುಟುಂಬಕ್ಕೆ ಸುಸ್ವಾಗತ ಎಂದು ಹೇಳಿದ್ದಾರೆ. ಕಳೆದ ಜನವರಿ 21 ರಂದು ಗೂಡ್ಸ್ ಜೀಪ್ ಖರೀದಿಸಲು ಹೆಬ್ಬೂರು ಹೋಬಳಿಯ ರಾಮನಪಾಳ್ಯದ ಯುವರೈತ ಕೆಂಪೇಗೌಡ, ತುಮಕೂರಿನ ಮಹೀಂದ್ರಾ ಶೋರೂಂಗೆ ಬಂದಿದ್ದ. ಈ ವೇಳೆ ಆತನ ವೇಷಭೂಷಣ ನೋಡಿ ಶೋ ರೂಂ ಸಿಬ್ಬಂದಿ ಅವಮಾನ ಮಾಡಿದ್ದರು. ಆತನ ಸ್ನೇಹಿತರಿಗೂ ಅವಮಾನಿಸಿದ್ದರು.

ಶೋರೂಂ ಸಿಬ್ಬಂದಿ ಅವಮಾನ ಮಾಡಿದ್ದಕ್ಕೆ ಕೇವಲ ಅರ್ಧ ಗಂಟೆಯಲ್ಲಿ 10 ಲಕ್ಷ ರೂ. ಹಣ ತಂದು ಸಿಬ್ಬಂದಿ ಮುಂದಿಟ್ಟಿದ್ದ. ಇದನ್ನು ನೋಡಿದ ಶೋರೂಂ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದರು. ಈ ಘಟನೆ ರಾಜ್ಯ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿ, ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿತ್ತು.

ಇದರ ಬೆನ್ನಲ್ಲೆ ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರಾ ಟ್ವಿಟ್ ಮೂಲಕ ರೈತನಿಗೆ ಕ್ಷಮೆಯಾಚಿಸಿದ್ದರು. ಇದೀಗ ರೈತ ಕೆಂಪೇಗೌಡನ ಮನೆ ಬಾಗಿಲಿಗೆ ಮಹೀಂದ್ರಾ ಗೂಡ್ಸ್ ಜಿಪ್ ಡೆಲಿವರಿ ಮಾಡುವ ಮೂಲಕ ಒಳ್ಳೆಯದಾಗಲಿ ಎಂದು ಶುಭ ಕೋರಿದ್ದಾರೆ. ಅಲ್ಲದೆ, ನಮ್ಮ ಕುಟುಂಬಕ್ಕೆ ಸ್ವಾಗತ ಎಂದು ಹೇಳಿದ್ದಾರೆ.

ಜನವರಿ 21ರಂದು ನಮ್ಮ ಡೀಲರ್ ಬಳಿ ಕೆಂಪೇಗೌಡ ಮತ್ತು ಆತನ ಸ್ನೇಹಿತರು ಬಂದಾಗ ನಡೆದ ಘಟನೆಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ನಾವು ಭರವಸೆ ನೀಡಿದಂತೆ ಘಟನೆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಮಹೀಂದ್ರಾ ಆಯ್ಕೆ ಮಾಡಿದ್ದಕ್ಕಾಗಿ ನಾವು ಕೆಂಪೇಗೌಡರಿಗೆ ಧನ್ಯವಾದ ಅರ್ಪಿಸುತ್ತೇವೆ. ನಾವು ಅವರನ್ನು ಮಹೀಂದ್ರಾ ಕುಟುಂಬಕ್ಕೆ ಸ್ವಾಗತಿಸುತ್ತೇವೆ ಎಂದು ಟ್ವೀಟ್ ಮೂಲಕ ಮಹೀಂದ್ರಾ ಆಟೋಮೋಟಿವ್​ ತಿಳಿಸುವ ಮೂಲಕ ವಿವಾದಕ್ಕೆ ಸುಖಾಂತ್ಯ ಆಡಿದೆ.

Industrialist Anand Mahindra has heartily welcomed the farmer who had been reportedly humiliated at an SUV showroom in Tumukur, Karnataka, into the Mahindra & Mahindra family.