ನೆಲ್ಲಿಹುದಿಕೇರಿ ; ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇಂದೂ ಮುಂದುವರಿದ ಹೈಡ್ರಾಮಾ ! ಹಿಜಾಬ್ ಹಠಕ್ಕೆ ಬಿದ್ದು 20 ಮಂದಿ ಶಾಲೆಯಿಂದ ಮನೆಗೆ  

15-02-22 01:56 pm       HK Desk news   ಕರ್ನಾಟಕ

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇಂದು ಕೂಡ 20  ವಿದ್ಯಾರ್ಥಿನಿಯರು ಹಿಜಾಬ್ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದು ಶಾಲೆಯಿಂದ ಮನೆಗೆ ಮರಳಿದ್ದಾರೆ. 

 

ಮಡಿಕೇರಿ, ಫೆ.15 : ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇಂದು ಕೂಡ 20  ವಿದ್ಯಾರ್ಥಿನಿಯರು ಹಿಜಾಬ್ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದು ಶಾಲೆಯಿಂದ ಮನೆಗೆ ಮರಳಿದ್ದಾರೆ. 

ಹಿಜಾಬ್ ಧರಿಸುವುದು ನಮ್ಮ ಧರ್ಮ. ಹಿಜಬ್ ಇಲ್ಲದೆ ನಾವು ಶಾಲೆಗೆ ತೆರಳುವುದಿಲ್ಲ. ಹಿಜಾಬ್ ಧರಿಸಲು ಅವಕಾಶ ನೀಡದೇ ಇದ್ದರೆ ಮನೆಯಲ್ಲೇ ಕೂರುತ್ತೇವೆ ಎಂದು ವಿದ್ಯಾರ್ಥಿನಿಯರು ಹೇಳಿಕೊಂಡಿದ್ದು ಇವರ ಬೆಂಬಲಕ್ಕೆ ಪೋಷಕರು ನಿಂತಿದ್ದಾರೆ. 

ಹಿಜಾಬ್ ಇಲ್ಲದೆ ನಾವು ಮಕ್ಕಳನ್ನು ಕಳುಹಿಸುವುದಿಲ್ಲ ಎಂದು ಪೋಷಕರು ಹೇಳಿದ್ದಾರೆ.‌ ಶಾಲೆಯ ಮುಖ್ಯ ಶಿಕ್ಷಕ ಆಂಟನಿ ಆಲ್ವಾರಿಸ್ ಮಕ್ಕಳನ್ನು ಮನವೊಲಿಸಲು ಯತ್ನಿಸಿದ್ದಾರೆ. ‌ಆದರೆ ವಿದ್ಯಾರ್ಥಿನಿಯರು ತಮ್ಮ ಪಟ್ಟು ಸಡಿಲಿಸದೆ, ಹಿಜಾಬ್ ಧರಿಸಲು ಬಿಡದಿದ್ದರೆ ನಾವು ಶಾಲೆಗೆ ಬರಲ್ಲ ಎಂದು ಹಿಂದಕ್ಕೆ ತೆರಳಿದ್ದಾರೆ. 

ಶಾಲಾ ಆವರಣದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಶಾಲೆಗೆ ಬಂದು ಒಬ್ಬೊಬ್ಬರೇ ಮನೆಗೆ ಮರಳಿದ್ದಾರೆ. ಶಾಲೆಯ ಆವರಣದಲ್ಲಿ ನಿಂತು ಪ್ರಾಂಶುಪಾಲರು ಮಕ್ಕಳ‌ ಮನವೊಲಿಕೆ ಮಾಡಲು ಯತ್ನಿಸಿದರೂ, ಕೆಲವು ವಿದ್ಯಾರ್ಥಿನಿಯರು ಕೇಳಲಿಲ್ಲ.

ನೆಲ್ಲಿಹುದಿಕೇರಿಯಲ್ಲಿ ಸ್ವಲ್ಪ ಮುಸ್ಲಿಂ ಬಾಹುಳ್ಯ ಇದ್ದು ಒಂದಷ್ಟು ಮಂದಿ ಹಿಜಾಬ್ ತೆಗೆದು ತರಗತಿಗೆ ಬಂದರೆ, ಕೆಲವು ಖಟ್ಟರ್ ವಾದಿಗಳು ತಮ್ಮ ಮಕ್ಕಳನ್ನು ಹಿಜಾಬ್ ತೆಗೆಯದಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಎರಡನೇ ದಿನವೂ ಈ ಶಾಲೆಯಲ್ಲಿ ಹೈಡ್ರಾಮಾ ಮುಂದುವರಿದಿದೆ. ಸೋಮವಾರ 30 ಮುಸ್ಲಿಂ ವಿದ್ಯಾರ್ಥಿನಿಯರು ಇದೇ ಶಾಲೆಯಿಂದ ಮರಳಿ ಮನೆಗೆ ತೆರಳಿದ್ದರು.

Madikeri 20 Hijab students go back home from school because they were asked to remove.