ನಾಲ್ಕು ದಿನಗಳಿಂದ ಸಂಪರ್ಕಕ್ಕೆ ಸಿಗದ ವಿರಾಜಪೇಟೆ ಯುವಕ ; ಖಾರ್ಕೀವ್ ನಗರದಿಂದ ರೈಲು ನಿಲ್ದಾಣಕ್ಕೆ ಹೊರಟಿದ್ದ ಶಾರುಖ್ ಬಗ್ಗೆ ಮನೆಯವರಲ್ಲಿ ಆತಂಕ 

03-03-22 05:11 pm       HK Desk news   ಕರ್ನಾಟಕ

ಉಕ್ರೇನಿನ ಖಾರ್ಕೀವ್ ನಗರದಲ್ಲಿದ್ದ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದ ನಿವಾಸಿ, ಎಂಬಿಬಿಎಸ್ ವಿದ್ಯಾರ್ಥಿ ಶಾರುಖ್ ನಾಲ್ಕು ದಿನಗಳಿಂದ ಮನೆಯವರ ಸಂಪರ್ಕಕ್ಕೆ ಸಿಗದೇ ಆತಂಕ ಸೃಷ್ಟಿಯಾಗಿದೆ.

ಮಡಿಕೇರಿ, ಮಾ.3: ಉಕ್ರೇನಿನ ಖಾರ್ಕೀವ್ ನಗರದಲ್ಲಿದ್ದ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದ ನಿವಾಸಿ, ಎಂಬಿಬಿಎಸ್ ವಿದ್ಯಾರ್ಥಿ ಶಾರುಖ್ ನಾಲ್ಕು ದಿನಗಳಿಂದ ಮನೆಯವರ ಸಂಪರ್ಕಕ್ಕೆ ಸಿಗದೇ ಆತಂಕ ಸೃಷ್ಟಿಯಾಗಿದೆ.

ಆರ್ಜಿ ಗ್ರಾಮದ ಮೊಹಮ್ಮದ್ ಯೂಸುಫ್ ಎಂಬವರ ಮಗ ಶಾರುಖ್, ಖಾರ್ಕೀವ್ ನಗರದಲ್ಲಿ ಯುದ್ಧ ತೀವ್ರಗೊಂಡಿದ್ದ ಹಿನ್ನೆಲೆ ಬಂಕರ್ ನಲ್ಲಿ ಆಸರೆ ಪಡೆದಿದ್ದ. ಆರಂಭದಲ್ಲಿ ನಾಲ್ಕು ದಿನಗಳಿಂದ ಶಾರುಖ್ ಸೇರಿ 20 ಮಂದಿ ಭಾರತೀಯ ಯುವಕರು ಬಂಕರ್ ನಲ್ಲಿ ಆಶ್ರಯ ಪಡೆದಿದ್ದರು. ಆದರೆ ಬಂಕರ್ ನಲ್ಲಿ ಉಸಿರಾಟಕ್ಕೆ ತೊಂದರೆ ಆಗುತ್ತಿದ್ದ ಹಿನ್ನೆಲೆ ಅದರಿಂದ ಹೊರಬಂದಿದ್ದ ಯುವಕರು ಸ್ಥಳೀಯ ರೈಲ್ವೇ ನಿಲ್ದಾಣದ ಕಡೆಗೆ ನಡೆದು ಹೊರಟ್ಟಿದ್ದರು.‌

ಸೋಮವಾರ ಸಂಜೆ ರೈಲು ನಿಲ್ದಾಣಕ್ಕೆ ಹೋಗುತ್ತಿರುವುದಾಗಿ ಶಾರುಖ್ ಮನೆಯವರಿಗೆ ತಿಳಿಸಿದ್ದ.‌ ಆನಂತರ ಇದುವರೆಗೆ ಸಂಪರ್ಕಕ್ಕೆ ಸಿಗದ ಕಾರಣ ಶಾರುಕ್ ಬಗ್ಗೆ ಮನೆಯವರು ಆತಂಕಗೊಂಡಿದ್ದಾರೆ. ರೈಲು ನಿಲ್ದಾಣದಲ್ಲಿ ಉಕ್ರೇನ್ ಸೇನೆ ಅಲ್ಲಿನ ಸ್ಥಳೀಯರನ್ನು ಬಿಟ್ಟು ಉಳಿದವರನ್ನು ಹತ್ತಿರ ಬಿಟ್ಟುಕೊಳ್ಳುತ್ತಿರಲಿಲ್ಲ. ಕೋವಿ ತೋರಿಸಿ ಬೆದರಿಸುತ್ತಿದ್ದರು ಎಂದು ಇತರೇ ಕನ್ನಡಿಗ ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ. ‌

ಈ ನಡುವೆ, ಶಾರುಖ್ ಸುರಕ್ಷಿತ ಜಾಗದಲ್ಲಿ ಇದ್ದಾರೆಯೇ, ಅಲ್ಲಿಂದ ಹಿಂತಿರುಗಿ ಬರುತ್ತಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಇಲ್ಲದೆ ಮನೆಯವರು ಭಯದಲ್ಲಿದ್ದಾರೆ.

Madikeri Youth standard in Ukraine phone not reachable, parents anxious.