ಕೋವಿಡ್‌ಗೆ ಆಯುರ್ವೇದ ಔಷಧ - ಡಾ. ಗಿರಿಧರ ಕಜೆಗೆ ನೋಟೀಸ್

02-08-20 02:15 pm       Bangalore Correspondent   ಕರ್ನಾಟಕ

ಕೊರೊನಾ ವೈರಸ್ ಸೋಂಕಿಗೆ ಆಯುರ್ವೇದ ಔಷಧ ಕಂಡು ಹಿಡಿದಿದ್ದೇನೆ ಎಂದು ಹೇಳಿದ್ದ ಡಾ. ಗಿರಿಧರ ಕಜೆಗೆ ಬಿಎಂಸಿಆರ್‌ಐ ನೋಟಿಸ್ ಜಾರಿಗೊಳಿಸಿದೆ. ಸರ್ಕಾರ ಅನುಮತಿ ಕೊಟ್ಟರೆ ಔಷಧಿಯನ್ನು ಉಚಿತವಾಗಿ ಹಂಚುವುದಾಗಿ ಗಿರಿಧರ ಕಜೆ ಹೇಳಿದ್ದರು.

ಬೆಂಗಳೂರು, ಆಗಸ್ಟ್ 02 : ಕೊರೊನಾ ವೈರಸ್ ಸೋಂಕಿಗೆ ಆಯುರ್ವೇದ ಔಷಧ ಕಂಡು ಹಿಡಿದಿದ್ದೇನೆ ಎಂದು ಹೇಳಿದ್ದ ಡಾ. ಗಿರಿಧರ ಕಜೆಗೆ ಬಿಎಂಸಿಆರ್‌ಐ ನೋಟಿಸ್ ಜಾರಿಗೊಳಿಸಿದೆ. ಸರ್ಕಾರ ಅನುಮತಿ ಕೊಟ್ಟರೆ ಔಷಧಿಯನ್ನು ಉಚಿತವಾಗಿ ಹಂಚುವುದಾಗಿ ಗಿರಿಧರ ಕಜೆ ಹೇಳಿದ್ದರು.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ನೋಟಿಸ್ ನೀಡಿದೆ. ಸುಳ್ಳು ಮಾಹಿತಿ ಹರಡುವುದು ವೈದ್ಯಕೀಯ ನೀತಿ ಸಂಹಿತೆಗೆ ವಿರುದ್ಧವಾದದ್ದು ಎಂದು ಎಚ್ಚೆರಿಕೆ ನೀಡಲಾಗಿದೆ.

ಔಷಧಿ ಬಳಕೆ ಮತ್ತು ಅದರ ಕುರಿತು ಪ್ರಚಾರ ವೈದ್ಯಕೀಯ ನೀತಿ ಸಂಹಿತೆಗೆ ವಿರುದ್ಧವಾಗಿದೆ. ಇದು ಅತ್ಯಂತ ಸೂಕ್ಷ್ಮ ಸಂಗತಿಯಾಗಿದ್ದು, ನೀವು ಜನರಿಗೆ ವಾಸ್ತವಾಂಶಗಳನ್ನು ಹೇಳಬೇಕು. ಇಲ್ಲವಾದಲ್ಲಿ ನಿಮ್ಮ ಔಷಧಿಗಳ ಕ್ಲಿನಿಕಲ್ ಪ್ರಯೋಗ ರದ್ದು ಮಾಡಲಾಗುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಜುಲೈ 17ರಂದು ಬಿಎಂಸಿಆರ್‌ಐ ಎಥಿಕ್ಸ್ ಕಮಿಟಿ ಈ ನೋಟಿಸ್ ನೀಡಿದೆ. ಔಷಧದ ಕುರಿತು ಅನಧಿಕೃತ ಮಾಹಿತಿಯನ್ನು ಪ್ರಕಟಿಸಿದ್ದಕ್ಕಾಗಿ ಈ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಬಿಎಂಸಿಆರ್‌ಐಗೆ ಅರ್ಜಿ ಸಲ್ಲಿಸಿದ್ದ ಡಾ. ಗಿರಿಧರ ಕಜೆ, ಕೋವಿಡ್ 19 ರೋಗಿಗಳಿಗೆ ನಿಗದಿತ ಆರೈಕೆಯೊಂದಿಗೆ ಹೆಚ್ಚುವರಿಯಾಗಿ ಭೌಮ್ಯ ಮತ್ತು ಸಾಥ್ಮ್ಯಾ ಎಂಬ ಎರಡು ಮಾತ್ರೆಗಳ ಪ್ರಭಾವ ಮತ್ತು ಸುರಕ್ಷತೆಯನ್ನು ಮೌಲ್ಯಮಾಪನ ಮಾಡಲು ಕ್ಲಿನಿಕಲ್ ಪ್ರಯೋಗ ನಡೆಸಲು ಅನುಮತಿಯನ್ನು ಹೇಳಿದ್ದರು.

ಔಷಧಗಳ ಪ್ರಯೋಗ ಇನ್ನು ಆರಂಭಿಕ ಹಂತದಲ್ಲಿಯೇ ಇದೆ. ಬಿಎಂಸಿಆರ್‌ಐ ಎಥಿಕ್ಸ್ ಕಮಿಟಿಗೆ ಆ ಕುರಿತ ಯಾವುದೇ ಫಲಿತಾಂಶ ಇನ್ನೂ ಸಲ್ಲಿಕೆಯಾಗಿಲ್ಲ. ಇಂತಹ ವಾಸ್ತವ ಅಂಶಗಳನ್ನು ಮುಚ್ಚಿಟ್ಟು ನೀವು ಪ್ರಯೋಗ ಯಶಸ್ವಿಯಾಗಿದೆ ಎಂದು ಸಾರ್ವಜನಿಕವಾಗಿ ಪ್ರಚಾರ ಮಾಡಿದ್ದೀರಿ. ಇಂತಹ ಸೂಕ್ಷ್ಮ ಮಾಹಿತಿಯನ್ನು ಬಹಿರಂಗ ಪಡಿಸುವ ಮುನ್ನ ಸಕ್ಷಮ ಪ್ರಾಧಿಕಾರಗಳ ಅನುಮತಿ ಅಗತ್ಯ ಎಂಬುದು ನಿಮಗೆ ತಿಳಿಯಲಿಲ್ಲವೇ? ಎಂದು ನೋಟಿಸ್‌ನಲ್ಲಿ ಪ್ರಶ್ನಿಸಲಾಗಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಇಂತಹ ಮಾಹಿತಿ ಅಂತ್ಯಂತ ಸೂಕ್ಷ್ಮವಾದದ್ದು. ನಿಮ್ಮ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಕುರಿತ ವಾಸ್ತವಾಂಶಗಳನ್ನು ಮಾಧ್ಯಮಗಳ ಮೂಲಕ ಜನರಿಗೆ ಸ್ಪಷ್ಟಪಡಿಸಿ ಇಲ್ಲವಾದಲ್ಲಿ ಜನರ ದಾರಿ ತಪ್ಪಿಸುವ ಇಂತಹ ನಿಮ್ಮ ನಡವಳಿಕೆಗಾಗಿ ನಾವು ಔಷಧ ಪ್ರಯೋಗ ರದ್ದು ಮಾಡಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಒಂದು ಕಟೆ ನೋಟಿಸ್ ನೀಡಿದ್ದರೆ ಮತ್ತೊಂದು ಕಡೆ ಗಿರಿಧರ ಕಜೆ ಮಾರ್ಗದರ್ಶನದಲ್ಲಿ ಅವರ ಔಷಧಿಯ ಕಿಟ್ ತಯಾರಿಸಿ ಶಿವಮೊಗ್ಗದಲ್ಲಿ 5 ಲಕ್ಷ ಜನರಿಗೆ ಉಚಿತವಾಗಿ ಹಂಚಲಾಗುತ್ತಿದೆ. ಸರ್ಕಾರದ ಆಯುಷ್ ಇಲಾಖೆಯಿಂದಲೇ ಪ್ಯಾಕ್ ಮಾಡಿ ವಿತರಣೆ ಮಾಡುತ್ತಿರುವ ಈ ಕಾರ್ಯಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಅವರೇ ಚಾಲನೆ ನೀಡಿದ್ದಾರೆ.