ಉತ್ತರ ಪ್ರದೇಶ ಪ್ಲಾನ್ ಇಟ್ಟುಕೊಂಡೇ ಅಮಿತ್ ಷಾ ರಾಜ್ಯಕ್ಕೆ ; ಬಿಜೆಪಿ ನಾಯಕರಲ್ಲಿ ತೀವ್ರ ನಡುಕ, ಸರ್ಜರಿಯಲ್ಲಿ ಸ್ಥಾನ ಕಳಕೊಳ್ಳೋರು ಯಾರೆಲ್ಲ ? ಸಾರಥಿಯ ಸೀಟಿ ಊದಲಿದ್ದಾರೆಯೇ ರವಿ ?!  

22-03-22 08:58 pm       Bengaluru Correspondent   ಕರ್ನಾಟಕ

ಬಿಜೆಪಿ ಮಟ್ಟಿಗೆ ಚಾಣಕ್ಯ ಎಂದೇ ಗುರುತಿಸಲ್ಪಟ್ಟಿರುವ ಗೃಹ ಸಚಿವ ಅಮಿತ್ ಷಾ ಎಪ್ರಿಲ್ 1ರಂದು ರಾಜ್ಯಕ್ಕೆ ಆಗಮಿಸುವುದು ಖಚಿತವಾಗಿದ್ದು, ರಾಜ್ಯ ಬಿಜೆಪಿ ನಾಯಕರಲ್ಲಿ ತಳಮಳ, ನಡುಕ ಶುರುವಾಗಿದೆ.

ಬೆಂಗಳೂರು, ಮಾ.22: ಬಿಜೆಪಿ ಮಟ್ಟಿಗೆ ಚಾಣಕ್ಯ ಎಂದೇ ಗುರುತಿಸಲ್ಪಟ್ಟಿರುವ ಗೃಹ ಸಚಿವ ಅಮಿತ್ ಷಾ ಎಪ್ರಿಲ್ 1ರಂದು ರಾಜ್ಯಕ್ಕೆ ಆಗಮಿಸುವುದು ಖಚಿತವಾಗಿದ್ದು, ರಾಜ್ಯ ಬಿಜೆಪಿ ನಾಯಕರಲ್ಲಿ ತಳಮಳ, ನಡುಕ ಶುರುವಾಗಿದೆ. ಕಳೆದ ಜನವರಿ ಆರಂಭದಲ್ಲಿ ಅಮಿತ್ ಷಾ ರಾಜ್ಯಕ್ಕೆ ಬರಲಿದ್ದಾರೆ, ರಾಜ್ಯದ ಸರಕಾರ ಮತ್ತು ಬಿಜೆಪಿಗೆ ಸರ್ಜರಿ ಮಾಡಲಿದ್ದಾರೆ ಎಂದೇ ಹೇಳಲಾಗಿತ್ತು. ಆನಂತರ ಪಂಚ ರಾಜ್ಯಗಳ ಚುನಾವಣೆ ಘೋಷಣೆಯಾಗಿದ್ದರಿಂದ ಅಮಿತಾ ಷಾ ಬರುವಿಕೆ ಮುಂದಕ್ಕೆ ಹೋಗಿತ್ತು.

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಬಿಜೆಪಿಗೆ ಸರ್ಜರಿ ಖಚಿತ ಅನ್ನುವ ಮಾತು ಕೇಳಿಬಂದಿತ್ತು. ಇದೀಗ ಆ ದಿನ ಹತ್ತಿರ ಬಂದಿದ್ದು, ರಾಜ್ಯ ಬಿಜೆಪಿ ನಾಯಕರಲ್ಲಿ ಒಳಗೊಳಗೇ ನಡುಕ ಶುರುವಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಬದಲಾವಣೆ ಮಾಡುತ್ತಾರಾ? ಯಾರನ್ನು ಮೇಲಕ್ಕೇರಿಸುತ್ತಾರೆ, ಯಾರನ್ನು ಕೆಳಕ್ಕೆ ಇಳಿಸುತ್ತಾರೆ ಅನ್ನುವ ಕುತೂಹಲ ರಾಜ್ಯದ ನಾಯಕರಲ್ಲಿ ಎದ್ದಿದೆ. ಕಳೆದ ಜನವರಿ ತಿಂಗಳಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ಪಡೆಯುವುದಕ್ಕಾಗಿ ಸಿಎಂ ಬೊಮ್ಮಾಯಿ ದೆಹಲಿಗೆ ತೆರಳಿದ್ದಾಗಲೂ, ಚುನಾವಣೆ ಫಲಿತಾಂಶದ ಗಡುವು ನೀಡಲಾಗಿತ್ತು.

ಚುನಾವಣೆಯಲ್ಲಿ ಯಾರೂ ನಿರೀಕ್ಷಿಸದ ರೀತಿ ಬಿಜೆಪಿ ಜಯಭೇರಿ ಬಾರಿಸಿದ್ದು, ಕೇಂದ್ರ ನಾಯಕರ ಉತ್ಸಾಹ ಇಮ್ಮಡಿಗೊಳಿಸಿದೆ. ಹೀಗಾಗಿ ಮುಂದಿನ ವರ್ಷ ಚುನಾವಣೆ ಎದುರಿಸುವ ಕರ್ನಾಟಕದಲ್ಲಿ ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರಲು ಈಗಲೇ ಕಸರತ್ತು ಆರಂಭಿಸಿದ್ದಾರೆ. ಕರ್ನಾಟಕದ ರಾಜಕೀಯ ನಿಂತಿರುವುದೇ ಜಾತಿ ರಾಜಕಾರಣದ ಮೇಲೆ ಅನ್ನುವ ಸೂಕ್ಷ್ಮವನ್ನು ಅರಿತಿರುವ ಕೇಂದ್ರ ನಾಯಕರು, ರಾಜ್ಯದಲ್ಲಿ ಲಿಂಗಾಯತ ಮತ್ತು ಒಕ್ಕಲಿಗರ ತಾಳಮೇಳಕ್ಕೆ ಕೈಹಚ್ಚುವ ಸಾಧ್ಯತೆಯಿದೆ. ಹೀಗಾದಲ್ಲಿ ರಾಜ್ಯ ಬಿಜೆಪಿ ಸಾರಥಿಯ ಸ್ಥಾನಕ್ಕೆ ಪ್ರಬಲ ಒಕ್ಕಲಿಗ ನಾಯಕನನ್ನು ತಂದು ಕೂರಿಸುವುದು ಪಕ್ಕಾ ಎನ್ನುವ ಮಾತು ಬಿಜೆಪಿ ವಲಯದಲ್ಲಿದೆ.

C T Ravi's 'Sarvajna' remark on SC judges triggers row | Deccan Herald

ಸಾರಥಿಯ ಸೀಟಿ ಊದಲಿದ್ದಾರೆಯೇ ರವಿ ?

ಕಳೆದ ಡಿಸೆಂಬರ್ ತಿಂಗಳಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗುತ್ತೆ ಅನ್ನುವ ಸುದ್ದಿ ಹಬ್ಬಿದಾಗ, ಆ ಸ್ಥಾನಕ್ಕೆ ದಲಿತ ವರ್ಗದ ಅರವಿಂದ ಲಿಂಬಾವಳಿ ಹೆಸರು ಕೇಳಿಬಂದಿತ್ತು. ಸಚಿವ ಸ್ಥಾನದಿಂದ ಕೆಳಕ್ಕಿಳಿದಿರುವ ಲಿಂಬಾವಳಿಯನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸಲಾಗುತ್ತೆ ಅನ್ನುವ ಮಾತುಗಳಿದ್ದವು. ಆದರೆ, ನಂತರದ ಬೆಳವಣಿಗೆಯಲ್ಲಿ ಬಿಟ್ ಕಾಯಿನ್ ಆರೋಪದ ಕಾರಣಕ್ಕೋ ಏನೋ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ದಿಢೀರ್ ಮೌನ ತಾಳಿದ್ದರು. ರಾಜ್ಯಾಧ್ಯಕ್ಷರನ್ನು ಮೌನವಾಗಿಸಿ, ಅಧ್ಯಕ್ಷರು ಮಾತನಾಡಬೇಕಾದ ಜಾಗದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಕೌಂಟರ್ ಹೇಳಿಕೆಗಳನ್ನು ನೀಡಲಾರಂಭಿಸಿದ್ದರು. ಒಂದು ರೀತಿಯಲ್ಲಿ ಆರೋಪ ಹೊತ್ತವರನ್ನು ಕೇಂದ್ರ ನಾಯಕರ ಸೂಚನೆಯಂತೆ ಸೈಲಂಟಾಗಿಸಿ, ಆ ಸ್ಥಾನದ ಹೆಸರಲ್ಲಿ ಸಿ.ಟಿ.ರವಿ ಹೇಳಿಕೆಗಳು ಹೈಲೈಟ್ ಆಗಿದ್ದವು.

ಮೇಕೆದಾಟು ಪಾದಯಾತ್ರೆ, ಹಿಜಾಬ್ ಸಂಘರ್ಷ ಹೀಗೆ ಆಯಾ ಸನ್ನಿವೇಶಗಳಿಗೆ ತಕ್ಕಂತೆ ಪ್ರತಿಪಕ್ಷದ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ವಿರುದ್ಧ ನೇರವಾಗಿ ಗುಡುಗಿದ್ದು ಸಿಟಿ ರವಿ ಮಾತ್ರ. ಕೇವಲ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಮಾತ್ರ ರವಿ ಮಾತುಗಳು ಇರಲಿಲ್ಲ. ರಾಜ್ಯಾಧ್ಯಕ್ಷರ ಬಾಯಲ್ಲಿ ಬರಬೇಕಿದ್ದ ಅಣಿಮುತ್ತುಗಳು ರವಿ ಬಾಯಲ್ಲಿ ಬರುತ್ತಿದ್ದವು. ಸಹಜವಾಗಿಯೇ ಸಿಟಿ ರವಿ ಒಕ್ಕಲಿಗ ನಾಯಕನ ಸ್ಥಾನ ತುಂಬುವ ಲಕ್ಷಣವನ್ನು ಹೊರಹಾಕಿದ್ದರು. ಹೀಗಾಗಿ ಅತ್ತ ಬಿ.ಎಲ್.ಸಂತೋಷ್ ಬಣದಲ್ಲಿಯೇ ಗುರುತಿಸಿಕೊಂಡಿರುವ ಸಿಟಿ ರವಿ ರಾಜ್ಯಾಧ್ಯಕ್ಷ ಸ್ಥಾನ ತುಂಬುವ ಸಾಧ್ಯತೆ ಹೆಚ್ಚಿದೆ ಅನ್ನುವುದು ಖಚಿತವಾಗುತ್ತಿದೆ.

Karnataka: CM Yediyurappa charts out bigger role for son Vijayendra in BJP  - Oneindia News

ಯಡಿಯೂರಪ್ಪ ಪುತ್ರನಿಗೆ ಪ್ರಚಾರ ಸಮಿತಿ !  

ಇದೇ ವೇಳೆ, ಯಡಿಯೂರಪ್ಪ ಅವರನ್ನು ಸರಿದೂಗಿಸಿಕೊಂಡು ಹೋಗುವ ಜವಾಬ್ದಾರಿ ಇರುವುದರಿಂದ ಅವರ ಪುತ್ರ ವಿಜಯೇಂದ್ರ ಪಾಲಿಗೆ ಸೂಕ್ತ ಸ್ಥಾನ ನೀಡಲೇಬೇಕಾದ ಅನಿವಾರ್ಯತೆಯಲ್ಲಿ ರಾಜ್ಯ ಬಿಜೆಪಿ ಇದೆ. ವಿಜಯೇಂದ್ರ ವಿರೋಧಿ ಬಣವಾಗಿದ್ದರೂ, ಕೇಂದ್ರ ಮಟ್ಟದಲ್ಲಿ ಉತ್ತಮ ಸಂಪರ್ಕ ಇಟ್ಟುಕೊಂಡಿದ್ದಾರೆ. ಜೊತೆಗೆ, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಯಡಿಯೂರಪ್ಪ ನಂತರದ ಲಿಂಗಾಯತ ನಾಯಕ ಎಂದು ಬಿಂಬಿಸಿದರೂ, ಅಷ್ಟು ಮಾತ್ರಕ್ಕೆ ಬಿಜೆಪಿಗೆ ಗೆಲುವು ಸಿಗಲಾರದು ಅನ್ನೋದು ಕಳೆದ ಬಾರಿಯ ಉಪ ಚುನಾವಣೆಯಿಂದ ವೇದ್ಯವಾಗಿತ್ತು. ಹೀಗಾಗಿ ಯಡಿಯೂರಪ್ಪ ಪುತ್ರನಿಗೆ ಪಕ್ಷದಲ್ಲಿ ಉನ್ನತ ಸ್ಥಾನ ನೀಡುವ ಮೂಲಕ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಹೊಣೆ ನೀಡುವ ಸಾಧ್ಯತೆಯಿದೆ. ಪ್ರಚಾರ ಸಮಿತಿ ರಚಿಸಿ ಪ್ರಮುಖ ಜವಾಬ್ದಾರಿ ನೀಡುವ ಸಾಧ್ಯತೆ ಬಗ್ಗೆ ಹೇಳಲಾಗುತ್ತಿದೆ.

Miffed with third reshuffle in a week, JC Madhuswamy, Anand Singh to quit  BSY Cabinet? | Deccan Herald

ಹಿರಿಯ ಸಚಿವರಿಗೆ ಕೊಕ್, ಯುವಕರಿಗೆ ಆದ್ಯತೆ

ಇದಲ್ಲದೆ, ರಾಜ್ಯ ಸಚಿವ ಸಂಪುಟ ಪುನಾರಚನೆ ಆಗದೇ ಇದ್ದರೂ, ಹಿರಿಯ ಸಚಿವರನ್ನು ಕೆಳಗಿಳಿಸಿ ಪಕ್ಷದ ಜವಾಬ್ದಾರಿ ನೀಡುವುದು ಪಕ್ಕಾ ಆಗಿದೆ. ಹಾಗಾದಲ್ಲಿ ಪಕ್ಷದ ಪ್ರಚಾರ ಸಮಿತಿ ಹೆಸರಲ್ಲಿ ಹಿರಿಯರಿಗೆ ಹೊಣೆ ನೀಡಲಿದ್ದಾರೆ. ವಿವಿಧ ಪ್ರಕೋಷ್ಟಗಳ ಹೆಸರಲ್ಲಿ ಪಕ್ಷವನ್ನು ಸಂಘಟಿಸುವುದು, ಜಾತಿ ಲಾಬಿಯನ್ನು ಮೆಟ್ಟಿ ನಿಂತು ಉತ್ತರ ಪ್ರದೇಶದ ರೀತಿ ಚುನಾವಣೆ ಜಯಿಸಲು ಪ್ಲಾನ್ ಹಾಕಲಿದ್ದಾರೆ. ಅಮಿತ್ ಷಾ ರಾಜ್ಯಕ್ಕೆ ಬರಲಿದ್ದಾರೆ ಅಂದರೆ, ಈ ಬಗ್ಗೆ ಮೊದಲೇ ಪ್ಲಾನ್ ಆಗಿರುತ್ತೆ ಎಂದೇ ಅರ್ಥ. ಇದೇ ಕಾರಣಕ್ಕೆ ಸಚಿವ ಸ್ಥಾನದಲ್ಲಿದ್ದವರಿಗೂ, ಪಕ್ಷದ ಮುಂಚೂಣಿ ಸ್ಥಾನದಲ್ಲಿದ್ದವರಿಗೂ ಒಳಗಿಂದೊಳಗೇ ನಡುಕ ಶುರುವಾಗಿದೆ.

Karnataka local body election 2020: 2709 gram panchayats go to polls in  second phase

ಉತ್ತರ ಪ್ರದೇಶ ಮಾದರಿಯಲ್ಲೇ ಚುನಾವಣೆ ಪ್ಲಾನ್

ಈ ಬಾರಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಬಹುಮತದಲ್ಲಿ ವಿಜಯ ಗಳಿಸಲಿದೆ ಎನ್ನುವುದನ್ನು ಯಾರೂ ಊಹಿಸಿಯೇ ಇರಲಿಲ್ಲ. ಯಾಕಂದ್ರೆ, ದೇಶದ ಅತಿದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ 37 ವರ್ಷಗಳಲ್ಲಿ ಎರಡನೇ ಬಾರಿಗೆ ಚುನಾವಣೆ ಗೆದ್ದಿರುವ ಇತಿಹಾಸವೇ ಇಲ್ಲ. ಹಿಂದೆಲ್ಲಾ ಗೆಲುವು ಸುಲಭ ಇತ್ತು. ಆದರೆ, ಈಗಿನ ಪ್ರಚಾರ- ಅಪಪ್ರಚಾರದ ಭರಾಟೆಯಲ್ಲಿ ಗೆಲ್ಲುವುದು ಕಷ್ಟವೇ ಆಗಿತ್ತು. ಅಲ್ಲಿಯೂ ಜಾತಿ ರಾಜಕಾರಣವೇ ಪ್ರಮುಖ ಅಜೆಂಡಾ. ಅದನ್ನು ತೂಗಿಸಿಕೊಂಡು ಸಂಘಟನಾ ಶಕ್ತಿಯನ್ನು ದಾಳವಾಗಿಸಿ ಅಸಾಧ್ಯವನ್ನು ಸಾಧ್ಯವಾಗಿಸಿದ್ದು ಅಮಿತಾ ಷಾ ಚಾಣಕ್ಯ ನೀತಿ. ಅದೇ ನೀತಿಯನ್ನು ವರ್ಷದ ಮೊದಲೇ ರಾಜ್ಯ ಬಿಜೆಪಿಯಲ್ಲಿ ಜಾರಿಗೆ ತರುವ ಪ್ಲಾನ್ ಇದೆ, ಅನ್ನುತ್ತವೆ ಮೂಲಗಳು.

Amit Shah in Karnataka on April 1st, major surgery to take place inside the party.