ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಕದ್ದು ಮುಚ್ಚಿ ಬಾಲ್ಯ ವಿವಾಹ ; ತಾಳಿ, ಕಾಲುಂಗುರ ಬಿಚ್ಚಿಟ್ಟು ಪರೀಕ್ಷೆ ಬರೆದಿದ್ದ ಸಂತ್ರಸ್ತೆ ! ಸ್ನೇಹಿತೆಗೆ ತಿಳಿಸಿದ್ದೇ ಪೋಷಕರಿಗೆ ಎರವಾಯ್ತು ! 

01-04-22 12:42 pm       HK Desk news   ಕರ್ನಾಟಕ

ಬಾಲ್ಯ ವಿವಾಹ ನಿಷೇಧ ಇದ್ದರೂ ಇಲ್ಲೊಂದು ಕುಟುಂಬ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಮಗಳಿಗೆ ಗುಟ್ಟಾಗಿ ಬಾಲ್ಯ ವಿವಾಹ ಮಾಡಿದ್ದು, ಪರೀಕ್ಷೆ ಹಿನ್ನೆಲೆಯಲ್ಲಿ ತಾಳಿ ಬಿಚ್ಚಿಸಿ ಪರೀಕ್ಷೆಗೆ ಕಳುಹಿಸಿ ಸಿಕ್ಕಿಬಿದ್ದ ಘಟನೆ ಬೆಳಕಿಗೆ ಬಂದಿದೆ. 

ಮಂಡ್ಯ, ಎ.1 : ಬಾಲ್ಯ ವಿವಾಹ ನಿಷೇಧ ಇದ್ದರೂ ಇಲ್ಲೊಂದು ಕುಟುಂಬ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಮಗಳಿಗೆ ಗುಟ್ಟಾಗಿ ಬಾಲ್ಯ ವಿವಾಹ ಮಾಡಿದ್ದು, ಪರೀಕ್ಷೆ ಹಿನ್ನೆಲೆಯಲ್ಲಿ ತಾಳಿ ಬಿಚ್ಚಿಸಿ ಪರೀಕ್ಷೆಗೆ ಕಳುಹಿಸಿ ಸಿಕ್ಕಿಬಿದ್ದ ಘಟನೆ ಬೆಳಕಿಗೆ ಬಂದಿದೆ. 

ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಘಟನೆ ನಡೆದಿದ್ದು ಎರಡು ದಿನಗಳ ಬಳಿಕ ವಿಚಾರ ಬಯಲಾಗಿದೆ. ಮಾರ್ಚ್ 27 ರಂದು ಮನೆಯಲ್ಲೇ ಗುಟ್ಟಾಗಿ SSLC ಬಾಲಕಿಯನ್ನು ಯುವಕನ ಜೊತೆಗೆ ಮದುವೆ ಮಾಡಲಾಗಿತ್ತು. ಕೆ.ಆರ್.ಪೇಟೆ ತಾಲೂಕಿನ ಸಂಬಂಧಿ ಯುವಕನೊಂದಿಗೆ ಮದುವೆ ಮಾಡಿದ್ದರು. 

ಮರುದಿನ 28ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಇದ್ದುದರಿಂದ ಪೋಷಕರೇ ಮಗಳ ತಾಳಿ ಮತ್ತು ಕಾಲುಂಗುರ ಬಿಚ್ಚಿಸಿ ಪರೀಕ್ಷೆ ಬರೆಯಲು ಕಳುಹಿಸಿದ್ದರು.‌ ಪರೀಕ್ಷೆ ಬರೆಯಲು ಹೋಗಿದ್ದಾಗ ಬಾಲಕಿ ತನ್ನ ಸ್ನೇಹಿತೆಗೆ ಮದುವೆ ಬಗ್ಗೆ ಹೇಳಿಕೊಂಡಿದ್ದಳು.‌ ಇದರಿಂದ ಮಾಹಿತಿ ಶಾಲೆಯ ಸಿಬಂದಿಗೆ ತಿಳಿದು ಮಕ್ಕಳ ರಕ್ಷಣಾ ಇಲಾಖೆಗೆ ಹೋಗಿತ್ತು. ಮೊದಲೇ ಗುಮಾನಿ ಹೊಂದಿದ್ದ ಅಧಿಕಾರಿಗಳು ಮನೆಗೆ ಬಂದು ಬಾಲಕಿಯ ರಕ್ಷಣೆ ಮಾಡಿದ್ದಾರೆ.‌

ಸದ್ಯ ಸಂತ್ರಸ್ತ ಬಾಲಕಿಯನ್ನು ಮಂಡ್ಯದ ಬಾಲ ಮಂದಿರದಲ್ಲಿ ಇರಿಸಲಾಗಿದ್ದು ಬಾಲ್ಯ ವಿವಾಹ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಅಧಿಕಾರಿಗಳು ಪೊಲೀಸ್ ದೂರು ನೀಡಿದ್ದಾರೆ. ಮದುವೆ ನಿಶ್ಚಯವಾಗಿದ್ದಾಗಲೇ ಮಕ್ಕಳ ರಕ್ಷಣಾ ಇಲಾಖೆಯ ಅಧಿಕಾರಿಗಳಿಗೆ ದೂರು ಹೋಗಿದ್ದರಿಂದ ಕುಟುಂಬಕ್ಕೆ ಎಚ್ಚರಿಕೆ ನೀಡಿದ್ದರು. ಬಾಲ್ಯ ವಿವಾಹದ ಬಗ್ಗೆ ಕಂಪ್ಲೇಂಟ್ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಮಾರ್ಚ್ 18 ಮತ್ತು 25 ರಂದು ಬಾಲಕಿಯ ಮನೆಗೆ ಭೇಟಿ ನೀಡಿ ವಾರ್ನ್ ಮಾಡಿತ್ತು. ಆದರೆ ಅಧಿಕಾರಿಗಳ ಎಚ್ಚರಿಕೆ ಹಾಗೂ ಬುದ್ಧಿ ಮಾತಿಗೂ ಕೇರ್ ಮಾಡದೇ 27ರಂದು ಪೋಷಕರೇ ಕದ್ದು ಮುಚ್ಚಿ ವಿವಾಹ ಮಾಡಿಸಿದ್ದಾರೆ.

Mandya Child marriage exposed, sslc student caught while writing exams