150 ಸೀಟು ಅಮಿತ್ ಷಾ ಟಾಸ್ಕ್, ವಾರದೊಳಗೆ ರಿಪೋರ್ಟ್ ರೆಡಿ ಮಾಡಲು ರಾಜ್ಯ ನಾಯಕರಿಗೆ ಸೂಚನೆ ; ಶಾಸಕರಿಲ್ಲದ ಜಾಗಕ್ಕೆ ಬೇರೆ ಪಕ್ಷದಿಂದ ಆಪರೇಶನ್ !

02-04-22 01:13 pm       Bengaluru Correspondent   ಕರ್ನಾಟಕ

ನೀವು ಏನೇ ತಿಪ್ಪರಲಾಗ ಹಾಕಿದ್ರೂ ಪರ್ವಾಗಿಲ್ಲ. ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲು ಏನೇನು ಕೆಲಸ ಆಗಬೇಕೋ ಅದನ್ನು ಮಾಡಿ. ಈಗ 120 ಮಂದಿ ಇದ್ದೀರಿ.

ಬೆಂಗಳೂರು, ಎ.2: ನೀವು ಏನೇ ತಿಪ್ಪರಲಾಗ ಹಾಕಿದ್ರೂ ಪರ್ವಾಗಿಲ್ಲ. ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲು ಏನೇನು ಕೆಲಸ ಆಗಬೇಕೋ ಅದನ್ನು ಮಾಡಿ. ಈಗ 120 ಮಂದಿ ಇದ್ದೀರಿ. ಅದನ್ನು ಬಿಟ್ಟು 30 ಹೆಚ್ಚುವರಿ ಸ್ಥಾನಗಳನ್ನು ಗೆಲ್ಲಲು ಪ್ಲಾನ್ ಮಾಡಬೇಕು. ನಮ್ಮ ಶಾಸಕರು ಇಲ್ಲದ ಕಡೆ ಬೇರೆ ಪಕ್ಷದವರನ್ನು ಕರೆತನ್ನಿ. ಅದಕ್ಕೆ ಯಾವುದೇ ಮುಲಾಜು ಬೇಡ. ಇನ್ನೊಂದು ವಾರದಲ್ಲಿ ಪ್ಲಾನ್ ರೆಡಿ ಆಗಬೇಕು ಎಂದು ಅಮಿತ್ ಷಾ ರಾಜ್ಯ ಬಿಜೆಪಿ ನಾಯಕರಿಗೆ ಟಾಸ್ಕ್ ನೀಡಿದ್ದಾರೆ.

ಗೃಹ ಸಚಿವ ಅಮಿತ್ ಷಾ ಬಂದ ಬಳಿಕ ರಾಜ್ಯ ಬಿಜೆಪಿಗೆ ಸರ್ಜರಿ ಆಗಲಿದೆ, ಸರಕಾರಕ್ಕೂ ಸರ್ಜರಿ ಆಗಲಿದೆ, ಹಿರಿಯರನ್ನು ಸಚಿವ ಸ್ಥಾನದಿಂದ ಕೈಬಿಟ್ಟು ಪಕ್ಷದ ಕೆಲಸಕ್ಕೆ ಹಚ್ಚಲಿದ್ದಾರೆ, ನಾಯಕರನ್ನು ಬದಲಿಸಲಿದ್ದಾರೆ ಎಂಬ ಮಾಹಿತಿಗಳಿದ್ದವು. ಆದರೆ ತಮ್ಮ ಚುನಾವಣೆ ದಾಳದ ಗುಟ್ಟು ಬಿಟ್ಟುಕೊಡದ ಅಮಿತ್ ಷಾ ಪಕ್ಷದ ಕೋರ್ ಕಮಿಟಿ ಸಭೆಯನ್ನು ನಡೆಸಿದ್ದು, ರಾಜ್ಯ ನಾಯಕರಿಗೆ ವಾರ್ನಿಂಗ್ ಮಾಡಿದ್ದಾರೆ.

ಟಾಸ್ಕ್ ನೀಡಿರುವುದಕ್ಕೆ ಪ್ರತಿಯಾಗಿ ಪಕ್ಕಾ ಪ್ಲಾನ್ ಹಾಕ್ಕೊಂಡು ರಿಪೋರ್ಟ್ ಕೊಡಿ. ಅದನ್ನು ನೋಡ್ಕೊಂಡು ಏನೇನು ಮಾಡಬೇಕು ಅನ್ನೋದನ್ನು ವಾರದ ನಂತರ ಹೇಳುತ್ತೇನೆ. ಎ.16ರ ವೇಳೆಗೆ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಬೆಂಗಳೂರು ಬರಲಿದ್ದು, ಅದನ್ನು ಜಾರಿಗೆ ತರಲಿದ್ದಾರೆ ಎಂದು ಅಮಿತ್ ಷಾ ಸೂಚ್ಯವಾಗಿ ತಿಳಿಸಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯನ್ನು ಬಹುಮತದಲ್ಲಿ ಗೆಲ್ಲುವುದೇ ಅಮಿತ್ ಷಾ ನೀಡಿರುವ ದೊಡ್ಡ ಗುರಿ. ಇದಕ್ಕಾಗಿ ಪ್ಲಾನ್ ಏನೇನು ಮಾಡುತ್ತಾರೆ ಅನ್ನೋದನ್ನು ನೋಡಿಕೊಂಡು ಸರ್ಜರಿ ನಿರ್ಧಾರ ಆಗುತ್ತೆ ಎನ್ನಲಾಗುತ್ತಿದೆ.

ಕೋರ್ ಕಮಿಟಿ ಸಭೆಯಲ್ಲಿ ಡಿಸೆಂಬರ್ ವೇಳೆಗೆ ಅವಧಿ ಪೂರ್ವ ಚುನಾವಣೆ ನಡೆಸುವ ಪ್ರಸ್ತಾಪ ಆಗಿದ್ದು ಅದಕ್ಕೆ ರಾಜ್ಯ ನಾಯಕರು ನಿರಾಕರಣೆ ಮಾಡಿದ್ದಾರೆ. ಚುನಾವಣೆಯಿಂದ ಆಗುವ ಅನಾನುಕೂಲಗಳ ಬಗ್ಗೆಯೂ ಪಕ್ಷದ ನಾಯಕರು ಮನವರಿಕೆ ಮಾಡಿದ್ದಾರೆ. ಪಕ್ಷದ ಶಾಸಕರು ಇಲ್ಲದ ಜಾಗದಲ್ಲಿ ಸೂಕ್ತ ಅಭ್ಯರ್ಥಿಗಳು ಪಕ್ಷದಲ್ಲಿ ಇಲ್ಲದ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಡೆಯಿಂದ ಶಾಸಕರನ್ನು ಸೆಳೆಯುವಂತೆಯೂ ಅಮಿತ್ ಷಾ ಟಾಸ್ಕ್ ನೀಡಿರುವುದು ರಾಜ್ಯದಲ್ಲಿ ಮತ್ತೆ ಆಪರೇಶನ್ ನಡೆಸುತ್ತಾರೆಯೇ ಎಂಬ ಕುತೂಹಲವೂ ಏಳುವಂತಾಗಿದೆ.

ರಾಜ್ಯದ ಮಟ್ಟಿಗೆ ಇಲ್ಲಿನ ಜಾತಿ ರಾಜಕಾರಣ, ಮತಗಳ ಸಮೀಕರಣದ ಬಗ್ಗೆ ಪಕ್ಕಾ ಮಾಹಿತಿ ಹೊಂದಿರುವ ಅಮಿತ್ ಷಾ ಮೊದಲೇ ಪ್ಲಾನ್ ಮಾಡಿಕೊಂಡೇ ಬಂದಿದ್ದರು. ಆದರೆ, ಇಲ್ಲಿನ ನಾಯಕರ ಅಹವಾಲು ಕೇಳುವ ಸಲುವಾಗಿ ಸಭೆಯನ್ನು ನಡೆಸಿದ್ದು, ಅದನ್ನು ಆಧರಿಸಿ ಚುನಾವಣೆ ದೃಷ್ಟಿಯಿಂದ ದಾಳವನ್ನು ಉರುಳಿಸಲಿದ್ದಾರೆ. ಅಮಿತ್ ಷಾ ದಾಳ ಏನಿರುತ್ತೆ, ಚುನವಾಣೆ ದೃಷ್ಟಿ ಇಟ್ಟುಕೊಂಡು ಪಕ್ಷದಲ್ಲಿ ಸರ್ಜರಿ ನಡೆಸುತ್ತಾರಾ ಅನ್ನೋದು ಯುಗಾದಿಯಿಂದ ವಿಷು ಆಗುವ ಹೊತ್ತಿಗೆ ಗೊತ್ತಾಗಲಿದೆ. ಎ.16ರ ವೇಳೆಗೆ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬರಲಿದ್ದು, ಅದೇ ಸಂದರ್ಭದಲ್ಲಿ ಗದಾ ಪ್ರಹಾರವೋ, ಸಾವಧಾನವೋ ಅನ್ನೋದು ತಿಳಿದುಬರಲಿದೆ.

A year ahead of the Karnataka Assembly polls, Union Home Minister Amit Shah exhorted BJP leaders to ensure that the party wins a minimum of 150 seats in the state. This was revealed by Karnataka BJP president Nalin Kumar Kateel after attending the meeting of the party's state core committee on Friday, where the induction of leaders from other political parties and strengthening the organisation was also discussed.