ಹರ್ಷ ಕೊಲೆ ಪ್ರಕರಣ ; ತ‌ನಿಖೆ ಕೈಗೆತ್ತಿಕೊಂಡ ಎನ್ಐಎ ಅಧಿಕಾರಿಗಳು, ಶಾಂತಿ ಕದಡಿ ಕೋಮು ಗಲಭೆ ಎಬ್ಬಿಸಲು ಸಂಚು, ಎನ್ಐಎ ಪ್ರಾಥಮಿಕ ವರದಿಯಲ್ಲಿ ಉಲ್ಲೇಖ ! 

02-04-22 09:11 pm       HK Desk news   ಕರ್ನಾಟಕ

ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದಲ್ಲಿ ಎನ್ಐಎ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದು ಪ್ರತ್ಯೇಕ ಎಫ್ಐಆರ್ ದಾಖಲು ಮಾಡಿದ್ದಾರೆ.

ಶಿವಮೊಗ್ಗ, ಎ.2: ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದಲ್ಲಿ ಎನ್ಐಎ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದು ಪ್ರತ್ಯೇಕ ಎಫ್ಐಆರ್ ದಾಖಲು ಮಾಡಿದ್ದಾರೆ. ಇದೇ ವೇಳೆ, ಎನ್ಐಎ ದಾಖಲಿಸಿರುವ ಎಫ್ಐಆರ್ ನಲ್ಲಿ ಹತ್ಯೆಗೆ ವೈಯಕ್ತಿಕ ದ್ವೇಷ ಕಾರಣವಲ್ಲ, ಸಮಾಜದಲ್ಲಿ ಕೋಮು ಗಲಭೆ ಎಬ್ಬಿಸುವ ಉದ್ದೇಶದಿಂದಲೇ ಕೃತ್ಯ ಎಸಗಿದ್ದರು ಎನ್ನುವ ಮಾಹಿತಿ ಉಲ್ಲೇಖ ಆಗಿದೆ. 

ಬಜರಂಗದಳ ಕಾರ್ಯಕರ್ತನನ್ನು ಕೊಂದು ಸಮಾಜದಲ್ಲಿ ದ್ವೇಷ ಜ್ವಾಲೆ ಎಬ್ಬಿಸೋದು ಕೊಲೆ ಹಿಂದಿನ ಉದ್ದೇಶವಾಗಿತ್ತು.‌ ರಾಷ್ಟ್ರೀಯ ತನಿಖಾ ದಳದ ಬೆಂಗಳೂರು ಕಚೇರಿಯಲ್ಲಿ ದಾಖಲಾದ ಎಫ್ಐಆರ್ ವರದಿಯಲ್ಲಿ ಈ ವಿಚಾರ ದಾಖಲಾಗಿದೆ. 

ಕೊಲೆಯ ಬಳಿಕ ಶಿವಮೊಗ್ಗದಲ್ಲಿ ಉದ್ವಿಗ್ನ ಸ್ಥಿತಿ ನೆಲೆಗೊಂಡು ಹಿಂಸಾಚಾರ ಉಂಟಾಗಿತ್ತು.‌ ಈ ವೇಳೆ, ತನಿಖೆ ನಡೆಸಿದ ಪೊಲೀಸರ ಪ್ರಾಥಮಿಕ ಮಾಹಿತಿಯಲ್ಲಿ ವೈಯಕ್ತಿಕ ದ್ವೇಷದಿಂದ ಕೊಲೆ ನಡೆದಿತ್ತು. ಹರ್ಷ ಮತ್ತು ಕೊಲೆ ಆರೋಪಿಗಳ ಮಧ್ಯೆ ಮೊದಲಿನಿಂದಲೂ ಜಗಳ ಇತ್ತು. ಹರ್ಷ ಪ್ರಕರಣ ಒಂದರಲ್ಲಿ ಜೈಲು ಸೇರಿದ್ದಾಗ ಹೊಡೆದಾಟ ನಡೆಸಿದ್ದು ಅದಕ್ಕಾಗಿ ಕೊಲೆ ಮಾಡಿದ್ರು ಎನ್ನಲಾಗಿತ್ತು. 

NIA raids 14 places in Jammu and Kashmir in two separate terror related  cases | India News – India TV

ಆದರೆ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕದ ಮಾಹಿತಿ ಪ್ರಕಾರ ಎನ್ಐಎ ಅಧಿಕಾರಿಗಳು ಪ್ರತ್ಯೇಕ ಎಫ್ಐಆರ್ ದಾಖಲಿಸಿದ್ದು ಕೊಲೆಯ ಹಿಂದಿನ ಕಾರಣವನ್ನು ಉಲ್ಲೇಖಿಸಿದ್ದಾರೆ. ಕೊಲೆಯ ಮೂಲಕ ಸಮಾಜದಲ್ಲಿ ಕೋಮುಗಲಭೆ ಎಬ್ಬಿಸೋದು, ಸಮಾಜದ ಸ್ವಾಸ್ಥ್ಯ ಹಾಳು ಮಾಡಿ, ಮಾರಕಾಸ್ತ್ರಗಳಿಂದ ಹಲ್ಲೆಗೈದು ಸಾರ್ವಜನಿಕರಲ್ಲಿ ಭಯವನ್ನು ಉಂಟು ಮಾಡುವ ಉದ್ದೇಶ ಹೊಂದಿದ್ದರು ಎನ್ನೋದು ಬೆಳಕಿಗೆ ಬಂದಿದೆ. ಹೀಗಾಗಿ ಆರೋಪಿಗಳ ವಿರುದ್ಧ ದೇಶದ್ರೋಹದ ಕೇಸು ದಾಖಲಿಸಿದ್ದಲ್ಲದೆ, ರಾಷ್ಟ್ರದ ಭದ್ರತೆಗೆ ಅಪಾಯ ತರುವ ಉದ್ದೇಶ ಹೊಂದಿದ್ದರಿಂದ ರಾಷ್ಟ್ರೀಯ ತನಿಖಾ ದಳ ತನಿಖೆ ಕೈಗೆತ್ತಿಕೊಂಡಿದ್ದಾಗಿ ಎಫ್ಐಆರ್ ನಲ್ಲಿ ಉಲ್ಲೇಖ ಮಾಡಲಾಗಿದೆ. ‌

ಪ್ರಕರಣದಲ್ಲಿ ಪೊಲೀಸರು ಹತ್ತು ಮಂದಿ ಆರೋಪಿಗಳನ್ನು ಬಂಧಿಸಿದ್ದು ಯುಎಪಿಎ ಕಾಯ್ದೆಯಡಿ ಸೆಕ್ಷನ್ 16, 18, 19 ಮತ್ತು 20 ಅಡಿ ಕೇಸು ದಾಖಲಿಸಿದ್ದಾರೆ. ಇದರಂತೆ, ಎನ್ಐಎ ವಿಭಾಗದ ಬೆಂಗಳೂರಿನ ಅಧಿಕಾರಿಗಳು ಶಿವಮೊಗ್ಗಕ್ಕೆ ಬಂದಿದ್ದು ಸಿಇಎನ್ ಠಾಣೆಯಿಂದ ಹೆಚ್ಚುವರಿ ಮಾಹಿತಿ ಸಂಗ್ರಹಿಸಿದ್ದಾರೆ. ‌ಎನ್ಐಎ ವಿಭಾಗದ ಇನ್ ಸ್ಪೆಕ್ಟರ್ ಶಣ್ಮುಗಂ ತನಿಖಾಧಿಕಾರಿ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

NIA officials have launched an investigation into the murder of Bajrang Dal activist Harsha and registered a separate FIR.