ಬೆಳ್ತಂಗಡಿ ಶಾಸಕನ ವಿರುದ್ಧ ದೂರಿತ್ತ ಪ್ರಕರಣಕ್ಕೆ ಟ್ವಿಸ್ಟ್ ; ಮೂವರು ಅರಣ್ಯಾಧಿಕಾರಿಗಳ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಜಾತಿನಿಂದನೆ ಕೇಸು !

08-04-22 10:52 pm       HK Desk news   ಕರ್ನಾಟಕ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಬಿಲ್ಲವ ಸಂಘಟನೆಗೆ ದೂರು ನೀಡಿ ಸಂಚಲನ ಮೂಡಿಸಿದ್ದ ಮಹಿಳಾ ಅರಣ್ಯಾಧಿಕಾರಿ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಬೆಳ್ತಂಗಡಿ, ಎ.8: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಬಿಲ್ಲವ ಸಂಘಟನೆಗೆ ದೂರು ನೀಡಿ ಸಂಚಲನ ಮೂಡಿಸಿದ್ದ ಮಹಿಳಾ ಅರಣ್ಯಾಧಿಕಾರಿ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಧರ್ಮಸ್ಥಳ ಠಾಣೆ ವ್ಯಾಪ್ತಿಯ ಕಲ್ಮಂಜ ಗ್ರಾಮದ ಕಜೆ ನಿವಾಸಿ ಐತ ಕೊರಗ ಎಂಬವರು ದೂರು ನೀಡಿದ್ದು ಅರಣ್ಯ ಇಲಾಖೆಯ ಪ್ರಕಾಶ್ ನೆಟಾಲ್ಕರ್, ಕ್ಲಿಫರ್ಡ್ ಲೋಬೊ ಮತ್ತು ಸಂಧ್ಯಾ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರುದಾರ ಐತ ಕೊರಗ ಎಂಬವರು ಕಲ್ಮಂಜ ಗ್ರಾಮದ ಕಜೆ ಎಂಬಲ್ಲಿ 2.18 ಎಕ್ರೆ ಭೂಮಿ ಹೊಂದಿದ್ದು, ಅದರಲ್ಲಿ ಹೆಬ್ಬಲಸು, ಬಣ್ಪು, ರಾಮಪತ್ರೆ, ಗೇರು ಕೃಷಿ ಹಾಗೂ ಮಾವು ಮರಗಳನ್ನು ಹೊಂದಿದ್ದರು. ಗೇರು ಕೃಷಿ ಲಾಭ ಇಲ್ಲವೆಂದು ಕಳೆದ 2021ರ ಡಿ.9ರಂದು ಗೇರು ಮರಗಳನ್ನು ಕಡಿದು ಅಡಿಕೆ ಕೃಷಿ ಮಾಡಲು ಮುಂದಾಗಿದ್ದರು. ಕಡಿದ ಗೇರು ಮರಗಳನ್ನು ಡಿ.9ರಂದು ವಾಹನದಲ್ಲಿ ಬೇರೆಡೆಗೆ ಸಾಗಿಸಲು ಯತ್ನಿಸುತ್ತಿದ್ದಾಗ ಅರಣ್ಯ ಇಲಾಖೆಯ ಅಧಿಕಾರಿಗಳಾದ ಪ್ರಕಾಶ್ ನೆಟಾಲ್ಕರ್, ಕ್ಲಿಫರ್ಡ್ ಲೋಬೊ ಮತ್ತು ಸಂಧ್ಯಾ ಎಂಬವರು ಸ್ಥಳಕ್ಕೆ ಬಂದಿದ್ದು ಕಡಿದು ಹಾಕಿದ ಮರ ಹಾಗೂ ವಾಹನವನ್ನು ಜಪ್ತಿ ಮಾಡಿದ್ದರು. ಅಲ್ಲದೆ, ಮರಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು.

ಮರುದಿನ ಅರಣ್ಯ ವಲಯ ಅಧಿಕಾರಿ ಸಂಧ್ಯಾ ಅವರು ಸ್ಥಳಕ್ಕೆ ಬಂದಿದ್ದು ಮರಗಳನ್ನು ಡಿಪೋಗೆ ಸಾಗಿಸಿದ್ದು ಮತ್ತಷ್ಟು ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದಾರೆ. ಅಲ್ಲದೆ, ಸಂಧ್ಯಾರವರು ದೂರುದಾರ ಐತ ಅವರಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೆಟಾಲ್ಕರ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೊ ಅವರಿಗೆ ಹಣ ಕೊಡಬೇಕಾಗಿದೆ. 5 ಲಕ್ಷ ರೂ. ನೀಡುವಂತೆ ಕೇಳಿದ್ದಾರೆ. ಹಣ ನೀಡಲು ಸಾಧ್ಯವಿಲ್ಲ ಎಂದಾಗ, ಕೋಪಗೊಂಡ ಸಂಧ್ಯಾರವರು ಕೊರಗ ಜಾತಿಗೆ ಸೇರಿದ ನಿಮ್ಮ ಬುದ್ಧಿಯೇ ಇಷ್ಟು.. ನಿಮಗೆ ಹೇಗೆ ಬುದ್ಧಿ ಕಲಿಸಬೇಕೆಂದು ಗೊತ್ತಿದೆ ಎಂದು ಬೆದರಿಸಿ ಜಾತಿ ನಿಂದನೆ ಮಾಡಿದ್ದಾರೆ.

ಅಲ್ಲದೆ, ಐತ ಕೊರಗ ಅವರಿಗೆ ಹಿಂಸೆ ನೀಡುವ ಉದ್ದೇಶದಿಂದ ಮೂವರು ಅಧಿಕಾರಿಗಳು ಸುಳ್ಳು ವರದಿ ತಯಾರಿಸಿ ಪ್ರಕರಣ ದಾಖಲು ಮಾಡಿದ್ದಾರೆ. ಈ ಬಗ್ಗೆ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ಮೂವರು ಅರಣ್ಯಾಧಿಕಾರಿಗಳ ವಿರುದ್ಧ ಸೆಕ್ಷನ್ 447, 506 ಹಾಗೂ ಎಸ್ಸಿ-ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಕಳೆದ ಡಿಸೆಂಬರ್ ತಿಂಗಳಲ್ಲಿ ಬಿಲ್ಲವ ಮಹಿಳಾ ಅಧಿಕಾರಿಯನ್ನು ಬೆಳ್ತಂಗಡಿ ಶಾಸಕ ಹರೀಶ ಪೂಂಜ ಗುಲ್ಬರ್ಗಕ್ಕೆ ವರ್ಗಾಯಿಸಿದ್ದು ಭಾರೀ ಸುದ್ದಿಯಾಗಿತ್ತು. ಆನಂತರ, ಈ ವಿಚಾರವನ್ನು ಟ್ರಿಬ್ಯುನಲ್ ನಲ್ಲಿ ಪ್ರಶ್ನಿಸಿ ಅರಣ್ಯಾಧಿಕಾರಿ ಮತ್ತೆ ಉಡುಪಿಯಲ್ಲೇ ತನ್ನ ಸ್ಥಾನ ಉಳಿಸಿಕೊಂಡಿದ್ದರು. ಇದರಿಂದ ಬೆಳ್ತಂಗಡಿ ಶಾಸಕರಿಗೂ ಮುಖಭಂಗ ಆಗಿತ್ತು. ಇದೀಗ ಹಳೆ ಪ್ರಕರಣದಲ್ಲಿ ಅಧಿಕಾರಿ ವಿರುದ್ಧ ಜಾತಿ ನಿಂದನೆ ಕೇಸು ದಾಖಲಾಗಿದ್ದು, ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.

Belthangady caste abuse case filed against Lady forest officer Sadhya Sachin's in Dharmasthala